ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಿಜೆಪಿ – ಜೆಡಿಎಸ್‌ನಿಂದ ಹಲವು ನಾಯಕರು ಮೈಸೂರಿನಲ್ಲಿ ಕಾಂಗ್ರೆಸ್ (Congress Karnataka) ಸೇರ್ಪಡೆಯಾಗಿದ್ದಾರೆ. ಈ ವೇಳೆ ಮೂಡಾ ಮಾಜಿ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಟ್ಟಾ ಅಭಿಮಾನಿ ಎಚ್.ವಿ. ರಾಜೀವ್ (HV Rajeev) ಅವರು ಕಾಂಗ್ರೆಸ್ ಸೇರ್ಪಡೆ ಹಿಂದೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಇದ್ದಾರೆ ಎಂಬ ವಿಷಯವು ಬಹಿರಂಗವಾಗಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಚ್.ವಿ. ರಾಜೀವ್ ಬಗ್ಗೆ ಮಾತನಾಡುವಾಗ ಎಸ್.ಟಿ. ಸೋಮಶೇಖರ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್. ಅಶೋಕ್
ಮೊದಲು ಮಾತು ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ – ಜೆಡಿಎಸ್ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವ ಎಲ್ಲರಿಗೂ ಆತ್ಮೀಯ ಸ್ವಾಗತ. ರಾಜೀವ್ ಅವರ ಬಳಿ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್‌ಗೆ ಬನ್ನಿ ಎಂದಿದ್ದೆ. ಆಗ ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದರು. ನಾನು ಸಹ ಒತ್ತಾಯ ಮಾಡಲಿಲ್ಲ. ಅವರು ಬರುವ ಪ್ರಯತ್ನ ಮಾಡಲಿಲ್ಲ. ಅಲ್ಲಿಗೆ ಆ ವಿಷಯ ಅಲ್ಲೇ ನಿಂತುಹೋಯ್ತು. ಆ ನಂತರ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ನನಗೆ ಹೇಳಿದರು. ರಾಜೀವ್ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬುದಾಗಿ ನನ್ನ ಗಮನಕ್ಕೆ ತಂದರು. ಆಗ ನಾನು ನಮ್ಮ ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಅಂದೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಎಸ್.ಟಿ. ಸೋಮಶೇಖರ್ ಹಾಗೂ ರಾಜೀವ್ ಸ್ನೇಹಿತರು. ಈಗ ರಾಜೀವ್ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಜೆಡಿಎಸ್ ಕೋಮುವಾದಿಗಳ ಜತೆ ಕೈಜೋಡಿಸಿದ ಮೇಲೆ ಜೆಡಿಎಸ್ ತೊರೆದಿರುವ ಕೆ.ವಿ ಮಲ್ಲೇಶ್ ಅವರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮಾಜಿ ಮೇಯರ್ ಭೈರಪ್ಪ, ಓಂಕಾರ್ ನಮ್ಮ ಪಕ್ಷ ಸೇರಿದ್ದಾರೆ. ಬಿಜೆಪಿ ಸೇರಿ ಜೆಡಿಎಸ್ ಪಕ್ಷವೂ ಕೋಮುವಾದಿಯಾಗಿದೆ. ಈ ಕಾರಣಕ್ಕೆ ಜೆಡಿಎಸ್‌ನಿಂದಲೂ ಹಲವು ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಾಲ್ಕು ವರ್ಷ ಮುಂಚೆಯೇ ಟಿಕೆಟ್ ಘೋಷಣೆ
ಎಚ್.ವಿ. ರಾಜೀವ್ ಅವರಿಗೆ ಕೃಷ್ಣರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ನಾಲ್ಕು ವರ್ಷ ಮುಂಚೆಯೇ ಸಿಎಂ ಸಿದ್ದರಾಮಯ್ಯ ಅವರು ಟಿಕೆಟ್ ಅನ್ನು ಖಚಿತಪಡಿಸಿದರು. ಈ ಮೂಲಕ ಕಾಂಗ್ರೆಸ್ ಸೇರಿದ ಎಚ್.ವಿ. ರಾಜೀವ್‌ಗೆ ಸಿದ್ದರಾಮಯ್ಯ ಭರವಸೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ರಾಜೀವ್ ಮತ್ತು ಅವರ ಸ್ನೇಹಿತರು ಕಾಂಗ್ರೆಸ್‌ಗೆ ಬಂದಿದ್ದಾರೆ. ಇದರಿಂದ ಕೃಷ್ಷರಾಜ ಕ್ಷೇತ್ರದಲ್ಲಿ ಹೆಚ್ಚಿನ ಶಕ್ತಿ ಬಂದಿದೆ. ನಮ್ಮ ಅಭ್ಯರ್ಥಿ ಎಂ. ಲಕ್ಷ್ಮಣ್ ಗೆಲ್ಲಲು ಸಹಕಾರಿಯಾಗಿದೆ ಎಂದು ಹೇಳಿದರು.
