ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರಗಳು ಜೋರಾಗುತ್ತಿದ್ದು, ಪರಸ್ಪರ ಆರೋಪ – ಪ್ರತ್ಯಾರೋಪಗಳು ಹೆಚ್ಚುತ್ತಿವೆ. ಈಗ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪಾತಿವ್ರತ್ಯದ ಬಗ್ಗೆ ಮಾತನಾಡಿದ್ದಾರೆ. “ಸಿಎಂ ಸಿದ್ದರಾಮಯ್ಯ ಅವರ ಪಾತಿವ್ರತ್ಯ ನಮಗೆ ಗೊತ್ತಿರೋದೇ. ಅವರ ತಪಸ್ಸಿನ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೇನಾದರೂ ಹೇಳಿದರೆ ಅದು ಅವರಿಗೇ ಉಲ್ಟಾ ಆಗಲಿದೆ” ಎಂದು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು, ನಾಡಿನ ಸಂಸ್ಕೃತಿ ಹೀಗೇನೋ ಎಂಬಂತೆ ಮಾತನಾಡಿದ್ದಾರೆ. ಮೋದಿ ಮೋದಿ (PM Narendra Modi) ಎನ್ನುವ ಯುವಜನರಿಗೆ ಕಪಾಳಮೋಕ್ಷ ಮಾಡಬೇಕು ಎಂದಿದ್ದಾರೆ. ಸಿದ್ದರಾಮಯ್ಯನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯವರ ಮನೆ ಹಾಳಾಗಲಿ ಎಂದು ಶಾಪ ಕೊಟ್ಟರು. ತಪಸ್ವಿ, ಪತಿವ್ರತೆ ಶಾಪ ಕೊಟ್ಟರೆ ತಟ್ಟುವುದಾಗಿ ಹೇಳುತ್ತಾರೆ. ಸಿದ್ದರಾಮಯ್ಯನವರ ಪಾತಿವ್ರತ್ಯ ನಮಗೆ ಗೊತ್ತಿರೋದೇ. ಅವರ ತಪಸ್ಸಿನ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೇನಾದರೂ ಹೇಳಿದರೆ ಅದು ಅವರಿಗೇ ಉಲ್ಟಾ ಆಗಲಿದೆ. ಈ ಹಿಂದೆ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸೀಟು ಬರುವುದಿಲ್ಲ ಎಂದಿದ್ದರು. ಅವರ ಶಾಪ ತಟ್ಟಿ ಕಾಂಗ್ರೆಸ್ಸಿಗೆ ಒಂದು, ಜನತಾದಳಕ್ಕೆ ಒಂದು ಸೀಟು ಬಂದಿತ್ತು. ಈಗಿನ ಅವರ ಶಾಪ ಅವರಿಗೇ ತಿರುಗುಬಾಣವಾದರೆ, 2019ರ ಫಲಿತಾಂಶ ಮರುಕಳಿಸಬಹುದು ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: Lok Sabha Election 2024: ಆಪರೇಷನ್ ದಾವಣಗೆರೆ ಬಿಜೆಪಿ ಸಕ್ಸಸ್; ರವೀಂದ್ರನಾಥ್‌ಗೆ ಚುನಾವಣೆ ಹೊಣೆ, ಬಂಡಾಯ ಶಮನ
ಕಾಂಗ್ರೆಸ್ಸಿಗರಿಗೆ ಸೋಲಿನ ಹತಾಶೆ ಕಾಡುತ್ತಿರುವಂತಿದೆ. ಜನರೇ ಮೋದಿ ಮೋದಿ ಎನ್ನುವ ಕಾರಣ ಅಸಹಾಯಕತೆ ಕಾಡುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಸಿ.ಟಿ. ರವಿ ಕಿಡಿಕಾರಿದರು.
