Site icon Vistara News

Lok Sabha Election 2024: ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಟಾಸ್ಕ್‌; ಬಿ.ವೈ. ವಿಜಯೇಂದ್ರ ಹೇಳಿದ್ದೇನು?

Lok Sabha Election 2024 BJP to task new candidates What did BY Vijayendra say

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವಲ್ಲಿ ನಿರತವಾಗಿವೆ. ಹಲವು ಲೆಕ್ಕಾಚಾರಗಳೊಂದಿಗೆ, ಅಳೆದೂ ತೂಗಿ ಟಿಕೆಟ್‌ ಕೊಡಲಾಗುತ್ತಿದೆ. ಎಲ್ಲ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಯೇ ಬೇಕಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿವೆ. ಇದೇ ವೇಳೆ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಿದೆ. ಈ ಬಾರಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಟಿಕೆಟ್‌ ಅನ್ನು ಘೋಷಣೆ ಮಾಡಿದೆ. ಅದರಲ್ಲಿ ಹಾಲಿ 8 ಸಂಸದರಿಗೆ ಟಿಕೆಟ್‌ ಮಿಸ್‌ ಆಗಿದೆ. ಇದೇ ವೇಳೆ ಬಿಜೆಪಿ ನೂತನ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ (BJP high command) ಕೆಲವೊಂದು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ. ಎಲ್ಲರನ್ನೂ ಒಳಗೊಂಡು ಪ್ರಚಾರ ಮಾಡಲು ಸೂಚನೆ ಕೊಟ್ಟಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸಹ ಮಾತನಾಡಿದ್ದು, ಕೆಲವರ ಗೊಂದಲಕ್ಕೆ ಮೂರ್ನಾಲ್ಕು ದಿನದಲ್ಲಿ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಬಿಜೆಪಿಯಿಂದ ಹಾಲಿ ಸಂಸದರನ್ನು ಬದಲಿಸಿ ನಾಲ್ಕು ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ದಕ್ಷಿಣ ಕನ್ನಡದಿಂದ ಬ್ರಿಜೇಶ್‌ ಚೌಟ, ದಾವಣಗೆರೆಯಿಂದ ಗಾಯತ್ರಿ, ಮೈಸೂರಿನಿಂದ ಯದುವೀರ್‌ ಒಡೆಯರ್‌, ಕೊಪ್ಪಳದಿಂದ ಕೆ. ಬಸವರಾಜ್‌ ಅವರು ಹೊಸ ಮುಖಗಳಾಗಿದ್ದಾರೆ. ಇವರಿಗೆ ಚುನಾವಣೆ ಇದೇ ಮೊದಲಾಗಿದೆ. ಇವರೂ ಸೇರಿದಂತೆ ಎಲ್ಲೆಲ್ಲಿ ಅಭ್ಯರ್ಥಿಗಳ ಬದಲಾವಣೆಯಾಗಿದೆಯೋ ಆ ಅಭ್ಯರ್ಥಿಗಳು ಮೊದಲು ಮಾಡಬೇಕಾದ ಕೆಲಸ ಎಂದರೆ, ಹಾಲಿ ಸಂಸದರನ್ನು ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿದೆ. ಈ ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿದೆ.

ಹೈಕಮಾಂಡ್‌ ಕೊಟ್ಟ ಟಾಸ್ಕ್‌ ಏನು?

ಇವೂ ಸೇರಿದಂತೆ ಇನ್ನಿತರ ಟಾಸ್ಕ್‌ಗಳನ್ನು ನೂತನ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್‌ ನೀಡಿದೆ. ಹೀಗಾಗಿ ಇಂದು ಹಿರಿಯ ನಾಯಕರನ್ನು ಅಭ್ಯರ್ಥಿಗಳು ಭೇಟಿ ಮಾಡುತ್ತಿದ್ದಾರೆ.

ಬಿಜೆಪಿ ಸೇರುತ್ತಿದ್ದಾರೆ ಮಾಜಿ ಶಾಸಕರು: ಬಿ.ವೈ. ವಿಜಯೇಂದ್ರ

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಲೋಕಸಭೆ ಚುನಾವಣೆ ಎದುರಿಸುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಮಂತ್ರಿ ಆಗಬೇಕು. ದೇಶಾದ್ಯಂತ ಬಿಜೆಪಿಯ ಅಲೆಯಿದೆ. ಬಿಜೆಪಿಗೆ ಮಾಜಿ ಶಾಸಕರು ಸೇರುತ್ತಿದ್ದಾರೆ‌. ಇವರ ಸೇರ್ಪಡೆ ಬಿಜೆಪಿಗೆ ಮತ್ತಷ್ಟು ಶಕ್ತಿಯನ್ನು ತಂದುಕೊಟ್ಟಿದೆ. ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಯಾರೇ ಬಂದರು ನಾವು ಸ್ವಾಗತ ಮಾಡುತ್ತೇವೆ. ಪಕ್ಷ ಬಲವರ್ಧನೆಗೆ ಅವರ ಸೇವೆಯನ್ನು ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.

