Site icon Vistara News

Lok Sabha Election 2024: ಕಾಂಗ್ರೆಸ್‌ ಪ್ರಣಾಳಿಕೆ ಪ್ರಕಟ; ʼನಾರಿ ನ್ಯಾಯ’ ಗ್ಯಾರಂಟಿಯಲ್ಲಿ ಏನೇನಿದೆ?

Mallikarjuna Kharge

kharge

ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಕಾಂಗ್ರೆಸ್‌ ಸಜ್ಜಾಗಿದೆ. ಈ ಬಾರಿ ಹೇಗಾದರೂ ಅಧಿಕಾರ ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಇಂದು (ಮಾರ್ಚ್‌ 13) ಕೈ ಪಡೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 5 ಘೋಷಣೆಗಳನ್ನು ಹೊರಡಿಸಲಾಗಿದೆ. ಅದರಲ್ಲೂ ಮಹಿಳೆಯನ್ನು ಗಮನದಲ್ಲಿಟ್ಟು ಈ ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಇದಕ್ಕೆ ʼನಾರಿ ನ್ಯಾಯ’ ಗ್ಯಾರಂಟಿ ಎಂದು ಹೆಸರಿಡಲಾಗಿದೆ. ಈ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ʼನಾರಿ ನ್ಯಾಯ ಗ್ಯಾರಂಟಿʼಯಲ್ಲಿ ಏನಿದೆ?

‘ನಾರಿ ನ್ಯಾಯ’ ಗ್ಯಾರಂಟಿ ಅಡಿಯಲ್ಲಿ ಕಾಂಗ್ರೆಸ್ ಐದು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ‘ಮಹಾಲಕ್ಷ್ಮೀ’, ‘ಆದಿ ಆಬಾಧಿ ಪೂರಾ ಹಕ್’, ‘ಶಕ್ತಿ ಕಾ ಸಮ್ಮಾನ್’, ‘ಅಧಿಕಾರ್ ಮೈತ್ರಿ’, ಮತ್ತು ‘ಸಾವಿತ್ರಿಬಾಯಿ ಫುಲೆ ಹಾಸ್ಟೆಲ್’ ಇವು ಈ 5 ಯೋಜನೆಗಳು.

ಮಹಾಲಕ್ಷ್ಮೀ: ಇದರ ಅಡಿಯಲ್ಲಿ ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ನೀಡಲಾಗುತ್ತದೆ.

ಆದಿ ಆಬಾಧಿ ಪೂರಾ ಹಕ್​: ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕುಗಳು ಸಿಗುತ್ತವೆ.

ಶಕ್ತಿ ಕಾ ಸಮ್ಮಾನ್: ಈ ಯೋಜನೆಯ ಮೂಲಕ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.

ಅಧಿಕಾರ್‌ ಮೈತ್ರಿ: ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಪ್ಯಾರಾ-ಲೀಗಲ್ ಅಂದರೆ ಕಾನೂನು ಸಹಾಯಕರನ್ನು ಅಧಿಕಾರ ಮೈತ್ರಿಯಾಗಿ ನೇಮಿಸುವ ಯೋಜನೆಯೇ ಅಧಿಕಾರ್‌ ಮೈತ್ರಿ.

ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಕನಿಷ್ಠ ಒಂದು ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ ನಿರ್ಮಿಸಲಾಗುವುದು ಮತ್ತು ಇಡೀ ದೇಶದಲ್ಲಿರುವ ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.

“1926ರಿಂದ ಇಲ್ಲಿಯವರೆಗೆ ನಮ್ಮ ವಿರೋಧಿಗಳು ಹುಟ್ಟಿದಾಗಿನಿಂದ ನಾವು ಪ್ರಣಾಳಿಕೆಗಳನ್ನು ತಯಾರಿಸುತ್ತಿದ್ದೇವೆ ಮತ್ತು ಆ ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ.ಬನೀವೆಲ್ಲರೂ ಕಾಂಗ್ರೆಸ್‌ಗೆ ನಿಮ್ಮ ಆಶೀರ್ವಾದವನ್ನು ನೀಡುತ್ತಲೇ ಇರುತ್ತೀರಿ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಈ ಹೋರಾಟದಲ್ಲಿ ನಮ್ಮ ಕೈಗಳನ್ನು ಬಲಪಡಿಸುತ್ತೀರಿ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ: KS Eshwarappa : ಹಾವೇರಿ ಟಿಕೆಟ್‌ ಸಿಗದಿದ್ರೆ ಕೆ.ಎಸ್ ಈಶ್ವರಪ್ಪ ರೆಬೆಲ್‌ ಆಗೋದು ಗ್ಯಾರಂಟಿ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವಾರ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಐದು ಪ್ರಮುಖ ಚುನಾವಣಾ ಭರವಸೆಗಳನ್ನು ನೀಡಿದ್ದರು. ಅದರಲ್ಲಿ ಎಲ್ಲ ಪದವಿ / ಡಿಪ್ಲೋಮಾ ಹೊಂದಿರುವವರಿಗೆ ವರ್ಷಕ್ಕೆ 1 ಲಕ್ಷ ರೂ.ಗಳ ಸ್ಟೈಫಂಡ್ ನೀಡುವ ಖಾತರಿಯೂ ಸೇರಿತ್ತು. ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಸದ್ಯ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಇದುವರೆಗೆ 82 ಹೆಸರುಗಳನ್ನು ಪ್ರಕಟಿಸಿದೆ.

Exit mobile version