ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಭಯ ಕಾಡಲಾರಂಭಿಸಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಆಯಾ ಕ್ಷೇತ್ರದ ಕೆಲವು ನಾಯಕರು ತೀವ್ರ ವಿರೋಧವನ್ನು ಹೊರಹಾಕಿದ್ದಾರೆ. ಅಲ್ಲದೆ, ಬಂಡಾಯ ಚಟುವಟಿಕೆಯನ್ನು ಸಹ ಪ್ರಾರಂಭ ಮಾಡಿದ್ದಾರೆ. ಬಿಜೆಪಿ ಸಹ ಈ ಬಂಡಾಯದ ಬಿಸಿಯನ್ನು ಅನುಭವಿಸುತ್ತಿದೆ. ಇದಕ್ಕೆ ಈಗ ಮದ್ದರಿಯಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಮುಂದಾಗಿದ್ದಾರೆ. ಬಂಡಾಯ ಶಮನಕ್ಕೆ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಹಳೇ ಮೈಸೂರು ಭಾಗಕ್ಕೆ ಬಿ.ವೈ. ವಿಜಯೇಂದ್ರ ಭೇಟಿ ನೀಡುತ್ತಿದ್ದರೆ, ಉತ್ತರ ಕರ್ನಾಟಕಕ್ಕೆ ಬಿ.ಎಸ್. ಯಡಿಯೂರಪ್ಪ ಹೊರಟಿದ್ದಾರೆ.
ಮಂಡ್ಯ, ಮೈಸೂರು ಭಾಗಗಳ ಕೆಲವು ಕಡೆ ನಾಯಕರ ಅಸಮಾಧಾನವಿದೆ. ಹೀಗಾಗಿ ಇಂದು (ಮಂಗಳವಾರ – ಮಾ. 26) ಮಂಡ್ಯದಲ್ಲಿ ವಿಜಯೇಂದ್ರ ಸಭೆ ನಡೆಸಲಿದ್ದಾರೆ. ಮಂಡ್ಯ ಬಿಜೆಪಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಲಿದ್ದಾರೆ. ಈ ಕ್ಷೇತ್ರವನ್ನು ಈಗ ಮೈತ್ರಿ ಧರ್ಮದ ಅನುಸಾರ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಬೇಕು. ಎಂಥದೇ ಸಂದರ್ಭದಲ್ಲಿಯೂ ಪಕ್ಷದಿಂದ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತೇವೆ ಎಂಬ ಭರವಸೆಯನ್ನು ವಿಜಯೇಂದ್ರ ನೀಡಲಿದ್ದಾರೆ.
ದಾವಣಗೆರೆ, ಬೆಳಗಾವಿಗೆ ಬಿಎಸ್‌ವೈ ಭೇಟಿ
ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ (Gayatri Siddeshwar) ಟಿಕೆಟ್ ಕೊಟ್ಟಿರುವುದು ಮಾಜಿ ಸಚಿವ ಎಂಪಿ. ರೇಣುಕಾಚಾರ್ಯ ಮತ್ತು ತಂಡವನ್ನು ಕೆರಳಿಸಿದೆ. ಟಿಕೆಟ್ ಘೋಷಣೆಗೆ ಮೊದಲಿನಿಂದಲೂ ವಿರೋಧ ಮಾಡಿಕೊಂಡು ಬಂದಿದ್ದ ರೇಣುಕಾಚಾರ್ಯ ಅವರು ಟಿಕೆಟ್ ಘೋಷಣೆಯಾದ ಮೇಲೂ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ತಮ್ಮ ಸೋಲಿಗೆ ಕಾರಣವಾದವರಿಗೆ ಮಣೆ ಹಾಕಬೇಡಿ ಎಂದು ಹೇಳುತ್ತಾ ಬಂದಿದ್ದರು. ಹೀಗಾಗಿ ಸಿದ್ದೇಶ್ವರ್ ಪತ್ನಿಯನ್ನು ಸೋಲಿಸುವುದಾಗಿ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಹಾಗೂ ಜಿ.ಎಂ. ಸಿದ್ದೇಶ್ವರ್ ನಡುವೆ ಈಗ ನೀನಾ ನಾನಾ ಪಾಲಿಟಿಕ್ಸ್ ಮುಂದುವರಿದಿದೆ. ಹೀಗಾಗಿ ದಾವಣಗೆರೆಯಲ್ಲಿ ಉಂಟಾಗಿರುವ ಬಂಡಾಯವನ್ನು ಶಮನ ಮಾಡಲು ಬಿ.ಎಸ್. ಯಡಿಯೂರಪ್ಪ ಹೊರಟಿದ್ದಾರೆ. ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ನಡುವೆ ಸಂಧಾನ ಮಾಡಲು ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು?
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಇಂದು ದಾವಣಗೆರೆಗೆ ಮತ್ತು ನಾಳೆ ಬೆಳಗಾವಿಗೆ ತೆರಳುತ್ತೇನೆ. ಅಲ್ಲಿನ ಕಾರ್ಯಕರ್ತರ ಜತೆ ಕುಳಿತು ಮಾತನಾಡಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಅಸಮಾಧಾನಗಳ ಬಗ್ಗೆ ವಿಜಯೇಂದ್ರ ಹೇಳಿದ್ದೇನು?
ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಸಂದರ್ಭದಲ್ಲಿ ಎನ್‌ಡಿಎ ಮಿತ್ರಕೂಟದಿಂದ ಒಟ್ಟಿಗೆ ಚುನಾವಣೆಯನ್ನು ಎದುರಿಸಬೇಕಿದೆ. ಇನ್ನು ಮಂಡ್ಯ ಬಿಜೆಪಿ ಮುಖಂಡರ ಸಭೆ ಕರೆಯಲಾಗಿದೆ. ಸಂಸದೆ ಸುಮಲತಾ ಅಂಬರೀಶ್ ಅವರನ್ನೂ ಭೇಟಿಯಾಗುತ್ತೇನೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Surapura Assembly constituency: ಸುರಪುರ ಉಪ ಚುನಾವಣೆಗೆ ರಾಜುಗೌಡ ಬಿಜೆಪಿ ಅಭ್ಯರ್ಥಿ; ಹೇಗಿದೆ ಕ್ಷೇತ್ರ ಚಿತ್ರಣ?
ಬಿಜೆಪಿಯಲ್ಲಿ ಅಸಮಾಧಾನ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲೂ ಅಸಮಾಧಾನ ಇಲ್ಲ. ಯಾಕೆಂದರೆ ಟಿಕೆಟ್ ಪಡೆಯಲು ಯಾರೂ ಮುಂದಾಗಿಲ್ಲ. ಆದರೆ, ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸೋಮವಾರ ಕರಡಿ ಸಂಗಣ್ಣ ಅವರನ್ನು ಕರೆಸಿ ಸಮಾಧಾನ ಮಾಡುವ ಕೆಲಸ ಆಗಿದೆ. ಯಡಿಯೂರಪ್ಪ ಅವರು ದಾವಣಗೆರೆಗೆ ಹೋಗುತ್ತಿದ್ದಾರೆ. ಅಲ್ಲೂ ಸಮಾಧಾನ ಮಾಡುವ ಕೆಲಸ ಆಗಲಿದೆ ಎಂದು ಹೇಳಿದರು.