ಮೈಸೂರು/ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ (Voting) ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಹಲವು ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಅಲ್ಲದೆ, ಈಗಾಗಲೇ ಮತದಾನ ನಡೆಯುವ ದಿನ ಸರ್ಕಾರಿ ಕಚೇರಿಗಳ ಸಹಿತ ಐಟಿ ಬಿಟಿ ಕಂಪನಿಗಳಲ್ಲೂ ವೇತನ ಸಹಿತ ರಜೆ ನೀಡಲಾಗಿದೆ. ಈಗ ಮೈಸೂರಿನಲ್ಲಿ ಸಹ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಏ. 26ರಂದು ಮೈಸೂರು ಅರಮನೆ (Mysore Palace) ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮತ ಚಲಾವಣೆ ಮಾಡಿ ಬಂದಿರಬೇಕು ಎಂದು ಸೂಚನೆ ನೀಡಿದ್ದಾರೆ. ಇಲ್ಲದಿದ್ದರೆ ಪ್ರವೇಶವನ್ನು ನಿರಾಕರಣೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.
ಮತ ಹಾಕದೆ ಮೈಸೂರು ಅರಮನೆ ನೋಡಲು ಬಂದವರಿಗೆ ನೋ ಎಂಟ್ರಿ ಬೋರ್ಡ್ ಅನ್ನು ನೇತುಹಾಕಲಾಗುವುದು. ಏ. 26ರ ಮತದಾನದ ದಿನಕ್ಕೆ ಮಾತ್ರ ಈ ನಿರ್ಬಂಧ ಅನ್ವಯವಾಗಲಿದೆ. 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಇದು ಅನ್ವಯವಾಗಲಿದೆ. ಮತ ಹಾಕದೆ ಅರಮನೆ ನೋಡಲು ಬಂದರೆ ಪ್ರವೇಶ ನಿರಾಕರಿಸಲು ಚಿಂತನೆ ನಡೆಸಲಾಗಿದೆ. ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.
ಏಪ್ರಿಲ್ 26ರಂದು ಬೆಂಗಳೂರಲ್ಲಿ ಐಟಿ ಕಂಪನಿಗಳಿಗೆ ಕಡ್ಡಾಯ ರಜೆ; ತುಷಾರ್ ಗಿರಿನಾಥ್ ಆದೇಶ
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿವೆ. ಎಲ್ಲ ಕಡೆಯೂ ಮತ ಬೇಟೆ ಭರದಿಂದ ಸಾಗಿದೆ. ಇನ್ನು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ಈ ದಿನ (Voting Day) ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಇನ್ನು ಐಟಿ – ಬಿಟಿ (IT BT Sector) ಮಂದಿ ಮತದಾನದ ವೇಳೆ ಹಿಂದೇಟು ಹಾಕಬಾರದು. ಎಲ್ಲರೂ ಮತ ಚಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಂದು ಕಡ್ಡಾಯವಾಗಿ ರಜೆ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (Tushar Girinath) ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ಮತದಾನದ ದಿನದಂದು ಸಂಬಳ ಸಹಿತ ರಜೆ ನೀಡಲು ಐಟಿ ಕಂಪನಿಗಳು ಸಹ ಒಪ್ಪಿಗೆ ನೀಡಿವೆ.
ಮತದಾನ ಸಂಬಂಧ ಐಟಿಬಿಟಿ ಕಂಪನಿಗಳಿಗೆ ಬಿಬಿಎಂಪಿಯಿಂದ ಆದೇಶವನ್ನು ರವಾನೆ ಮಾಡಲಾಗಿದೆ. ಮತದಾನದ ದಿನ ಕಂಪನಿಗಳು ಕಡ್ಡಾಯವಾಗಿ ರಜೆ ನೀಡಬೇಕು. ಸಿಬ್ಬಂದಿ ಮತದಾನ ಮಾಡುವ ಸಂಬಂಧ ರಜೆಯನ್ನು ಕೊಡಬೇಕು. ಈಗಾಗಲೇ ರಾಜ್ಯ ಸರ್ಕಾರ ಕೂಡ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಮತದಾನ ಹೆಚ್ಚಳ ಸಂಬಂಧ ಐಟಿ ಬಿಟಿ ಕಂಪನಿಗಳ ಜತೆಗೆ ಬಿಬಿಎಂಪಿ ಮಂಗಳವಾರ (ಏಪ್ರಿಲ್ 16) ಸಭೆ ನಡೆಸಲಾಗಿದೆ. ಸಭೆ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅಲ್ಲದೆ, ತಮ್ಮ ತಮ್ಮ ನೌಕರರು ತಪ್ಪದೇ ಮತದಾನ ಮಾಡಲು ಯಾವ ರೀತಿ ಪ್ರೋತ್ಸಾಹವನ್ನು ನೀಡಬಹುದು ಎಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗಳನ್ನು ನಡೆಸಲಾಗಿತ್ತು.
