Site icon Vistara News

IED Blast: ಎರಡನೇ ಹಂತದ ಮತದಾನಕ್ಕೆ ದಿನಗಣನೆ; ಮಣಿಪುರದ ಸೇತುವೆ ಮೇಲೆ ಐಇಡಿ ಸ್ಫೋಟ

IED Blast

IED Blast

ಇಂಫಾಲ: ಎರಡನೇ ಹಂತದ ಮತದಾನ ನಡೆಯಲು ಎರಡೇ ದಿನ ಬಾಕಿ ಉಳಿದಿದ್ದು, ಮಣಿಪುರದ ಇಂಫಾಲ ಮತ್ತು ನಾಗಾಲ್ಯಾಂಡ್‌ನ ದಿಮಾಪುರವನ್ನು ಸಂಪರ್ಕಿಸುವ ಸೇತುವೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದೆ (IED Blast). ರಾಷ್ಟ್ರೀಯ ಹೆದ್ದಾರಿ 2ರ ಮಣಿಪುರದ ಕುಬ್ರುನಲ್ಲಿರುವ ಸೇತುವೆ ವೇಳೆ ಈ ಸ್ಫೋಟ ನಡೆದಿದೆ. ʼʼಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮಧ್ಯಮ ತೀವ್ರತೆಯ ಸ್ಫೋಟ ನಡೆದು ಸೇತುವೆಗೆ ಹಾನಿ ಉಂಟಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಮಂಗಳವಾರ ಮಧ್ಯರಾತ್ರಿ 12.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಪೊಲೀಸರ ಪ್ರಕಾರ, ಸ್ಫೋಟದ ಪರಿಣಾಮವಾಗಿ ಸೇತುವೆಯ ಮಧ್ಯದಲ್ಲಿ ಮೂರು ಕುಳಿಗಳು, ಎರಡೂ ತುದಿಗಳಲ್ಲಿ ಬಿರುಕುಗಳು ಉಂಟಾಗಿವೆ. ಮತದಾನಕ್ಕೆ ದಿನಗಣನೆ ಇರುವಾಗ ಸಂಭವಿಸಿದ ಈ ಸ್ಫೋಟ ಆತಂಕ ಹೆಚ್ಚಿಸಿದೆ.

ʼʼಈವರೆಗೆ ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಘಟನೆಯ ಸಮಗ್ರ ತನಿಖೆ ನಡೆಸಲಾಗುತ್ತಿದೆʼʼ ಎಂದು ಅಧಿಕಾರಿಗಳು ಹೇಳಿದ್ದಾರೆ. ಭದ್ರತಾ ಪಡೆಗಳು ಹತ್ತಿರದ ಪ್ರದೇಶಗಳನ್ನು ಸುತ್ತುವರಿದಿದ್ದು, ಬಿಗಿ ತಪಾಸಣೆ ಕೈಗೊಳ್ಳಲಾಗಿದೆ. ಆದಾಗ್ಯೂ ಕೆಲವು ದ್ವಿಚಕ್ರ ವಾಹನಗಳು ಇಂದು ಬೆಳಿಗ್ಗೆ ಸೇತುವೆಯ ಮೇಲೆ ಚಲಿಸುತ್ತಿರುವುದು ಕಂಡುಬಂದಿದೆ.

ಮತದಾನದ ವೇಳೆ ಸಂಘರ್ಷ

ಶುಕ್ರವಾರ (ಏಪ್ರಿಲ್‌ 19) ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮಣಿಪುರದಲ್ಲಿ ಗುಂಡಿನ ದಾಳಿ ನಡೆದಿತ್ತು. ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯ ಮೊಯಿರಂಗ್ಕಂಪು ಸಜೆಬ್‌ನಲ್ಲಿ ಈ ಘಟನೆ ನಡೆದಿತ್ತು. ಗುಂಡಿನ ದಾಳಿಯ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿ ಬಂಧಿಸಲಾಗಿತ್ತು. ಬಂಧಿತರಿಂದ ಒಂದು ಪಿಸ್ತೂಲ್, ಮದ್ದುಗುಂಡು ಮತ್ತು 1.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ವೇಳೆ ಗುಂಡಿನ ದಾಳಿ ನಡೆಸಿದ್ದ ಮೂವರ ಬಂಧನ

ಗುಂಡಿನ ದಾಳಿ ಮತದಾನದ ಹಕ್ಕನ್ನು ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ಮತದಾರರಲ್ಲಿ ಭೀತಿಯನ್ನುಂಟು ಮಾಡಿತ್ತು. ಮತದಾನ ಪ್ರದೇಶದಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಸಾವು ನೋವು ವರದಿಯಾಗಿಲ್ಲ. ಮಣಿಪುರದಲ್ಲಿ ಶೇ. 68ರಷ್ಟು ಮತದಾನವಾಗಿದೆ.

Exit mobile version