ಮೈಸೂರು: ಹೊರ ರಾಜ್ಯಗಳ ಲೋಕಸಭಾ ಚುನಾವಣೆಗೆ (Lok Sabha Election 2024) ನನ್ನನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಿದ್ದಾರೆ. ಸಾಮಾನ್ಯವಾಗಿ ನಾನು ಹೊರ ರಾಜ್ಯಗಳಿಗೆ ಹೋಗಲ್ಲ. ನನಗೆ ಅದು ಇಷ್ಟವೂ ಆಗುವುದಿಲ್ಲ. ಇಲ್ಲೇ ಬೇಕಾದಷ್ಟು ಕೆಲಸ ಇದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆದರೆ, ನನ್ನನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಿಯಾಗಿದೆ. ಜತೆಗೆ ಹೈಕಮಾಂಡ್‌ನವರು ಪ್ರಚಾರಕ್ಕೆ ಬರುವಂತೆ ಕರೆದಿದ್ದಾರೆ. ಪ್ರಚಾರಕ್ಕೆ ಹೋಗಲು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ ಎಂದು ಹೊರ ರಾಜ್ಯಗಳಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ನಮ್ಮ ಸರ್ಕಾರ ಸುಭದ್ರವಾಗಿದೆ. ಹೊರಗೂ, ಒಳಗೂ ಭಿನ್ನಮತ ಇಲ್ಲ. ಒಳಜಗಳ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಇಷ್ಟೊಂದು ಒಗ್ಗಟ್ಟಿನಿಂದ ಕೆಲಸ ಮಾಡಲು ಆಗುತ್ತಿತ್ತಾ? ಸರ್ಕಾರ ಸುಭದ್ರವಾಗಿದೆ. ಇನ್ನೂ ಏಕನಾಥ್ ಶಿಂಧೆ ಸರ್ಕಾರ ಇರುತ್ತದೆಯೋ? ಇಲ್ಲವೋ ನೋಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿಗೆ ಸಿಎಂ ತಿರುಗೇಟು
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.
ಇದನ್ನೂ ಓದಿ: HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!
ಎಂಎಲ್‌ಸಿ ಚುನಾವಣೆಯಲ್ಲಿ ಉತ್ತಮ ವಾತಾವರಣ
ಎಂಎಲ್‌ಸಿ ಚುನಾವಣೆಯಲ್ಲಿ ನಮಗೆ ವಾತಾವರಣ ಉತ್ತಮವಾಗಿದೆ. ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿ ಘೋಷಿಸಿದ್ದೇವೆ. ಇದರಿಂದ ಮತ ಕೇಳಲು ಸಮಯ ಸಿಕ್ಕಿದೆ. ಮೈತ್ರಿಯಿಂದ ನಮಗೆ ಎಫೆಕ್ಟ್ ಆಗಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲೂ ಮೈತ್ರಿ ಆಗಿತ್ತು. ಆದರೆ, ನಮಗೆ ಯಾವುದೇ ಪರಿಣಾಮ ಆಗಲಿಲ್ಲ. ಈ ಚುನಾವಣೆಯಲ್ಲಿ ಪದವೀಧರರು, ಶಿಕ್ಷಕರು, ಮತದಾರರು ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಯಾವುದು ಸರಿ, ಸರಿಯಲ್ಲ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಕೇಂದ್ರ ಸರ್ಕಾರ 10 ವರ್ಷದಲ್ಲಿ ಏನೂ ಮಾಡಿಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನು ತುಲನೆ ಮಾಡುವ ಶಕ್ತಿ ಮತದಾರರಿಗೆ ಇದೆ ಎಂದು ಹೇಳಿದರು.