ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು (Bangalore Rural Lok Sabha constituency) ಅತಿ ಸೂಕ್ಷ್ಮ ಕ್ಷೇತ್ರವನ್ನಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು ಚುನಾವಣಾ ಆಯೋಗಕ್ಕೆ (Election Commission) ಪತ್ರ ಬರೆದಿದ್ದರು. ಇದರ ಅನುಸಾರ ಈಗ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾವಿಯೊಬ್ಬರು ಸ್ಪರ್ಧೆ ಮಾಡಿದ್ದಾರೆ. ಇದರಿಂದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಹಾಗೂ ಅರೆಸೇನಾ ಪಡೆಯನ್ನು ನಿಯೋಜನೆ ಮಾಡಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ನೆರವಾಗಬೇಕು ಎಂದು ಚುನಾವಣಾ ಆಯೋಗಕ್ಕೆ ಡಾ. ಸಿ.ಎನ್. ಮಂಜುನಾಥ್ ಅವರು ಪತ್ರ ಬರೆದಿದ್ದರು.
ಅರೆ ಸೇನಾಪಡೆ ನಿಯೋಜನೆಗೆ ಸೂಚನೆ
ಈ ಮನವಿ ಪತ್ರವನ್ನು ಪಡೆದ ರಾಜ್ಯ ಮುಖ್ಯ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಈಗ ತೀರ್ಮಾನ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರ ಅಂತ ಪರಿಗಣಿಸಲಾಗಿದೆ. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಮುಖ್ಯ ಚುನಾವಣಾ ಆಯೋಗವು ಅರೆ ಸೇನಾಪಡೆಯನ್ನು ನೇಮಿಸಲು ಸೂಚಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಡಿಕೆಶಿ ಜತೆ ಕಾಣಿಸಿಕೊಂಡಿದ್ದ ಸಹ ಶಿಕ್ಷಕ ಅಮಾನತು
ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆ ಸಹ ಶಿಕ್ಷಕ ಕೆ.ರಾಮು ಅಮಾನತುಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಕಾಣಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕೆ.ರಾಮು ಅವರನ್ನು ಅಮಾನತು ಮಾಡಲಾಗಿದೆ.
ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಕೆ.ಪಿ.ನಂಜುಂಡಿ ಅವರ ಮನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪ್ರತ್ಯಕ್ಷವಾಗಿದ್ದ ಸಹ ಶಿಕ್ಷಕ ಕೆ.ರಾಮು ಅವರು, ಡಿ.ಕೆ.ಶಿವಕುಮಾರ್, ಕೆ.ಪಿ. ನಂಜುಂಡಿ ಸೇರಿ ವಿವಿಧ ರಾಜಕೀಯ ನಾಯಕರಿಗೆ ಉಪಾಹಾರ ಬಡಿಸಿದ್ದರು. ಶಿಕ್ಷಕ ಉಪಾಹಾರ ಬಡಿಸುವ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಇಒ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ಅವರು, ತನಿಖೆ ನಂತರ ಸಹ ಶಿಕ್ಷಕ ಕೆ. ರಾಮು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Neha Murder Case: ನೇಹಾ ಹತ್ಯೆ ಖಂಡಿಸಿದ ನಟರಾದ ದರ್ಶನ್, ರಿಷಬ್, ಶಿವಣ್ಣ
ವರದಿ ಪ್ರಸಾರ ಮಾಡಿದ್ದ ವಿಸ್ತಾರ
ಸಹ ಶಿಕ್ಷಕ ರಾಮು ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ವಿಸ್ತಾರ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಹ ಶಿಕ್ಷಕ ರಾಮು ಅವರ ವಿರುದ್ಧ ಬಿಜೆಪಿಯ ವಸಂತಕುಮಾರ್ ಹಾಗೂ ಇತರರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದಾಗ ಅವರಿಗೆ ಶಿಕ್ಷಕ ರಾಮು ಅವರು ಊಟ ಬಡಿಸುತ್ತಿರುವ ಬಗ್ಗೆ ವಿಸ್ತಾರ ವಾಹಿನಿಯಲ್ಲಿ ವರದಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ, ದೂರು ಸಲ್ಲಿಸಿದ್ದರು. ಹೀಗಾಗಿ ಅನುಮತಿ ಪಡೆಯದೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಸಚಿವರ ಹಾಗೂ ರಾಜಕೀಯ ವ್ಯಕ್ತಿಗಳ ಜೊತೆಯಲ್ಲಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆ.ರಾಮು ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.