Site icon Vistara News

Lok Sabha Election 2024: ಡಿ.ಕೆ. ಸುರೇಶ್‌ ಮಣಿಸಲು ಬಿಜೆಪಿ ಹೈಕಮಾಂಡ್‌ ಪ್ಲ್ಯಾನ್;‌ ಟಾರ್ಗೆಟ್‌ ಡಿಕೆಶಿ!

Lok Sabha Election 2024 BJP high command plans to defeat Suresh and Target DK Shivakumar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆಯೂ ಜೋರಾಗಿಯೇ ನಡೆಯುತ್ತಿದೆ. ಇನ್ನು ಬಿಜೆಪಿ ಹೈಕಮಾಂಡ್‌ (BJP high command) ಈ ಬಾರಿ ಟಿಕೆಟ್‌ ನೀಡಬೇಕಾದರೆ ಕೆಲವು ಕಡೆ ಭಾರಿ ಲೆಕ್ಕಾಚಾರಗಳನ್ನು ಹಾಕಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ (Bangalore Rural Lok Sabha constituency) ಡಾ. ಸಿ.ಎನ್.‌ ಮಂಜುನಾಥ್‌ (Dr CN Manjunath) ಅವರನ್ನು ಕಣಕ್ಕಿಳಿಸುವ ಮೂಲಕ ಈ ಕ್ಷೇತ್ರವನ್ನು ಬಹಳ ಮುಖ್ಯವಾಗಿ ಪರಿಗಣಿಸಿರುವ ಸಂದೇಶವನ್ನು ರವಾನೆ ಮಾಡಿತ್ತು. ಇದು ಡಿಕೆ ಬ್ರದರ್ಸ್‌ಗೆ (DK Brothers) ಒಂದು ಎಚ್ಚರಿಕೆ ಗಂಟೆಯೂ ಆಗಿತ್ತು. ಇದೇ ವೇಳೆ ಸಂಸದ ಡಿ.ಕೆ‌. ಸುರೇಶ್ (DK Suresh) ಅವರನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಪಣತೊಟ್ಟಿದೆ ಎನ್ನಲಾಗಿದೆ.

ಈ ಹಿಂದೆ ಕೇಂದ್ರ ಬಜೆಟ್‌ ಮಂಡನೆಯಾದಾಗ ಡಿ.ಕೆ. ಸುರೇಶ್‌ ಅವರು ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿದೆ ಎಂದು ಟೀಕೆ ಮಾಡಿದ್ದರು. ಈ ವೇಳೆ ಡಿ.ಕೆ. ಸುರೇಶ್‌ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದರು. ಒಂದು ಹಂತಕ್ಕೆ ಈ ವಿಷಯ ಸೈಲೆಂಟ್‌ ಆಯಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ ಚುನಾವಣೆಯಲ್ಲಿ ಇದನ್ನೇ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ದೇಶ ಒಡೆಯುವ ಡಿ.ಕೆ. ಸುರೇಶ್ ಹೇಳಿಕೆಯನ್ನೇ ಪದೇ ಪದೆ ಪ್ರಸ್ತಾಪ ಮಾಡಿ, ಜನರಿಗೆ ಮನದಟ್ಟು ಮಾಡಲು ಮುಂದಾಗಿದೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ನಾಯಕರಿಗೆ ಸುರೇಶ್ ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಟಾರ್ಗೆಟ್ ಆಗಿದ್ದಾರೆ.‌ ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ‌ ಮೊದಲು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಇನ್ನು ಡಿ.ಕೆ. ಸುರೇಶ್ ಎದುರು ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸುವುದರ ಹಿಂದೆ ಮೆಗಾ ಮಾಸ್ಟರ್ ಪ್ಲ್ಯಾನ್ ಇದೆ. ಏಕೆಂದರೆ ಕೇಂದ್ರ ಹೈಕಮಾಂಡ್ ನಾಯಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಲೆನೋವಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಡಿಕೆಶಿ ಬ್ರೇಕ್ ಹಾಕಿದ್ದರು. ಒಕ್ಕಲಿಗ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಡಿಕೆ ಬ್ರದರ್ಸ್‌ ಮುಂದಾಗಿರುವುದು ಬಿಜೆಪಿ ತಲೆನೋವಿಗೆ ಕಾರಣವಾಗಿದೆ.

ಡಿಕೆಶಿ ಪ್ಲ್ಯಾನ್‌ಗೆ ತಿರುಮಂತ್ರ ಹಾಕಲು ರೆಡಿ!

