ಬೆಂಗಳೂರು: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಯಾವ ಕೆಲವು ಕ್ಷೇತ್ರಗಳಲ್ಲೂ ಯಾವುದೇ ರೀತಿಯ ಒಳಪೆಟ್ಟು ಇರುವುದಿಲ್ಲ. ಈಗಾಗಲೇ ಟಿಕೆಟ್ ಕೈತಪ್ಪಿದ ಎಲ್ಲರ ಜತೆ ವೈಯಕ್ತಿಕವಾಗಿ ಮಾತನಾಡುವ ಕೆಲಸ ಆಗಿದೆ. ಒಂದೊಂದು ಮತವೂ ಎಲ್ಲರಿಗೂ ಮುಖ್ಯ, ಒಂದೊಂದು ಸೀಟೂ ಮುಖ್ಯ. ಅಸಮಾಧಾನಿತರ ಮನವೊಲಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಇನ್ನೊಂದು ಮುಖ್ಯ ಸಂಗತಿ ಎಂದರೆ, ಇಲ್ಲಿ ಬೀಳುವ ಪ್ರತಿಯೊಂದು ಮತವೂ ನರೇಂದ್ರ ಮೋದಿ ಅವರ ಮುಖ ನೋಡಿಕೊಂಡು ಎಂಬುದು ತಿಳಿದಿರಲಿ. ನನಗೆ ಮತ ಬಂತು ಅಂತ ಯಾರೂ ಅಂದುಕೊಳ್ಳುವುದು ಬೇಡ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ, ತಮ್ಮ ವಿರುದ್ಧ ಪ್ರತಿಭಟನೆ ಮಾಡಿಸಿದವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ಯಾವ ಉದ್ದೇಶವಿದೆಯೋ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಆಕಾಂಕ್ಷಿಯೇ ಆಗಿರಲಿಲ್ಲ. ನಾನು ಆಕಾಂಕ್ಷಿಯೇ ಅಲ್ಲ ಅಂದ ಮೇಲೆ ಆ ಪ್ರಶ್ನೆಯೇ ಬರಲ್ಲ. ನಾನು ಟಿಕೆಟ್ ಕೇಳಿರಲಿಲ್ಲ, ಹೈಕಮಾಂಡ್ ಕೊಟ್ಟರೆ ಸ್ಪರ್ಧೆ ಮಾಡುತ್ತಿದ್ದೆ. ನಾನು ಆಕಾಂಕ್ಷಿ ಆಗಿದ್ದಿದ್ದರೆ ಅದಕ್ಕೆ ಪೂರಕ ಪ್ರಯತ್ನ ಮಾಡುತ್ತಿದ್ದೆ. ಇಡೀ 28 ಕ್ಷೇತ್ರಗಳಲ್ಲಿ ಯಾವ್ಯಾವ ವ್ಯಕ್ತಿಗೆ ಯಾವ ಯಾವ ಪಕ್ಷದವರಿಗೆ ಜನಾಭಿಪ್ರಾಯ ಇತ್ತು ಅಂತ ಗೊತ್ತಾಗುತ್ತದೆ ಎಂದು ಸಿ.ಟಿ. ರವಿ ಹೇಳಿದರು.
ಈಶ್ವರಪ್ಪ ಪಕ್ಷ, ದೇಶದ ಹಿತ ನೋಡಲಿ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಅಸಮಾಧಾನಗೊಂಡಿದ್ದ ಇಂದು ಬೆಂಬಲಿಗರ ಸಭೆ ಕರೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಈಶ್ವರಪ್ಪ ನಮ್ಮ ಹಿರಿಯ ನಾಯಕರು. ಅವರು ಯಾವುದೇ ನಿರ್ಣಯ ತೆಗೆದುಕೊಂಡೂ ಸಾವಿರ ಬಾರಿ ಯೋಚಿಸಬೇಕು. ಅವರ ನೋವು, ಅವರ ಭಾವನೆ ನಮಗೆ ಅರ್ಥ ಆಗುತ್ತದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಪಕ್ಷ, ದೇಶದ ಹಿತ ನೋಡಿಕೊಂಡು ಈಶ್ವರಪ್ಪ ತೀರ್ಮಾನ ಮಾಡಲಿ. ಇದು ನನ್ನ ಮನವಿ. ಯಾರಿಗೂ ಅಸಮಾಧಾನ ಇಲ್ಲ, ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಡಿಕೆ ಬ್ರದರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಹಿಂದೆ ‘ಆಪರೇಷನ್ ಜೆಡಿಎಸ್ ಕಾರ್ಯಕರ್ತ’?
ಯಾರಿಗೇ ಮತ ಬಂದರೂ ಮೋದಿಗೇ ಮತ
ಕೇಂದ್ರ ಚುನಾವಣಾ ಆಯೋಗವು ಮಾ. 16ರಂದು ಸುದ್ದಿಗೋಷ್ಠಿ ಕರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಕಳೆದ ಸಲವೂ ಮಾರ್ಚ್ 16ರಂದೇ ಲೋಕಸಭೆ ಚುನಾವಣೆ ದಿನಾಂಕವನ್ನು ಘೋಷಿಸಲಾಗಿತ್ತು. ಈ ಬಾರಿಯೂ ಮಾರ್ಚ್ 16ರಂದೇ ಘೋಷಣೆ ಆಗುತ್ತಿದೆ. ಈ ಬಾರಿ ಏಳೆಂಟು ಹಂತಗಳಲ್ಲಿ ಚುನಾವಣೆ ನಡೆಯಬಹುದು. ಜನಾಭಿಪ್ರಾಯ ಬಿಜೆಪಿ ಕಡೆ ಇರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಕ್ತಿಲ್ಲ. ಒಂದು ಮಾತು ಸತ್ಯ, ಬಹುತೇಕ ಜನ ನರೇಂದ್ರ ಮೋದಿ ಹೆಸರಿಗೇ ಮತ ಹಾಕೋದು. ಹಾಗಾಗಿ ಯಾರೂ ಸಹ ಮತ ನನಗೆ ಬಂತು, ನನಗೆ ಬಂತು ಅಂತ ಅಂದುಕೊಳ್ಳಬಾರದು. ಆ ಮತ ಮೋದಿಯವರಿಗೇ ಬಂದಿದ್ದು ಅಂತ ಮನಸಲ್ಲಿ ಇಟ್ಕೊಂಡಿರಬೇಕು. ನಮ್ಮ ಊರಿನ ಸುಗ್ಗಿ ಹಬ್ಬಕ್ಕೂ ಮುನ್ನ ಕರ್ನಾಟಕದ ಚುನಾವಣೆ ಮುಗಿಯಲಿ. ಈ ವರ್ಷವಾದರೂ ಹಬ್ಬದಲ್ಲಿ ಆನಂದವಾಗಿ ಪಾಲ್ಗೊಳ್ಳಬಹುದು ಎಂದು ಹೇಳಿದರು.