ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಹೋರಾಟಕ್ಕೆ ಸಜ್ಜಾಗಿದೆ. ಈ ಸಂಬಂಧ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯನ್ನು (BJP JDS coordination committee meeting) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ (Radha Mohandas Agarwal) ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD DeveGowda), ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಉಭಯ ಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ಪಕ್ಷದ ಶಾಲುಗಳನ್ನು ಪರಸ್ಪರ ಹಾಕಿಕೊಂಡು ಮುಂದಿನ ರಣತಂತ್ರವನ್ನು ಹೆಣೆಯಲು ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ, ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿದಂತೆ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಅಭ್ಯರ್ಥಿ ಗೋವಿಂದ ಕಾರಜೋಳ, ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಇತರರು ಹಾಜರಿದ್ದರು.
ನಡೆದ ಚರ್ಚೆಗಳೇನು?
ಈಗಾಗಲೇ ಬಿಜೆಪಿ – ಜೆಡಿಎಸ್ ಮೈತ್ರಿಯಾಗಿದೆ. ಆದರೆ, ಇದು ದೆಹಲಿ ಮಟ್ಟದಲ್ಲಿ ಆಗಿದೆ. ಕಾರ್ಯಕರ್ತರನ್ನು ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಉಭಯ ಪಕ್ಷಗಳ ರಾಜ್ಯ ನಾಯಕರು ಸಹ ಒಟ್ಟಾಗಿಲ್ಲ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಆದರೆ, ಇದಕ್ಕೆ ಬ್ರೇಕ್ ಹಾಕುವ ಸಂಬಂಧ ಈಗಾಗಲೇ ಮಂಡ್ಯ ಸೇರಿದಂತೆ ಕೆಲವು ಕಡೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜತೆಗೆ ಪ್ರಚಾರ ಕಾರ್ಯವನ್ನು ಒಟ್ಟಾಗಿ ಮಾಡಲಾಗಿದೆ. ಈ ಮೂಲಕ ಎರಡೂ ಪಕ್ಷದ ಕಾರ್ಯಕರ್ತರಿಗೆ ನಾವೆಲ್ಲರೂ ಒಂದು ಎಂಬ ಭಾವನೆ ಮೂಡುವಂತೆ ಕೆಲಸ ಮಾಡಲಾಗುತ್ತಿದೆ. ಇನ್ನು ಎಲ್ಲ ಕಡೆ ಎರಡೂ ಪಕ್ಷದ ಪ್ರಮುಖ ನಾಯಕರು ಪ್ರಚಾರ ನಡೆಸಲಿದ್ದು, ಕಾರ್ಯಕರ್ತರೂ ಜತೆಯಾಗಬೇಕು. ರಾಜ್ಯದಲ್ಲಿ ಮೈತ್ರಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. 28ಕ್ಕೆ 28 ಕ್ಷೇತ್ರವನ್ನು ಗೆದ್ದುಕೊಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮವನ್ನು ಹಾಕಬೇಕು. ಕಾರ್ಯಕರ್ತರು ಈ ನಿಟ್ಟಿನಲ್ಲಿ ಜತೆಯಾಗಬೇಕು ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.