ಮೋದಿ ಸುಳ್ಳು ಹೇಳುವ ಪ್ರಧಾನಿ
ನಮ್ಮ ಪಕ್ಷ ಅಭಿವೃದ್ಧಿಯನ್ನು ಮಾತ್ರ ನೋಡುತ್ತದೆ. ನಮ್ಮ ಯೋಜನೆಗಳು ಎಲ್ಲ ಪಕ್ಷಗಳ ಜನರಿಗೂ ತಲುಪಿದೆ. ಆದರೆ, ನರೇಂದ್ರ ಮೋದಿಯವರು ಬಾಯಿಯಲ್ಲಿ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಅಂತಾರೆ. ಇನ್ನೊಂದು ಕಡೆ ಗಡ್ಡ ಬುಟ್ಟವ್ರು, ಬುರ್ಕಾ ಹಾಕಿದವ್ರು, ಶಿಲುಬೆ ಹಾಕಿದವ್ರು ಬರಬೇಡಿ ಅಂತಾರೆ. ಈ ದೇಶದಲ್ಲಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದಾರೆಂದರೆ ಅದು ನರೇಂದ್ರ ಮೋದಿ ಅವರು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಇದನ್ನೂ ಓದಿ: Tejaswini Gowda: ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?
“ಸುಳ್ಳು” ಬಿಜೆಪಿಯವರ ಮನೆ ದೇವರು
“ಸುಳ್ಳು” ಬಿಜೆಪಿಯವರ ಮನೆ ದೇವರು. ಅಚ್ಚೇ ದಿನ್ ಆಯೇಗ ಅಂದರು ಬಂತಾ? ಹದಿನೈದು ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದರು, ಬಂತಾ? ಡಾಲರ್ ಮೇಲೆ ರೂಪಾಯಿ ಬೆಲೆ ಹೆಚ್ಚಳ ಮಾಡುತ್ತೇನೆ ಎಂದು ಹೇಳಿದ್ದರು. ಅದು ಆಯಿತಾ? ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದರು, ಮಾಡಿದರಾ?
ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರು, ಸೃಷ್ಟಿ ಆಯ್ತಾ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದರು.
ರೆಸಾರ್ಟ್ ವಾಸದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ವಿಡಿಯೊ
ಇಂಥವರಿಗೆ ವೋಟು ಹಾಕಬೇಕಾ?
ಇಂಥವರಿಗೆ ವೋಟು ಹಾಕಬೇಕಾ? ಇದನ್ನು ನಾನು ಚುನಾವಣೆಗಾಗಿ ಹೇಳುತ್ತಿಲ್ಲ. ಸತ್ಯ ಹೇಳುತ್ತಿದ್ದೇನೆ. ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಬಿಜೆಪಿಯವರು ರೀತಿ ಸುಳ್ಳು ಹೇಳಬೇಡಿ. ನಾವು ಕೊಟ್ಟಿರುವ ಯೋಜನೆಗಳ ಬಗ್ಗೆ ಸತ್ಯ ಹೇಳಿ ಅಂತ ಹೇಳಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.