ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ದಿನೇ ದಿನೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಈಗ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ (CP Yogeshwar) ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಸುದ್ದಿಯಲ್ಲಿದ್ದಾರೆ. ತಂದೆಯ ವಿರುದ್ಧವೇ ಸೆಟೆದು ನಿಂತಿರುವ ಮಗಳು ಈಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲ ಮೇಲೆ ನಿಂತಿದ್ದು, ಡಿಕೆ ಬ್ರದರ್ಸ್ (DK Brothers) ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್ (DK Shivakumar), ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತೇನೆ ಎಂದು ನನ್ನನ್ನು ಮತ್ತು ಡಿ.ಕೆ. ಸುರೇಶ್ (DK Suresh) ಅವರನ್ನು ಭೇಟಿ ಆಗಿದ್ದರು. ಅಪ್ಪ – ಮಗಳನ್ನು ದೂರ ಮಾಡುವುದು ಬೇಡ ಎಂದು ನಾನು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದಾಗಿ ನಮ್ಮನ್ನು ಭೇಟಿಯಾಗಿದ್ದರು. ಪಾಪ ಧೈರ್ಯವಂತ ಹೆಣ್ಣು ಮಗಳು. ಈಗ ಏನೋ ಧೈರ್ಯ ಮಾಡಿದ್ದಾಳೆ. ಆದರೆ, ಅಪ್ಪ – ಮಗಳನ್ನು ದೂರ ಮಾಡಬಾರದು ಅಂತ ನಾನು ಸುಮ್ಮನೆ ಇದ್ದೇನೆ. ನಾಳೆ ಜನ ನನ್ನನ್ನು ಪ್ರಶ್ನೆ ಮಾಡಬಾರದಲ್ಲವೇ? ನೀವೇಕೆ ಅಪ್ಪ – ಮಗಳನ್ನು ದೂರ ಮಾಡಿದಿರಿ ಎಂದು ಕೇಳಬಾರದಲ್ಲವೇ? ಆ ಕಾರಣಕ್ಕಾಗಿಯೇ ನಾನು ಸುಮ್ಮನೆ ಇದ್ದೇನೆ ಎಂದು ಹೇಳಿದ್ದಾರೆ.
ಭಾವನಾತ್ಮಕ ಸಂಬಂಧದ ಬಗ್ಗೆ ಡಿಕೆಶಿ ಮಾತು
ನಿಶಾ ಹಾಗೂ ಅವರ ತಾಯಿ ಇಬ್ಬರೂ ನನಗೆ ಪರಿಚಯವಿದ್ದಾರೆ. ಆದರೆ, ಅವರ ಕುಟುಂಬದಲ್ಲಿ ಏನೇನಿದೆಯೋ? ಸಿ.ಪಿ. ಯೋಗೇಶ್ವರ್ ಈಗಿನ ಸಂಸಾರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾಳೆ ಅಪ್ಪ – ಮಗಳು ಸರಿ ಹೋಗಬಹುದು. ಹೀಗಾಗಿ ನಾನು ಅಪ್ಪ – ಮಗಳನ್ನು ದೂರ ಮಾಡಬಾರದು ಎಂದು ಇನ್ನೂ ತೀರ್ಮಾನ ಹೇಳಿಲ್ಲ. ನಾಳೆ ಆ ಹೆಣ್ಣು ಮಗಳಿಗೆ ಮದುವೆ ಮಾಡಬೇಕಿದೆ. ಅದಕ್ಕೆ ಅಕ್ಷತೆ ಕಾಳು ಹಾಕಬೇಕು, ಹಾಲು ಎರೆಯಬೇಕು. ಈಗಾಗಲೇ ಆಕೆಗೆ ಮದುವೆ ಆಗಿ ಅವರದ್ದೇ ಕುಟುಂಬ ಇದ್ದಿದ್ದರೆ ನಿಶಾ ಅವರ ಪಕ್ಷ ಸೇರ್ಪಡೆ ವಿಚಾರ ಬೇರೆಯಾಗುತ್ತಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಡಿ.ಕೆ. ಸುರೇಶ್ ಹೇಳಿದ್ದೇನು?
ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಅವರು ಈಚೆಗೆ ಪ್ರತಿಕ್ರಿಯೆ ನೀಡಿ, ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ನಿಶಾ ಯೋಗೇಶ್ವರ್ ಸೇರ್ಪಡೆ ಬಗ್ಗೆ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಅವರು ಬಹಳ ದಿನಗಳಿಂದ ಪಕ್ಷ ಸೇರುವುದಾಗಿ ಹೇಳುತ್ತಿದ್ದಾರೆ. ಆದರೆ, ಇದರ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜತೆ ಚರ್ಚೆ ಮಾಡಬೇಕಿದೆ. ಅವರ ಅಭಿಪ್ರಾಯಗಳನ್ನು ಪಡೆದ ಬಳಿಕ ತೀರ್ಮಾನಿಸಲಾಗುವುದು ಎಂದು ಹೇಳಿದ್ದರು.
ನಿಶಾ ಹೇಳೋದೇನು?
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಹಳ ದಿನಗಳ ಹಿಂದೆಯೇ ನಾನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್ ಸೇರಲು ನಾನು ಉತ್ಸುಕಳಾಗಿದ್ದೇನೆ. ಆದರೆ, ನನನ್ನು ಯಾವಾಗ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅವರೇ ಸೂಕ್ತ ಸಮಯದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಏ.1ರಿಂದ ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಶುರು; ಪ್ರತಿ ಅಭ್ಯರ್ಥಿ ಜತೆಗೂ ಟೀಂ ನಿಯೋಜನೆ!
ಅಪ್ಪನ ವಿರುದ್ಧ ಸ್ಪರ್ಧೆಗೆ ರೆಡಿಯಾದರೇ ನಿಶಾ
ಅಲ್ಲದೆ, ಈಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಾವು ಕಾಂಗ್ರೆಸ್ ಸೇರ್ಪಡೆಯಾಗಲು ತಂದೆಯವರ ಸಹಮತವೂ ಇದೆ ಎಂದು ಹೇಳಿದ್ದರು. ಅಲ್ಲದೆ, ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿದರೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ಹಾಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಅಲ್ಲಿ ಜಯ ಸಾಧಿಸಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಬೇಕು. ಹೀಗಾಗಿ ಅಂತಹ ಸಂದರ್ಭದಲ್ಲಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಲು ಸಿದ್ಧ ಎಂದು ಎಂಬರ್ಥದಲ್ಲಿ ಹೇಳಿದ್ದರು. ಅಲ್ಲದೆ, ಎಚ್‌ಡಿಕೆ ರಾಜೀನಾಮೆ ನೀಡಿದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಡಿಕೆ ಬ್ರದರ್ಸ್ ಕೊನೇ ಘಳಿಗೆಯಲ್ಲಿ ಯಾವ ರೀತಿ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.