ಒಪ್ಪಿದ ಐಟಿ ಬಿಟಿ ಕಂಪನಿಗಳು
ಬಳಿಕ ಮತದಾನದ ದಿನದಂದು ಸಂಬಳ ಸಹಿತ ರಜೆ ನೀಡಲು ಐಟಿ ಕಂಪನಿಗಳು ಒಪ್ಪಿಗೆ ನೀಡಿದ್ದವು. ಈ ಹಿನ್ನೆಲೆಯಲ್ಲಿ 5 ಸಾವಿರಕ್ಕೂ ಅಧಿಕ ಐಟಿ ಬಿಟಿ ಕಂಪನಿಗಳು ಬಿಬಿಎಂಪಿ ಮನವಿಗೆ ಸ್ಪಂದಿಸಿದ್ದವು. ಹೀಗಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಕರ್ನಾಟಕದಲ್ಲಿ ಮತದಾನ ನಡೆಯುವ 2 ದಿನವೂ ಸಾರ್ವತ್ರಿಕ ರಜೆ ಘೋಷಣೆ
ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಈಗಾಗಲೇ ಆದೇಶಿಸಿದ್ದಾರೆ.
ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದರೆ, 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದರು.
ದೇಶದಲ್ಲಿ ಏಳು ಹಂತದಲ್ಲಿ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ತಲಾ 14 ಜಿಲ್ಲೆಗಳಂತೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಏಪ್ರಿಲ್ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ
1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5..ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)\
ಎರಡನೇ ಹಂತದ ಮತದಾನದ ವಿವರ ಹೀಗಿದೆ
ಚುನಾವಣೆ ಘೋಷಣೆ: ಮಾರ್ಚ್ 16
ಗಜೆಟ್ ನೋಟಿಫಿಕೇಶನ್: ಮಾರ್ಚ್ 28
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್ 04
ನಾಮಪತ್ರ ಪರಿಶೀಲನೆ: ಏಪ್ರಿಲ್ 05
ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್ 08
ಮತದಾನದ ದಿನಾಂಕ: ಏಪ್ರಿಲ್ 26, ಶುಕ್ರವಾರ
ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ
1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ)
8,ಕೊಪ್ಪಳ (ಸಾಮಾನ್ಯ)
9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
10. ಹಾವೇರಿ (ಸಾಮಾನ್ಯ)
11. ಧಾರವಾಡ (ಸಾಮಾನ್ಯ)
12.ಉತ್ತರ ಕನ್ನಡ (ಸಾಮಾನ್ಯ)
13.ದಾವಣಗೆರೆ (ಸಾಮಾನ್ಯ)
14.ಶಿವಮೊಗ್ಗ (ಸಾಮಾನ್ಯ)
ಎರಡನೇ ಹಂತದ ಮತದಾನದ ವಿವರ ಹೀಗಿದೆ
ಚುನಾವಣೆ ಘೋಷಣೆ: ಮಾರ್ಚ್ 16
ಗಜೆಟ್ ನೋಟಿಫಿಕೇಶನ್: ಏಪ್ರಿಲ್ 12
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್ 19
ನಾಮಪತ್ರ ಪರಿಶೀಲನೆ: ಏಪ್ರಿಲ್ 20
ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್ 22
ಮತದಾನದ ದಿನಾಂಕ: ಮೇ 07, ಮಂಗಳವಾರ
ಈಗ ರಾಜ್ಯದ ರಾಜಕೀಯ ಸ್ಥಿತಿ ಗತಿ ಹೇಗಿದೆ?
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲ ಕಡೆ ಕಾಂಗ್ರೆಸ್ ಮತ್ತು ಎನ್‌ಡಿಎ ನಡುವೆ ಪ್ರಬಲ ಪೈಪೋಟಿ ಇದೆ. 2019ರ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆದಿದ್ದರು.
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದು 28 ಕ್ಷೇತ್ರಗಳನ್ನು ಹಂಚಿಕೊಂಡಿವೆ. ಬಿಜೆಪಿ 25 ಮತ್ತು ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಹೇಳಲಾಗಿದೆ. (ಇನ್ನೂ ಅಂತಿಮವಾಗಿಲ್ಲ.) ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ನಡುವೆ ಹೋರಾಟ ನಡೆಯಲಿದೆ.