ಕಾಂಗ್ರೆಸ್ಸಿಗರು “ಕೈಲಾಗದವ ಮೈ ಪರಚಿಕೊಂಡ” ಎಂಬಂತೆ ದ್ವೇಷ ಮತ್ತು ಅಸಹಿಷ್ಣುತೆಯ ಮಾತುಗಳನ್ನು ಆಡುತ್ತಿದ್ದಾರೆ. ಇವರ ನಾಯಕ ರಾಹುಲ್ ಗಾಂಧಿಯವರು (Rahul Gandhi) ವಿದೇಶಕ್ಕೆ ಹೋಗಿ ಭಾರತವನ್ನು ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ವಿರೋಧ ಮತ್ತು ದ್ವೇಷಕ್ಕಾಗಿ ಭಾರತ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತದ ಸಹಿಷ್ಣುತೆಯನ್ನು ಪ್ರಶ್ನಿಸಿ ಅವಮಾನ ಮಾಡಿದ್ದಾರೆ ಎಂದು ಸಿ.ಟಿ. ರವಿ ಆಕ್ಷೇಪಿಸಿದರು.
ಈ ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟದ ನೇತೃತ್ವ ಇನ್ನೂ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಯಾವ ನೀತಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎಂಬುದಕ್ಕೆ ನೀತಿಯೇ ಇಲ್ಲ. ಅಸಹಿಷ್ಣುತೆ, ದ್ವೇಷವೇ ಇಂಡಿ ಒಕ್ಕೂಟದ ನೀತಿಯಾಗಿದೆ ಎಂದು ಸಿ.ಟಿ. ರವಿ ಟೀಕಿಸಿದರು.
ಮೋದಿ ಪ್ರಧಾನಿ ಆಗುತ್ತಾರೆಂಬ ಅಸಹಾಯಕತೆ
ಡಿಎಂಕೆ ನಾಯಕ ಸ್ಟಾಲಿನ್‍ರಿಂದ ಆರಂಭಿಸಿ ಉದಯನಿಧಿ, ಸಚಿವರಾದ ಅನಿತಾ ರಾಧಾಕೃಷ್ಣನ್‌ವರೆಗೆ ದ್ವೇಷದ ಮಾತುಗಳನ್ನೇ ಆಡುತ್ತಿದ್ದಾರೆ. ಹತಾಶೆಯ ಪರಿಣಾಮವಾಗಿ ಈ ಮಾತುಗಳನ್ನು ಆಡುವುದು ಸ್ಪಷ್ಟ ಎಂದು ಸಿ.ಟಿ. ರವಿ ವಿವರಿಸಿದರು. 3ನೇ ಬಾರಿ ಮೋದಿಯವರು ಪ್ರಧಾನಿ ಆಗುತ್ತಾರೆಂಬ ಅಸಹಾಯಕತೆ ಅವರ ಬಾಯಿಂದ ದ್ವೇಷದ ಮಾತುಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ದೂರದೃಷ್ಟಿಯೊಂದಿಗೆ ಕಾರ್ಯ ನಿರ್ವಹಣೆ
ನಮ್ಮ ಪ್ರಧಾನಿಯವರು ವಿಜನ್ (ದೂರದೃಷ್ಟಿ) ಇಟ್ಟುಕೊಂಡು ಮಿಷನ್ ಮೋಡ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗಲಿದೆ. ಆ ಸಂದರ್ಭದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿನ ನಂಬರ್ 1 ಸ್ಥಾನಕ್ಕೆ ಏರಬೇಕೆಂಬ ದೂರದೃಷ್ಟಿ ನಮ್ಮದು. ಆರ್ಥಿಕ- ಶೈಕ್ಷಣಿಕ ಸೇರಿ ಎಲ್ಲ ರಂಗಗಳಲ್ಲಿ ಸಾಮಥ್ರ್ಯಶಾಲಿ ರಾಷ್ಟ್ರವಾಗಬೇಕೆಂಬ ದೂರದೃಷ್ಟಿಯ ಸಂಕಲ್ಪ ನಮ್ಮ ಪ್ರಧಾನಿಯವರದು ಎಂದು ಸಿ.ಟಿ. ರವಿ ವಿವರಿಸಿದರು.
ದ್ವೇಷ ಕಾರುವುದೇ ಕಾಂಗ್ರೆಸ್ಸಿಗರ ಅಜೆಂಡಾ
ಸುಳ್ಳು ಹೇಳುವುದು ಮತ್ತು ದ್ವೇಷ ಕಾರುವುದೇ ಕಾಂಗ್ರೆಸ್ಸಿಗರ ಅಜೆಂಡಾ. ಸುಳ್ಳು- ದ್ವೇಷದ ಮೂಲಕ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ದ್ವೇಷದ ಕಾರಣಕ್ಕೆ ಕಾಂಗ್ರೆಸ್ಸಿನವರು ಹಲವು ಚುನಾವಣೆಗಳಲ್ಲಿ ಬೆಲೆ ತೆತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಗುಜರಾತ್ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತೆರಳಿ, ‘ಮೌತ್ ಕಾ ಸೌದಾಗರ್’ ಎಂದು ಕರೆದಿದ್ದರು. ಗುಜರಾತ್ ಜನರು ಅದಕ್ಕೆ ಉತ್ತರ ಕೊಟ್ಟರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಥಿಂಕ್ ಟ್ಯಾಂಕ್‍ನಲ್ಲಿ ಒಬ್ಬರಾದ ಮಣಿಶಂಕರ್ ಅಯ್ಯರ್, ‘ಚಾಯ್‍ವಾಲಾ ಚಾಯ್ ಬೇಜ್‍ನೆ ಕೇಲಿಯೇ ಲಾಯಕ್’ ಎಂದಿದ್ದರು. ಅಲ್ಲದೆ, ದುಡಿಯುವ ವರ್ಗಕ್ಕೆ ಅಪಮಾನ ಮಾಡಿದ್ದರು. ದುಡಿಯುವ ವರ್ಗ ಮೋದಿಯವರನ್ನು ಆಯ್ಕೆ ಮಾಡಿ, ಬಿಜೆಪಿ ಗೆಲ್ಲಿಸಿ ಆ ಚುನಾವಣೆಯಲ್ಲಿ ಉತ್ತರ ಕೊಟ್ಟರು ಎಂದು ವಿಶ್ಲೇಷಿಸಿದರು. ಚಾಯ್ ಪೇ ಚರ್ಚಾ ಮೂಲಕ ಚಾಯ್‍ವಾಲಾನ ತಾಕತ್ತನ್ನು ತೋರಿಸಿ ಚಾಯ್‍ವಾಲಾ ದೇಶದ ಪ್ರಧಾನಮಂತ್ರಿಯಾದರು ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ: Lok Sabha Election 2024: ರೆಸಾರ್ಟ್‌ನಲ್ಲಿ ಮೂರು ರಾತ್ರಿ, ಎರಡು ಹಗಲು ಸಿಎಂ ಸಿದ್ದರಾಮಯ್ಯ ಮಾಡಿದ್ದೇನು?
Live : ಪತ್ರಿಕಾಗೋಷ್ಠಿ
— BJP Karnataka (@BJP4Karnataka) March 26, 2024
ಸ್ಥಳ : ಚುನಾವಣಾ ಮಾಧ್ಯಮ ಕೇಂದ್ರ, ಜಿ. ಎಂ. ರಿಜಾಯ್ಸ್, ಬೆಂಗಳೂರು https://t.co/Dj20UrIiLv
ಅಂತರಂಗದಲ್ಲಿ ಸಭ್ಯತೆ ಇಲ್ಲ
ಕಾಂಗ್ರೆಸ್ ವಕ್ತಾರರೊಬ್ಬರು ಪ್ರಧಾನಿ ನರೇಂದ್ರ ಮೋದಿ ಸಾವನ್ನೇ ಬಯಸಿದರು. ಅವರು ಇನ್ನೂ ಕೇಸು ಎದುರಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿಯವರನ್ನು ವಿಷ ಸರ್ಪಕ್ಕೆ ಹೋಲಿಸಿದರು. ಬೆಳಗ್ಗೆ ಎದ್ದು ಮೋದಿಯವರ ಮುಖ ನೋಡಬೇಡಿ ಎಂದರು. ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆಯವರು ಚೋರ್ ಗುರು, ಚಂಡಾಲ ಶಿಷ್ಯ ಎಂದರು. ಹೊರಗೆ ಸಭ್ಯತೆಯಿಂದಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸಲು ಅಸಾಧ್ಯ ಎಂದು ತಿಳಿಸಿದರು. ಅವರ ಮಾತು ಕೇಳಿದಾಗ ಅವರ ಅಂತರಂಗದಲ್ಲಿ ಸಭ್ಯತೆ ಉಳಿದಿಲ್ಲವೇನೋ ಅನಿಸಿತು ಎಂದು ಸಿ.ಟಿ. ರವಿ ಕಿಡಿಕಾರಿದರು.