Site icon Vistara News

Lok Sabha Election 2024: ಮೋದಿ ಇದ್ದ ಸಭೆಯಲ್ಲಿ ಅನಂತ್‌ ಕುಮಾರ್‌ ಹೆಗಡೆ, ಪ್ರತಾಪ್‌ ಸಿಂಹ ಬಗ್ಗೆ ಚರ್ಚೆ! ಅಶೋಕ್‌ ಹೇಳಿದ್ದೇನು?

Lok Sabha Election 2024 Anant Kumar Hegde and Pratap Simha name discussed in BJP CEC

ನವ ದೆಹಲಿ: ಕೇಂದ್ರದ ನಾಯಕರು ನಮ್ಮೆಲ್ಲರ ಅಭಿಪ್ರಾಯವನ್ನು ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಹ ಭಾಗಿಯಾಗಿದ್ದ ಕಾರಣ ಇದೇ ಅಂತಿಮ ಸಭೆಯಾಗಿದೆ. ಲೋಕಸಭಾ ಚುನಾವಣೆ ಸಂಬಂಧ (Lok Sabha Election 2024) 28 ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ. ಯಾವ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಅಲ್ಲದೆ, ಹಾಲಿ ಸಂಸದರಾದ ಪ್ರತಾಪ್ ಸಿಂಹ (Pratap Sihma), ಅನಂತ್ ಕುಮಾರ್ ಹೆಗಡೆ (Ananth Kumar Hegde) ಬಗ್ಗೆ ಚರ್ಚೆಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok) ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಕೆಲವು ಸಂಸದರು ನಿವೃತ್ತಿ ಘೋಷಿಸಿದ್ದಾರೆ. ಸಹಜವಾಗಿ ಬದಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಜತೆಗೆ ಹಾಲಿ ಸಂಸದರಾದ ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗಡೆ ಬಗ್ಗೆ ಚರ್ಚೆಯಾಗಿದೆ. ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಹಾಲಿ ಸಂಸದರು ವಿಶ್ವಾಸ ಕಳೆದುಕೊಳ್ಳುವುದು ಬೇಡ. ಕಡೇ ಕ್ಷಣದವರೆಗೆ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ಯದುವೀರ್‌ ಒಡೆಯರ್‌ ಸ್ಪರ್ಧೆ ಬಗ್ಗೆ ಗೊತ್ತಿಲ್ಲ

ಇನ್ನು ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್‌ ಸಿಂಹ ಬದಲಿಯಾಗಿ ಯದುವೀರ್‌ ಒಡೆಯರ್‌ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯುದುವೀರ್ ಅವರನ್ನು ಸಂಪರ್ಕಿಸಿಲ್ಲ. ಬೇರೆ ಯಾರು ಸಂಪರ್ಕ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಆರ್.‌ ಅಶೋಕ್‌ ಹೇಳಿದ್ದಾರೆ.

ಕೆಆರ್‌ಎಸ್‌ ಬರಿದು ಮಾಡಿದ ಕಾಂಗ್ರೆಸ್

‌ಕಾಂಗ್ರೆಸ್‌ನವರು ತಮ್ಮ ರಾಜಕೀಯಕ್ಕಾಗಿ ತಮಿಳುನಾಡಿಗೆ ನೀರು ಹರಿಸಿ ಕೆಆರ್‌ಎಸ್ ಅನ್ನು ಬರಿದು ಮಾಡಿದ್ದಾರೆ. ಇಂಡಿಯಾ ಒಕ್ಕೂಟದ ಭಾಗಿ ಎಂಬ ಕಾರಣಕ್ಕೆ ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸಿದ್ದಾರೆ. ಇದರಿಂದ ಈಗ ಬೆಂಗಳೂರಿನಲ್ಲಿ ನೀರಿನ ಕೊರತೆ ಸೃಷ್ಟಿಯಾಗಿದೆ. ನೀರಿನ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೀರಿನ ಕೊರತೆ ಇಲ್ಲ ಎನ್ನುವುದಾದರೆ ಹೆಚ್ಚು ನೀರನ್ನು ಪಂಪ್ ಮಾಡಿಲಿ. ನೀರು ಇದ್ದರೆ ಬೆಂಗಳೂರಿಗೆ ನೀರು ಕೊಡಿ. ರಾಜ್ಯ ಸರ್ಕಾರಕ್ಕೆ ಇದು ನನ್ನ ಸವಾಲು ಎಂದು ಆರ್.‌ ಅಶೋಕ್‌ ಗುಡುಗಿದರು.

ಇದನ್ನೂ ಓದಿ: Lok Sabha Election 2024: ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ; ರೆಬೆಲ್‌ ಆಗ್ತಾರಾ ಡಿ.ವಿ. ಸದಾನಂದಗೌಡ?

ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ವೈಯಕ್ತಿಕ

ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಬಿಜೆಪಿಗೂ ಸಂಬಂಧ ಇಲ್ಲ. ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಆರ್.‌ ಅಶೋಕ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version