Site icon Vistara News

Lok Sabha Election 2024: ಬಿಜೆಪಿಗೆ ಸಿಕ್ಕಿತು ಮೊದಲ ಸೀಟು; ಗುಜರಾತ್‌ನ ಸೂರತ್‌ನಲ್ಲಿ ಪಕ್ಷದ ಅಭ್ಯರ್ಥಿ ಅವಿರೋಧ ಆಯ್ಕೆ!

Lok Sabha Election 2024

Lok Sabha Election 2024

ಗಾಂಧಿನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಮೊದಲ ಸ್ಥಾನವನ್ನು ಗೆದ್ದುಕೊಂಡಿದೆ (Lok Sabha Election 2024). ಗುಜರಾತ್‌ನ ಸೂರತ್​ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ (Mukesh Dalad) ಅವಿರೋಧವಾಗಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಂತಾಗಿದೆ.

ಭಾನುವಾರ ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ರದ್ದಾಗಿತ್ತು. ಅದರ ನಂತರ ಎಲ್ಲ ಸ್ವತಂತ್ರ ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಹಾಗಾಗಿ ಮುಖೇಶ್​ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ದಲಾಲ್ ಅವರಿಗೆ ಶುಭ ಕೋರಿದ್ದು, “ಅವಿರೋಧವಾಗಿ ಆಯ್ಕೆಯಾದ ಸೂರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುಖೇಶ್ ಭಾಯ್ ದಲಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಹೇಳಿದ್ದಾರೆ. ಇದು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ʼಐತಿಹಾಸಿಕ ವಿಜಯʼದ ಪ್ರಾರಂಭ ಎಂದು ಭೂಪೇಂದ್ರ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. “ಇದು ಗುಜರಾತ್‌ನ ಎಲ್ಲ 26 ಸ್ಥಾನಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸಲಿದೆ ಎನ್ನುದಕ್ಕೆ ಇದು ಸಾಕ್ಷಿʼʼ ಎಂದು ಗುಜರಾತ್ ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವೇನು?

ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ ತಿರಸ್ಕರಿಸಿದ್ದರು. ಅನುಮೋದಕರಾದ ರಮೇಶ್ ಪೋಲ್ರಾ ಅವರ ಮಾರಾಟ ಪತ್ರದ ಆಧಾರ ಮೇಲೆ, ಚಾಲನಾ ಪರವಾನಗಿಯ ಆಧಾರದ ಮೇಲೆ ಜಗದೀಶ್ ಸವಲಿಯಾ ಮತ್ತು ಅವರ ಪ್ಯಾನ್ ಕಾರ್ಡ್ ಆಧಾರದ ಮೇಲೆ ಧಮೇಲಿಯಾ ಅವರ ಸಹಿಗಳನ್ನು ಪರಿಶೀಲಿಸಿದರು. ಈ ವೇಳೆ ನಾಮನಿರ್ದೇಶನ ಪತ್ರದಲ್ಲಿನ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ದರ್ಶನಾ ಜರ್ದೋಶ್ ಬದಲಿಗೆ ಮುಕೇಶ್ ದಲಾಲ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಈ ಭದ್ರಕೋಟೆಯಲ್ಲಿ ಚುನಾವಣೆಗೆ ತಡೆ ಕೋರಿ ಕಾಂಗ್ರೆಸ್‌ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿತ್ತು. ನಾಮಪತ್ರ ಪರಿಶೀಲನೆ ವೇಳೆ ಕುಂಭಾನಿ ಅವರು ತಮ್ಮ ವಕೀಲರಾದ ಜಮೀರ್ ಶೇಖ್ ಮತ್ತು ಬಿ.ಎಂ. ಮಂಗುಕಿಯಾ ಅವರೊಂದಿಗೆ ಹಾಜರಿದ್ದರು.

ಇದನ್ನೂ ಓದಿ: Lok Sabha Election 2024: ಅನಾರೋಗ್ಯ ಹಿನ್ನೆಲೆ; ಮಧ್ಯಪ್ರದೇಶ, ಜಾರ್ಖಂಡ್‌ ರ‍್ಯಾಲಿಗೆ ರಾಹುಲ್‌ ಗಾಂಧಿ ಗೈರು

ನವಸಾರಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯೂ ಆಗಿರುವ ಕಾಂಗ್ರೆಸ್ ವಕ್ತಾರ ನೈಶಾದ್ ದೇಸಾಯಿ ಈ ಬಗ್ಗೆ ಮಾತನಾಡಿ, “ಸೂರತ್ ಚುನಾವಣಾ ಅಧಿಕಾರಿಯ ಆದೇಶದ ಪ್ರತಿ ನಮಗೆ ಸಿಕ್ಕಿದೆ. ಅದರಲ್ಲಿ ನಮ್ಮ ಸೂರತ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕುಂಭಾನಿ ಅವರು ವಕೀಲ ಬಿ.ಎಂ. ಮಂಗುಕಿಯಾ ಅವರೊಂದಿಗೆ ಅಹಮದಾಬಾದ್‌ಗೆ ತೆರಳಿದ್ದಾರೆ ಮತ್ತು ಅವರು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿ ಸೂರತ್‌ನ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಗುಜರಾತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಿದ್ದಾರೆʼʼ ಎಂದು ತಿಳಿಸಿದ್ದರು.

Exit mobile version