20 ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಆಗಿದೆ. ಕೆಲವು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಣೆ ಆಗಿದೆ. ಆದರೆ, ಹೊಸ ಮುಖಗಳಿಗೆ ಟಿಕೆಟ್ ಕೊಡಲಾಗಿದೆ. ಮೂರು ಜನ ವೀಕ್ಷಕರ ಅಭಿಪ್ರಾಯ, ಕೋರ್ ಕಮಿಟಿ ಚರ್ಚೆಯ ಬಳಿಕ ಮೂರು ಹೆಸರುಗಳನ್ನು ‌ಕಳುಹಿಸಿಕೊಟ್ಟಿದ್ದೆವು. ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸುವ ಕೆಲಸ ಆಗಿದೆ. ಮೈಸೂರು ರಾಜಮನೆತನದ ಬಗ್ಗೆ ಹಳೇ ಮೈಸೂರು ಭಾಗದಲ್ಲಿ ಗೌರವ, ಪ್ರೀತಿ ಇದೆ. ವಿಶ್ವದಲ್ಲಿ ಸರ್ವಸ್ವವನ್ನು ಸಮರ್ಪಿಸಿ ಪ್ರಜಾ ಸೇವೆ ಮಾಡಿದ ಕೀರ್ತಿ ಯದು ವಂಶಕ್ಕೆ ಸಲ್ಲುತ್ತದೆ. ಯದುವೀರ್‌ಗೆ ಟಿಕೆಟ್ ಕೊಟ್ಟಿದ್ದಕ್ಕಾಗಿ ಧನ್ಯವಾದವನ್ನು ಸಲ್ಲಿಕೆ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ ಅಚ್ಚರಿಯ ಆಯ್ಕೆ ಮಾಡಿದೆ. ಖ್ಯಾತ ಹೃದ್ರೋಗ ತಜ್ಞರನ್ನು ಆಯ್ಕೆ ಮಾಡಿದ್ದು ಸಂತೋಷ ತಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ ಹೊಸ‌ ದಾಖಲೆಯನ್ನು ಸೃಷ್ಟಿ ಮಾಡಬೇಕು ಹಾಗೂ ಮೋದಿ ಕೈ ಬಲಪಡಿಸಬೇಕು ಎಂಬ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಯಾರೋ ಇಬ್ಬರು ಕುಳಿತು ಮಾಡಿದ ತೀರ್ಮಾನ ಅಲ್ಲ, ಕೇಂದ್ರದ ವರಿಷ್ಠರು ಕುಳಿತು ತೀರ್ಮಾನ ಮಾಡಿ ಗುರಿ ಮುಟ್ಟುವ ಸಲುವಾಗಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಯಾವಾಗ ಸ್ಪಷ್ಟ ಬಹುಮತ? ಎಂದು ಸಿಎಂ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿರುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಈ ಆಯ್ಕೆ ಮಾಡಲಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಈಶ್ವರಪ್ಪ ಜತೆ ಹಿರಿಯರು ಸಂಪರ್ಕದಲ್ಲಿದ್ದಾರೆ

ಟಿಕೆಟ್ ವಿಚಾರವಾಗಿ ಸಣ್ಣ ಪುಟ್ಟ ವ್ಯತ್ಯಾಸ ಇರುತ್ತದೆ. ಆದರೆ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಜತೆ ಹಿರಿಯರು‌ ಸಂಪರ್ಕದಲ್ಲಿ ಇದ್ದಾರೆ. 28 ಕ್ಷೇತ್ರ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಟಿಕೆಟ್ ನೀಡಲಾಗಿದೆ, ಎಲ್ಲದಕ್ಕೂ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಉತ್ತರ ಸಿಗಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಟಿಕೆಟ್ ಸಿಗದವರಿಗೆ ಸಾಮರ್ಥ್ಯ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಅವರಿಗೆ ಸಾಮರ್ಥ್ಯ ಇಲ್ಲ ಅಂದಲ್ಲ. ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ. ಆದರೆ, ಕೆಲವು ಸಂದರ್ಭಗಳಲ್ಲಿ ವರಿಷ್ಠರು ತೀರ್ಮಾನ ಮಾಡ್ತಾರೆ. ಜಗದೀಶ್ ಶೆಟ್ಟರ್ ಗೊಂದಲಕ್ಕೆ ಮೂರು ನಾಲ್ಕು ದಿನಗಳಲ್ಲಿ ಉತ್ತರ ಸಿಗಲಿದೆ. ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ‌Lok Sabha Election 2024: ಪ್ರತಾಪ್‌ ಸಿಂಹ, ಕರಡಿ, ಡಿವಿಎಸ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್‌? ಏನಿದು ಡಿಕೆಶಿ ಪ್ಲ್ಯಾನ್?

ಟಿಕೆಟ್ ಕೈತಪ್ಪಿದ ಹಾಲಿ ಸಂಸದರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಅಂತಹ ಕೆಟ್ಟ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ಗೆ ಅಭ್ಯರ್ಥಿ ಸಿಗುತ್ತಿಲ್ಲ ಹಾಗೂ ಮಂತ್ರಿಗಳು ನಿಲ್ಲಲು ಧೈರ್ಯ ಮಾಡುತ್ತಿಲ. ಕಾಂಗ್ರೆಸ್‌ಗೆ ದಯನೀಯ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

Exit mobile version