Site icon Vistara News

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿ ಸರ್ವೆ; ಹೆಚ್ಚಿದ್ದರೆ ವಶಕ್ಕೆ;‌ ಕೇಂದ್ರ ಸಚಿವರ ಎಚ್ಚರಿಕೆ

Union Minister Pralhad Joshi statement about increase in petrol and diesel prices in the state

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯನ್ನು ಹೊರಬಿಟ್ಟಿದೆ. ಅಲ್ಲದೆ, ಆ ಪಕ್ಷದ ನಾಯಕರು ಸರ್ವೆಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಪಕ್ಷದವರು ಈಗಾಗಲೇ ನಿಮ್ಮ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ನಿಮ್ಮ ಆಸ್ತಿಯನ್ನು ಕಸಿದುಕೊಳ್ಳಲು ಹುನ್ನಾರ ಮಾಡುತ್ತಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದ ಜನರ ಆಸ್ತಿ ಕಸಿದುಕೊಳ್ಳುವ ಹುನ್ನಾರ ಇದೆ ಎಂಬುದು ಅದರ ಪ್ರಣಾಳಿಕೆಯಲ್ಲಿ (Co)ngress Manifesto ಕಾಣಿಸುತ್ತಿದೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ (Pralhad Joshi) ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಆಸ್ತಿ ಸರ್ವೇ ಮಾಡುವುದಾಗಿ ಹೇಳಿದೆ. ಅಂದರೆ, ಯಾರಲ್ಲಿ 2 ಮನೆ, 2 ವಾಹನ ಇರುವುದೋ ಅವರಿಂದ ಒಂದೊಂದು ಕಸಿದುಕೊಳ್ಳುವ ಸಂಚು ಅದು ಎಂದು ಬಣ್ಣಿಸಿದರು.

ಈ ಕಾಂಗ್ರೆಸ್‌ ಈಗ ಏನು ಮಾಡಲು ಹೊರಟಿದೆ?

ಕೆಲವರು ತಮ್ಮ ಜೀವನಾದಾಯಕ್ಕಾಗಿ 2 ಮನೆಗಳನ್ನು ಮಾಡಿಕೊಂಡಿರುತ್ತಾರೆ. ಒಂದರಲ್ಲಿ ಅವರು ವಾಸವಿದ್ದು, ಮತ್ತೊಂದನ್ನು ಬಾಡಿಗೆಗೆ ನೀಡಿ ಜೀವನ ನಡೆಸುತ್ತಿರುತ್ತಾರೆ. ಇದು ಅವರಿಗೆ ಶಾಶ್ವತವಾಗಿ ಬರುವ ಆದಾಯ ಮೂಲವಾಗಿರುತ್ತದೆ. ಆದರೆ, ಈ ಕಾಂಗ್ರೆಸ್‌ ಈಗ ಏನು ಮಾಡಲು ಹೊರಟಿದೆ? ಅಂತಹ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರವನ್ನು ಮಾಡಿದೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಲ್ಹಾದ್‌ ಜೋಶಿ ಎಚ್ಚರಿಕೆ ನೀಡಿದರು.

ಸರ್ವೇ ಬಗ್ಗೆ ಹೇಳುತ್ತಿರುವುದು ಇದಕ್ಕೇ

ಬಡವರಿಗೆ ಏನು ಬೇಕೋ ಅದನ್ನು ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ಕಾಂಗ್ರೆಸ್ ಆ ನೆಪದಲ್ಲಿ ಎಲ್ಲ ವರ್ಗದವರನ್ನು ಟಾರ್ಗೆಟ್ ಮಾಡುತ್ತಿದೆ. ಹೀಗಾಗಿಯೇ ಸರ್ವೆಗಳ ಬಗ್ಗೆ ಮಾತನಾಡುತ್ತಿದೆ. ಇದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

ಒಳಿತು ಮಾಡಬೇಕೆಂಬ ಮನಸ್ಸಿಲ್ಲ

ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ, ಬಡವರಿಗೆ ನಿಜವಾಗಿ ಒಳಿತು ಮಾಡಬೇಕೆಂಬ ಮನಸ್ಸಿಲ್ಲ. ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದಾರೆ. ಜನರು ಎಚ್ಚರದಿಂದ ಇರಬೇಕು. ಹೀಗಾಗಿ ಮತದಾನ ಮಾಡುವಾಗ ಜಾಗ್ರತೆ ಇರಲಿ ಎಂದು ಸಚಿವ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದರು.

ದೇಶವನ್ನು ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಿದೆ ಕಾಂಗ್ರೆಸ್

ಕಾಂಗ್ರೆಸ್ ಪಕ್ಷವು ಈ ದೇಶವನ್ನು ಒಂದು ರೀತಿ ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಂತಿದೆ. ಆ ಪಕ್ಷದ ಚುನಾವಣಾ ಪ್ರಣಾಳಿಕೆ ಮತ್ತು ಆ ನಾಯಕರ ಭಾಷಣ ಕೇಳಿದರೆ ಇದು ಸ್ಪಷ್ಟವಾಗುತ್ತಿದೆ. ಮಾವೋವಾದಿ ಜಗತ್ತಿನಲ್ಲೇ ವಿಫಲತೆ ಕಂಡಿದೆ. ಆದರೆ, ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಅದನ್ನು ತರಲು ಹೊರಟಂತಿದೆ. ಜನ ಎಚ್ಚರದಿಂದ ಇರಬೇಕು. ಇಂತಹ ಯೋಚನೆ ಮಾಡುವ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಸಚಿವ ಜೋಶಿ ಕರೆ ಕೊಟ್ಟರು.

Exit mobile version