ಒಟ್ಟಾಗಿ ದುಡಿಯುವ ವಾತಾವರಣ ಸೃಷ್ಟಿ: ಬಿ.ವೈ. ವಿಜಯೇಂದ್ರ
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಸಭೆ ಇದಾಗಿದೆ. ಬಹಳ ಹಿಂದೆಯೇ ಇಂಥದ್ದೊಂದು ಸಭೆ ಆಗಬೇಕಿತ್ತು. ಕಾರಣಾಂತರದಿಂದ ಮುಂದೂಡಲಾಗಿತ್ತು. ಬಿಜೆಪಿ – ಜೆಡಿಎಸ್ ಸಮಾಗಮವಾಗಿದೆ. ದೇಶದ ಭವಿಷ್ಯದಿಂದ ಗಂಭೀರವಾಗಿ ಪರಿಗಣಿಸಿ ಎಲ್ಲರೂ ಕೆಲಸ ಮಾಡಬೇಕು. ಎರಡೂ ಪಕ್ಷದ ನಾಯಕರು ಒಗ್ಗೂಡಲಾಗಿದೆ. ಬಿಜೆಪಿ – ಜೆಡಿಎಸ್ ಸಮ್ಮಿಲನd ರಾಜಕೀಯ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ನಡುವೆ ಈ ಹಿಂದೆಯೂ ಹೊಂದಾಣಿಕೆ ಆಗಿತ್ತು. ಆದರೆ, ಸೈದ್ಧಾಂತಿಕ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಪ್ಪಿಗೆ ಕೊಟ್ಟಿರಲಿಲ್ಲ. 2024ರಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಿಗೆ ಸೇರಿದೆ ಅಂದರೆ ಇದರಲ್ಲಿ ದೇವೇಗೌಡರ ಆಶೀರ್ವಾದ ಬಹಳ ಮುಖ್ಯವಾಗಿದೆ. ಮುತ್ಸದ್ದಿ ರಾಜಕಾರಣಿ ದೇವೇಗೌಡರು ದೇಶದ ಅಭಿವೃದ್ಧಿ ದೃಷ್ಟಿಯಿಂದ, ಭದ್ರತೆ ದೃಷ್ಟಿಯಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಆಶಯವನನು ವ್ಯಕ್ತಪಡಿಸಿದ್ದಾರೆ. ಇದು ನಮಗೆ ಆನೆ ಬಲವನ್ನು ತಂದಿದೆ. ಎರಡೂ ಪಕ್ಷಗಳು ಒಂದಾಗಿ ಹಲವಾರು ತಿಂಗಳಾಗಿದೆ. ನಾನು ಕೂಡ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ಎರಡು ದಿನಗಳಲ್ಲಿ ಮೈಸೂರು, ಮಂಡ್ಯದಲ್ಲಿ ಜಂಟಿ ಪ್ರವಾಸ ಮಾಡಿದ್ದೇವೆ. ಇದರಿಂದ ಎರಡೂ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನೆಯಾಗಿದೆ. ಇಂದಿನ ಒಗ್ಗಟ್ಟಿನ ಪರಿಣಾಮ, ರಾಜ್ಯದ ಪ್ರಜ್ಞಾವಂತ ಮತದಾರರಿಗೂ ಸಂತೋಷವಾಗಿದೆ. ನಿನ್ನೆ ಮೈಸೂರು, ಮಂಡ್ಯದಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು.
ಎರಡೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ಹೆಚ್ಚಿದೆ. ಸಮ್ಮಿಲನ ಆಗಿದೆ. ಇದನ್ನು ರಾಜ್ಯದ ಜನ ಗಂಭೀರವಾಗಿ ಪರಿಗಣಿಸಿದ್ದಾರೆ. ಒಟ್ಟಾಗಿ ದುಡಿಯುವ ವಾತಾವರಣ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿ, ವಿಶ್ರಾಂತಿ ಪಡೆಯದೆ ನಮ್ಮ ಜತೆ ಓಡಾಡುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಇದು ಅವರ ಬದ್ಧತೆಯನ್ನು ತೋರಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ ಕನಿಷ್ಠ 15-20 ಸಚಿವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹೆದರಿ, ಒಬ್ಬ ಸಚಿವರೂ ಚುನಾವಣೆ ಸ್ಪರ್ಧೆಯನ್ನು ಎದುರಿಸಲು ಮುಂದೆ ಬರಲಿಲ್ಲ. ಕಾಂಗ್ರೆಸ್ ಕಳೆದ ಒಂಭತ್ತು ತಿಂಗಳ ಆಡಳಿತವನ್ನು ಗಮನಿಸಿದರೆ ಜನವಿರೋಧವನ್ನು ಕಟ್ಟಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ದೇಶಗಳಲ್ಲಿ ಭ್ರಷ್ಟ ಸರ್ಕಾರ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರವಾಗಿದೆ. ದಲಿತ ವಿರೋಧಿ, ಬಡವರ ಪರ ಕಾಳಜಿ ಇಲ್ಲದ ಸರ್ಕಾರ ಇದಾಗಿದೆ. ಒಂದೇ ಒಂದು ರೂಪಾಯಿ ಅಭಿವೃದ್ಧಿಗೆ ನೀಡದ ಸರ್ಕಾರ ಇದು. ಈ ಬಗ್ಗೆ ಜನರೂ ಆಕ್ರೋಶಗೊಂಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲಬೇಕು: ಎಚ್‌ಡಿಕೆ ಕರೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಗ್ರಗಣ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಜನಪ್ರಿಯತೆ ಹೆಚ್ಚಿದೆಯೇ ಹೊರತು, ಕಡಿಮೆಯಾಗಿಲ್ಲ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಬೇಕು. ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲಬೇಕು. ಮತದಾನದ ಕೊನೆಯವರೆಗೂ ಶ್ರಮಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಅಮಿತ್ ಶಾ ರೌಡಿ, ಗೂಂಡಾ ಎಂದ ಯತೀಂದ್ರ ಸಿದ್ದರಾಮಯ್ಯ; ಮೆಚ್ಯುರಿಟಿ, ಬುದ್ಧಿ ಇಲ್ಲವೆಂದ ಬಿಜೆಪಿ
ನಿನ್ನೆಯಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. 28 ಕ್ಷೇತ್ರದಲ್ಲಿ ಎರಡೂ ಪಕ್ಷದವರು ಒಟ್ಟಾಗಿ ದುಡಿಯಬೇಕು. ಅಷ್ಟೂ ಕ್ಷೇತ್ರದಲ್ಲಿ ಗೆಲುವು ನಮ್ಮದಾಗಬೇಕು. ಈ ಹಿಂದೆಯೂ ನನ್ನ ಮೇಲೆ ಬಿಜೆಪಿಯ ಶಾಸಕರು ಪ್ರೀತಿ, ಗೌರವದಿಂದ ನೋಡಿದ್ದೀರಿ. ಹಿಂದೆ ಬಿ.ಎಸ್. ಯಡಿಯೂರಪ್ಪ, ನಾವು ಒಟ್ಟಿಗೆ ಸೇರಿ ಉತ್ತಮ ಆಡಳಿವನ್ನು ನೀಡಿದ್ದೆವು. ಅಂದು ನಮ್ಮ ತಂದೆಯವರ ಅನುಮತಿ ದೊರೆತಿರಲಿಲ್ಲ. ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೋಗುವ ಸಂದರ್ಭದಲ್ಲಿ, ಎರಡೂ ಪಕ್ಷದ ಶಾಸಕರು ಮೈತ್ರಿ ಸರ್ಕಾರ ಮಾಡುವ ಒತ್ತಡ ಹಾಕಿದರು. ಅಂದಿನ ನನ್ನ ಉದ್ದೇಶ ಇದ್ದಿದ್ದು, ತಾತ್ಕಾಲಿಕ ಸರ್ಕಾರವಾಗಿತ್ತು. ಅಲ್ಲದೆ, ಶಾಶ್ವತ ಮೈತ್ರಿ ಇರಬೇಕು ಅಂತ ಅಂದುಕೊಂಡಿದ್ದೆ. ಹಲವಾರು ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರವನ್ನು ನಡೆಸಲಾಗಲಿಲ್ಲ. ಅಂದು ನಮ್ಮ ತಂದೆಯವರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಕೆಲವರು ಮಾಡಿದರು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
2018ರಲ್ಲಿ ನಾವು ನೀವು ಸೇರಿ ಮೈತ್ರಿ ಸರ್ಕಾರ ಮಾಡಿದ್ದರೆ ಇಂದಿಗೂ ನಾವೇ ಅಧಿಕಾರ ಮಾಡಬಹುದಿತ್ತು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬರಲು ಆಗುತ್ತಿರಲಿಲ್ಲ. ನಮ್ಮಲ್ಲಿರುವ ಒಡಕು, ಅವಿಶ್ವಾಸದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು. ಈಗ ಜೆಡಿಎಸ್ ಮೂಲೆ ಗುಂಪಾಯ್ತು ಅಂತ ಕಾಂಗ್ರೆಸ್ ತಿಳಿದಿದೆ. ದೇಶದ ಭದ್ರ ಬುನಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿದ್ದಾರೆ. ಪ್ರಧಾನಿಯವರ ದುಡಿಮೆಯನ್ನು ನೋಡಿದ್ದೇನೆ. ಅವರ ಆಹ್ವಾನದ ಮೇರೆಗೆ ನಾನು ಅವರನ್ನು ಭೇಟಿಯಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಬಂದಿದೆ. ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಹೆಚ್ಚು ಕಡಿಮೆ ಮನಸ್ತಾಪ ಬಂದಿರಬಹುದು. ಆದರೆ, ಈಗ ಎಲ್ಲವೂ ಬಗೆಹರಿದಿದೆ. ಎರಡೂ ಪಕ್ಷದ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.