Site icon Vistara News

‌Lok Sabha Election 2024: ಮಂಡ್ಯದಲ್ಲಿ ಎಚ್‌ಡಿಕೆಗೆ ಕಾಂಗ್ರೆಸ್‌ ಟಕ್ಕರ್; ರಮ್ಯಾ ರೋಡ್‌ ಶೋ, ರಾಹುಲ್‌ ಸಮಾವೇಶಕ್ಕೆ ಪ್ಲ್ಯಾನ್‌!

Lok Sabha Election 2024 Actress Ramya and Rahul Gandhi to campaign for Congress in Mandya

ಮಂಡ್ಯ: ಲೋಕಸಭಾ ಚುನಾವಣಾ (‌Lok Sabha Election 2024) ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದು, ಮತ ಗಳಿಕೆಗೆ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನು ಕರ್ನಾಟಕದ ಮಟ್ಟಿಗೆ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದತ್ತ (Mandya Lok Sabha constituency) ಎಲ್ಲರ ದೃಷ್ಟಿ ನೆಟ್ಟಿದೆ. ಇಲ್ಲೀಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಬ್ಯುಲ್ಡರ್‌ ಸ್ಟಾರ್‌ ಚಂದ್ರು (Star Chandru) ಕಣಕ್ಕಿಳಿದಿದ್ದರೆ, ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುತ್ತಿದ್ದಾರೆ. ಈಗ ಎಚ್‌ಡಿಕೆ ಮಣಿಸಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದ್ದು, ಮಂಡ್ಯಕ್ಕೆ ಮೋಹಕ ತಾರೆ ರಮ್ಯಾ (Actress Ramya) ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರನ್ನು ಕರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದಾರೆ.

ಯುಗಾದಿ ನಂತರ ಪ್ರಚಾರ ಕಾರ್ಯದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಹೀಗಾಗಿ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಏ. 16 ಅಥವಾ 17ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಈ ಬಗ್ಗೆ ಬುಧವಾರದೊಳಗೆ ದಿನಾಂಕ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನಾಲ್ಕು ಸುತ್ತಿನ ಚುನಾವಣಾ ಪ್ರಚಾರವನ್ನು ಕಾಂಗ್ರೆಸ್ ನಾಯಕರು ಮುಗಿಸಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ನಾಯಕರನ್ನು ಕರೆತರುವ ಪ್ಲ್ಯಾನ್‌ ಅನ್ನು ಮಾಡಲಾಗಿದೆ.

ಬರಲಿದ್ದಾರೆ ಮೋಹಕ ತಾರೆ ರಮ್ಯಾ!

ಇನ್ನು ಮಂಡ್ಯದ ಮಾಜಿ ಸಂಸದೆ, ಮೋಹಕ ತಾರೆ ಖ್ಯಾತಿಯ ರಮ್ಯಾ ಅವರು ಮಂಡ್ಯದ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಶಾಸಕ ಗಣಿಗ ರವಿಕುಮಾರ್ ಅವರು ರಮ್ಯಾ ಜತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಂಡ್ಯದಲ್ಲಿ ರಮ್ಯಾ ರೋಡ್‌ ಶೋ ನಡೆಸಲು ಪ್ಲ್ಯಾನ್‌ ಮಾಡಲಾಗಿದೆ. ಇದರಿಂದ ಪಡ್ಡೆ ಹುಡುಗರ ಆದಿಯಾಗಿ, ಮಹಿಳೆಯರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ.

