Site icon Vistara News

Lok Sabha Election 2024: ನಾಳೆಯಿಂದ ಕುರುಡು ಮಲೆಯಿಂದಲೇ ಕಾಂಗ್ರೆಸ್‌ ಪ್ರಚಾರಕ್ಕೆ ನಾಂದಿ; ಆದ್ರೂ ಬಗೆಹರಿದಿಲ್ಲ ಕೋಲಾರ ಟೆನ್ಷನ್!‌

ramesh kumar kh muniappa lok sabha election 2024

ಕೋಲಾರ: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಬಿರುಸಿಗೆ ಕೋಲಾರದ (Kolar) ಕುರುಡು ಮಲೆ ದೇವಸ್ಥಾನದಿಂದಲೇ (Kurudumale Temple) ಓಂನಾಮ ಬರೆಯಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದ್ದು, ನಾಳೆಯಿಂದಲೇ (ಮಾ.29) ಪ್ರಜಾಧ್ವನಿ- 2 ಯಾತ್ರೆ (prajadwani yatra) ಪ್ರಾರಂಭ ಆಗಲಿದೆ. ಆದರೆ ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ (Kolar Congress candidate) ಕುರಿತಾದ ಟೆನ್ಷನ್‌ ಇನ್ನೂ ಬಗೆಹರಿದಿಲ್ಲ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ಯಾತ್ರೆ ನಾಳೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ನಡೆಯುವ ಮತದಾನದ ಕ್ಷೇತ್ರಗಳ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಬೇಕಿದೆ. ಯಾತ್ರೆಗಾಗಿ ಸುಸಜ್ಜಿತ ಬಸ್‌ ಸಿದ್ಧಗೊಂಡಿದೆ.

ಯಾತ್ರೆಯ ಬಸ್ಸಿನ ಹೊರಭಾಗದಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಜಾಹಿರಾತು, ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು, ಎಐಸಿಸಿ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳು ಮುಂತಾದ ಪ್ರಕಟಣೆಗಳಿವೆ. ʼಡಬಲ್ ಸರ್ಕಾರ- ಡಬಲ್ ಗ್ಯಾರಂಟಿʼ ಎಂಬ ಘೋಷಣೆ ಇದೆ.

ಬಸ್‌ನೊಳಗೆ 20 ಜನ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಒಳಗೆ ಶೌಚಾಲಯ ಕೂಡ ಮಾಡಿಕೊಳ್ಳಲಾಗಿದೆ. ಬಸ್‌ನಲ್ಲಿ ಒಳಗಿಂದಲೇ ಮೇಲೆ ಬರಲು ಲಿಫ್ಟ್ ವ್ಯವಸ್ಥೆ ಮಡಲಾಗಿದ್ದು, ಲಿಫ್ಟ್ ಮೂಲಕ ಹೊರಬಂದು ಜನರತ್ತ ಕೈ ಬೀಸಲು, ಭಾಷಣ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಯಾತ್ರೆಯ ಕ್ಷಣ ಬರುತ್ತಿದ್ದರೂ ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿಯ ವಿಚಾರ ಬಗೆಹರಿಯದೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ತಲೆ ನೋವು ಹೆಚ್ಚಿಸಿದೆ. ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ರಮೇಶ್ ಕುಮಾರ್ ಹಾಗೂ ಕೆ.ಎಚ್ ಮುನಿಯಪ್ಪ‌ ಬಣಗಳು ನಾನು ಬಗ್ಗಲ್ಲ ಎಂದು ಕೂತುಬಿಟ್ಟಿವೆ. ನಾಳೆಯಿಂದ ಯಾತ್ರೆ ಆರಂಭವಾಗುವುದರಿಂದ, ಇಂದು ಸಂಜೆಯೊಳಗೆ ಕೋಲಾರ ಅಭ್ಯರ್ಥಿ ಫೈನಲ್ ಆಗಲೇಬೇಕಾದ ಸ್ಥಿತಿ ಇದೆ.

ಮುನಿಯಪ್ಪ ಕಡೆಯವರು ಅಭ್ಯರ್ಥಿಯಾದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ರಮೇಶ್‌ ಕುಮಾರ್‌ ಅವರ ಬಣದಲ್ಲಿರುವ ಹಲವು ಶಾಸಕರು, ಎಂಎಲ್‌ಸಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಮೇಶ್‌ ಕುಮಾರ್‌ ಕಡೆಯವರು ಅಭ್ಯರ್ಥಿಯಾದರೆ ಮುನಿಯಪ್ಪ ಕಡೆಯಿಂದ ಮುನಿಸು ಖಚಿತ. ಹೀಗಾಗಿ, ಅಭ್ಯರ್ಥಿ ಪೈನಲ್ ಆದರೂ ಸಂಕಷ್ಟ, ಆಗದೆ ಹೋದರೂ ಸಂಕಷ್ಟ ಎಂಬತಾಗಿದ್ದು, ಉಭಯ ಬಣ ಕಾಳಗಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುಸ್ತಾಗಿದೆ.

ಚಿಕ್ಕಬಳ್ಳಾಪುರವೂ ಟೆನ್ಷನ್!

ಕೈ ಪಕ್ಷಕ್ಕೆ ಕೋಲಾರದೊಂದಿಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಕೂಡ ಒತ್ತಡ ಸೃಷ್ಟಿಸಿದೆ. ರಕ್ಷಾ ರಾಮಯ್ಯ ಮತ್ತು ಶಿವಶಂಕರ ರೆಡ್ಡಿ ನಡುವೆ ಟಿಕೆಟ್‌ಗಾಗಿ ಕಾದಾಟವಿದೆ. ಈ ನಡುವೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಕೂಡ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದ ಮಾಜಿ ಸಂಸದರೂ ಆದ ಮೊಯಿಲಿ ತಮಗೇ ಟಿಕೆಟ್‌ ನೀಡುವಂತೆ ದಿಲ್ಲಿಯಲ್ಲಿ ಸೋನಿಯಾ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ರಕ್ಷಾ ರಾಮಯ್ಯ ಅವರಿಗೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಟಿಕೆಟ್ ಕೊಡಬೇಡಿ. ಜಿಲ್ಲಾ ಸಮಿತಿ ಕಳುಹಿಸಿದ ವೀರಪ್ಪ ಮೊಯ್ಲಿ ಇಲ್ಲವೇ, ಶಿವಶಂಕರರೆಡ್ಡಿ ಹೆಸರು ಅಂತಿಮ ಮಾಡುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ.

ಆದರೆ ಹೈಕಮಾಂಡ್‌ ಈಗಾಗಲೇ ರಕ್ಷಾ ರಾಮಯ್ಯ ಹೆಸರು ಅಂತಿಮ ಮಾಡಿದೆ. ಅಧಿಕೃತ ಘೋಷಣೆ ಒಂದೇ ಬಾಕಿಯಾಗಿದೆ. ಆದರೆ ಇದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಪತ್ರ ಬರೆದಿದ್ದು, ನಿಮ್ಮ ನಿರ್ಧಾರ ಪುನರ್ ಪರಿಶೀಲನೆ ಮಾಡಿ ಎಂದಿದ್ದಾರೆ. ತಮ್ಮ ಮನವಿಗೆ ಮಣಿಯದಿದ್ದರೆ ಕೋಲಾರದ ಮಾದರಿಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಕೋಲಾರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲೂ ಭಿನ್ನಮತ; ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡದಂತೆ ಆಗ್ರಹ

Exit mobile version