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ನಂತರದ ನಾಯಕ ಆಗಲು ಡಿ.ಕೆ. ಶಿವಕುಮಾರ್ ಕಸರತ್ತು ಮಾಡುತ್ತಿದ್ದಾರೆ. ಈ ವಿಚಾರವು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೂ (HD Kumaraswamy) ಟೆನ್ಷನ್ ತಂದಿಟ್ಟಿದೆ. ಬಿಜೆಪಿ ಕೇಂದ್ರ ನಾಯಕರ ಜತೆ ಸೇರಿ ಎಚ್‌ಡಿಕೆ ಸಹ ಈ ಪ್ಲ್ಯಾನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಡಿಕೆ ಬ್ರದರ್ಸ್ ರಾಜಕೀಯ ಜೀವನಕ್ಕೇ ಪುಲ್‌ ಸ್ಟಾಪ್‌ ಹಾಕಲು ಬಿಜೆಪಿ ಹೈಕಮಾಂಡ್ ಮುಂದಾಯಿತಾ ಎಂಬ ಅನುಮಾನ ಕಾಡಿದೆ.

ಒಂದು ವೇಳೆ ಡಿಕೆ ಬ್ರದರ್ಸ್‌ ಲೆಕ್ಕಾಚಾರಗಳು ಉಲ್ಟಾ ಆಗಿ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಸೋತರೆ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಆಗುವ ಕನಸು ಭಗ್ನವಾಗುತ್ತದೆ. ಡಿಕೆಶಿ ವರ್ಚಸ್ಸು ಕಳೆದುಕೊಂಡರೆ ರಾಜ್ಯದಲ್ಲಿ ಮುಂದೆ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ. ಕಾಂಗ್ರೆಸ್‌ನ ಡಿಕೆಶಿ ಎಂಬ ಬ್ರಹ್ಮಾಸ್ತ್ರವನ್ನು ಈಗಲೇ ಪ್ರತ್ಯಸ್ತ್ರವನ್ನು ಬಿಟ್ಟು ನಾಶ ಮಾಡಲು ಚುನಾವಣಾ ಚಾಣಕ್ಯ ಅಮಿತ್ ಶಾ ರಣತಂತ್ರ ಹೂಡಿದ್ದಾರೆ.

ಡಾ. ಸಿ.ಎನ್.‌ ಮಂಜುನಾಥ್‌ ಆಯ್ಕೆ ಏಕೆ?

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದರೆ ಅದು ಡಿಕೆ ಬ್ರದರ್ಸ್‌ ಭದ್ರಕೋಟೆಯಾಗಿದೆ. ಇದನ್ನು ಭೇದಿಸಬೇಕೆಂದರೆ ಸೂಕ್ತ ಅಭ್ಯರ್ಥಿಯೇ ಆಗಿರಬೇಕು. ಡಾ. ಸಿ.ಎನ್. ಮಂಜುನಾಥ್ ಅವರು ಯಾವುದೇ ಆರೋಪಗಳಿಲ್ಲದ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಳಿಯ ಎಂಬ ಸಿಂಪತಿ ಸಹ ಅವರಿಗೆ ಸಿಗಲಿದೆ. ವಿದ್ಯಾವಂತ, ಬುದ್ಧಿವಂತ, ಜನರ ಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಎಂಬ ಟ್ರಂಪ್ ಕಾರ್ಡ್ ಅನ್ನು ಬಳಕೆ ಮಾಡಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಜಯದೇವದಂತಹ ಸರ್ಕಾರಿ ಆಸ್ಪತ್ರೆಯನ್ನು ಅಷ್ಟು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುವಂತೆ ಮಾಡಿದ ಚತುರ ಆಡಳಿತಗಾರರೂ ಇವರಾಗಿರುವ ಕಾರಣ, ಇವರ ಕೈಯಲ್ಲಿ ಕ್ಷೇತ್ರವನ್ನು ಕೊಟ್ಟರೆ ಹೊಸ ದಿಕ್ಕನ್ನು ತೋರುತ್ತಾರೆ ಎಂಬ ಆಶಾಭಾವನೆಯನ್ನು ಜನರ ಮನಸ್ಸಿನಲ್ಲಿ ಹುಟ್ಟುಹಾಕಲು ಬಿಜೆಪಿ ಪ್ಲ್ಯಾನ್‌ ಮಾಡಿದೆ.

Exit mobile version