ರಾಹುಲ್‌ ಗಾಂಧಿ ಬೃಹತ್‌ ಸಮಾವೇಶಕ್ಕೆ ಸಿದ್ಧತೆ

ಈಗಾಗಲೇ ಮಂಡ್ಯದಲ್ಲಿ ದಳಪತಿಗಳ ವಿರುದ್ಧ ತೊಡೆ ತಟ್ಟಿರುವ ಮಂಡ್ಯ ಉಸ್ತುವಾರಿ ಸಚಿವ ಎನ್.‌ ಚಲುವರಾಯಸ್ವಾಮಿ, ಶತಾಯಗತಾಯ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮಣಿಸಬೇಕು ಎಂದು ಪಣ ತೊಟ್ಟಿದ್ದಾರೆ. ಈ ಸಂಬಂಧ ರಾಹುಲ್‌ ಗಾಂಧಿ ಅವರನ್ನು ಕರೆಸಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಈಗಾಗಲೇ ರಾಹುಲ್‌ ಗಾಂಧಿ ಅವರ ಸಮಯಾವಕಾಶವನ್ನು ಕೇಳಲಾಗಿದ್ದು, ಶೀಘ್ರದಲ್ಲಿ ದಿನಾಂಕ ಅಂತಿಮವಾಗಲಿದೆ ಎನ್ನಲಾಗಿದೆ. ಸಮಾವೇಶ ನಿಗದಿಯಾದರೆ ಸರಿಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಲು ಪ್ಲ್ಯಾನ್‌ ಮಾಡಲಾಗಿದೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನು ಸಹ ಮತ್ತೊಂದು ಸುತ್ತು ಪ್ರಚಾರಕ್ಕೆ ಕರೆಸಿಕೊಳ್ಳಲು ಸ್ಥಳೀಯ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ. ಮಂಡ್ಯ ಭಾಗದಲ್ಲಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಹೀಗಾಗಿ ಇದನ್ನು ಮತಗಳಾಗಿ ಪರಿವರ್ತನೆ ಮಾಡಲು ಕಾಂಗ್ರೆಸ್‌ ರಣತಂತ್ರವನ್ನು ರೂಪಿಸುತ್ತಿದೆ.

ಸುಮಲತಾ ಬಗ್ಗೆ ಗಣಿಗ ರವಿ ವ್ಯಂಗ್ಯ!

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಸಕ್ರಿಯವಾಗಿ ಓಡಾಡುತ್ತಿರುವ, ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿರುವ ರವಿಕುಮಾರ್‌ ಗಣಿಗ ಅವರು ಸುಮಲತಾ ಅಂಬರೀಶ್‌ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಪರ ಸುಮಲತಾ ಅಂಬರೀಶ್‌ ಪ್ರಚಾರ ನಡೆಸಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್‌ ಗಣಿಗ, ಅಣ್ಣ-ತಂಗಿ ಅಲ್ವಾ? ಸುಮಲತಾ ಪ್ರಚಾರ ಮಾಡ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಈಗ ಮಂಡ್ಯದಲ್ಲಿ ಅಕ್ಕ-ತಮ್ಮ ಒಂದಾಗಿದ್ದಾರೆ. ನಾವು ಯಾಕೆ ಮಾತನಾಡೋದು? ಕಳೆದ ಚುನಾವಣೆಯಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ದರೆ, ಚೆನ್ನಾಗಿರೋದು‌. ಹೋದ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲವೆಂದು ಸುಮಲತಾ ಹೇಳುತ್ತಿದ್ದಾರೆ. ನಾನೇ ಗೆದ್ದೆ ಅಂತಿದ್ದಾರೆ. ಅದು ಮುಗಿದ ಅಧ್ಯಾಯ. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದು ರವಿಕುಮಾರ್‌ ಗಣಿಗ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 14ಕ್ಕೆ ಮೋದಿ ರೋಡ್‌ ಶೋ; ರೆಡಿಯಾಗಿದೆ 4 ರೂಟ್‌ಮ್ಯಾಪ್‌!

ಅಂಬರೀಶ್‌ ಅವರ ಅಭಿಮಾನಿಗಳು ಎಚ್.ಡಿ. ಕುಮಾರಸ್ವಾಮಿ ಪರ ಕೆಲಸ ಮಾಡ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್‌ ಗಣಿಗ, ಅಂಬರೀಶ್‌ ಅಭಿಮಾನಿಗಳ ರಕ್ತ, ದೇಹ, ಮನಸ್ಸು ಕಾಂಗ್ರೆಸ್ ಆಗಿದೆ. ಅವರ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಆಗಿಯೇ ಇದ್ದರು. ಅವರನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಅಕ್ಕ-ತಮ್ಮನ ನಡುವೆ ನಡೆದ ದಾಯಾದಿ ಕಲಹ ಮರೆತು ಹೋಗಿದ್ದಾರಾ? ತಮ್ಮ ಅಕ್ಕನಿಗೆ ಕೊಟ್ಟ ಕಾಟವನ್ನು ಅಂಬಿ ಅಭಿಮಾನಿಗಳು ಮರೆಯುತ್ತಾರಾ? ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇರುತ್ತಾರೆ. 2 ಲಕ್ಷ ಮತಗಳ ಅಂತರದಿಂದ ಸ್ಟಾರ್ ಚಂದ್ರು ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದ್ದಾರೆ.

Exit mobile version