Site icon Vistara News

Lok Sabha Election 2024: ಡಿಕೆ ಬ್ರದರ್ಸ್‌ ಕೋಟೆಗೆ ಲಗ್ಗೆ ಇಡಲಿರುವ ಅಮಿತ್ ಶಾ; ಏ. 2ಕ್ಕೆ ರೋಡ್‌ ಶೋ

Lok Sabha Election 2024 Amit Shah Entry to DK Shivakumar fort and Road show on April 2

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಯಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಕರ್ನಾಟಕದ ಮಟ್ಟಿಗೆ ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಫೈನಲ್‌ ಆಗಿದ್ದಾರೆ. ಈಗಾಗಲೇ ಕೆಲವರು ನಾಮಪತ್ರವನ್ನು ಸಲ್ಲಿಸಿ ಪ್ರಚಾರಕ್ಕೂ ಇಳಿದಿದ್ದಾರೆ. ಇನ್ನು ಮುಂದೆ ಪ್ರಚಾರದ ಅಬ್ಬರ ಪ್ರಾರಂಭವಾಗಲಿದೆ. ಕೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಆಗಮಿಸಿ ಮತದಾರರ ಮನ ಸೆಳೆಯಲು ಪ್ರಯತ್ನ ಮಾಡಲಿದ್ದಾರೆ. ಸೆಲೆಬ್ರಿಟಿಗಳನ್ನೂ ಕರೆಸಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗ ಚುನಾವಣೆ ಘೋಷಣೆಯಾದ ಮೇಲೆ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಕೋಟೆಗೆ ಲಗ್ಗೆ ಇಡಲಿದ್ದಾರೆ. ಏ. 2ರಂದು ಅಮಿತ್ ಶಾ ಅವರು ಚುನಾವಣಾ ಪ್ರಚಾರವನ್ನು ಆರಂಭ ಮಾಡಲಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ (V Sunil kumar) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಅಮಿತ್‌ ಶಾ ಅವರು ಏಪ್ರಿಲ್‌ 2 ರಂದು ಇಡೀ ದಿನ ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ. ಶಾ ಅವರ ಪ್ರಚಾರ ನಮಗೆ ಉತ್ಸಾಹ ತರಲಿದೆ. ಚನ್ನಪಟ್ಟಣದಿಂದ ಅಂದು ಅಮಿತ್‌ ಶಾ ಅವರ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಸಂಸದ ಡಿ.ಕೆ. ಸುರೇಶ್‌ (DK Suresh) ಅವರು ದೇಶ ವಿಭಜನೆ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಎಂದರೆ ದೇಶವನ್ನು ವಿಭಜನೆ ಮಾಡೋದು. ಆದರೆ, ನಾವು ಬಿಜೆಪಿಯವರು ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸುನಿಲ್‌ ಕುಮಾರ್ ಹೇಳಿದರು.

ಅಮಿತ್‌ ಶಾ ಅವರ ಟೂರ್‌ ಪ್ಲ್ಯಾನ್‌ ಏನು?

“ಧನ್ಯವಾದ ಮೋದಿ” 40 ದಿನಗಳ ಅಭಿಯಾನ

ಕರ್ನಾಟಕದ ಕೊಡುಗೆಯನ್ನು ಗುರುತಿಸಿ ವಿಡಿಯೊ ಮೂಲಕ “ಧನ್ಯವಾದ ಮೋದಿ” ಕಾರ್ಯಕ್ರಮವನ್ನು ನಡೆಸಿಕೊಡಲಿದ್ದೇವೆ. ಮುಂದಿನ 40 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ನಮ್ಮ ಗುರಿ ಎಂದು ವಿ. ಸುನಿಲ್‌ ಕುಮಾರ್‌ ಮಾಹಿತಿ ನೀಡಿದರು.

ಏಪ್ರಿಲ್‌ 26 ರಂದು ಮೊದಲ ಹಂತದ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಗುರುವಾರದಿಂದ ಆರಂಭವಾಗಿದೆ. ಬಿಜೆಪಿಯ 14 ಅಭ್ಯರ್ಥಿಗಳಿಂದ ತಯಾರಿ ಆಗಿದೆ. 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪ್ರಮುಖರ ತಂಡ ಭಾಗಿಯಾಗಲಿದೆ. ಇದು ವಿಜಯದ ನಾಮಪತ್ರವಾಗಬೇಕಿದೆ. ಹೀಗಾಗಿ ಪ್ರತಿಯೊಬ್ಬರ ನಾಮಪತ್ರ ಸಲ್ಲಿಕೆ ವೇಳೆಯೂ ಎರಡೂ ಪಕ್ಷದ ಪ್ರಮುಖರನ್ನು ಕಳುಹಿಸಲಾಗುವುದು ಎಂದು ವಿ. ಸುನಿಲ್‌ ಕುಮಾರ್‌ ಮಾಹಿತಿ ನೀಡಿದರು.

ಏಪ್ರಿಲ್‌ 1ರಂದು ಪಿ.ಸಿ. ಮೋಹನ್‌ ಉಮೇದುವಾರಿಕೆ

ಏಪ್ರಿಲ್ 1 ರಂದು ಪಿ.ಸಿ ಮೋಹನ್ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕೆ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಅರವಿಂದ್ ಲಿಂಬಾವಳಿ ಭಾಗಿಯಾಗಲಿದ್ದಾರೆ. ಬನ್ನಪ್ಪ ಪಾರ್ಕ್‌ನಿಂದ ಬಿಬಿಎಂಪಿವರೆಗೂ ಮೆರವಣಿಗೆಯನ್ನು ನಡೆಸಲಾಗುವುದು ಎಂದು ವಿ. ಸುನಿಲ್‌ ಕುಮಾರ್‌ ಹೇಳಿದರು.

ಏಪ್ರಿಲ್‌ 3ರಂದು ಒಡೆಯರ್‌ ಸೇರಿ ಹಲವರಿಂದ ನಾಮಪತ್ರ

ಏಪ್ರಿಲ್ 3ರಂದು ಮೈಸೂರಿನ ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಸಲಿದ್ದಾರೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಅಂದೇ ಚಾಮರಾಜನಗರದಿಂದ ಬಾಲರಾಜ್ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ಏ. 4ರಂದು ಡಾ. ಸಿ.ಎನ್.‌ ಮಂಜುನಾಥ್‌ ನಾಮಪತ್ರ ಸಲ್ಲಿಕೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಏ. 4ರಂದು ಡಾ. ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಅವರು ಅಂದೇ ನಾಮಪತ್ರ ಸಲ್ಲಿಸಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ. ಸುಧಾಕರ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ವಿ. ಸುನಿಲ್‌ ಕುಮಾರ್‌ ಮಾಹಿತಿ ನೀಡಿದರು.

Exit mobile version