ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಪುತ್ರ ಯತೀಂದ್ರ (Yathindra Siddaramaiah) ಅವರೇ, ತಮಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಮಾಡುವ ಭರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ರೌಡಿ ಎಂದು ಕರೆದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ಅಮಿತ್ ಶಾ ಅವರನ್ನು ಇವರ ಸರ್ಕಾರ ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿಸಿತ್ತು. ಟ್ರಯಲ್ ಕೋರ್ಟ್, ಹೈಕೋರ್ಟ್, ಕೊನೆಗೆ ಸುಪ್ರೀಂ ಕೋರ್ಟ್ ಹೀಗೆ ನ್ಯಾಯಾಲಯ ಅವರನ್ನು ಆ ಪ್ರಕರಣದಿಂದ ಖುಲಾಸೆಗೊಳಿಸಿದೆ. ಹಾಗಿದ್ದರೂ ಅಮಿತ್ ಶಾ ಬಗ್ಗೆ ನಾಲಿಗೆ ಹರಿ ಬಿಡುತ್ತಿದ್ದಾರೆ. ದೇಶದ ನ್ಯಾಯಾಂಗದ ಮೇಲೆ ನಂಬಿಕೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.
ನ್ಯಾಯಾಂಗವನ್ನು ಮೀರಿದ್ದಾರೆ
ಕೋರ್ಟ್ ತೀರ್ಪು ಕೊಟ್ಟ ಮೇಲೂ ಒಬ್ಬ ಮುಖ್ಯಮಂತ್ರಿ ಮಗನಾಗಿ, ಒಮ್ಮೆ ಶಾಸಕ ಆದವರು ಹೀಗೆ ಬಾಲಿಶ ಹೇಳಿಕೆ ನೀಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಂಗವನ್ನು ಮೀರಿ ಸರ್ಟಿಫಿಕೆಟ್ ಕೊಡುವ ಮಟ್ಟಕ್ಕೆ ಬಂದಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಖಂಡಿಸಿದರು.
ಮಳೆ ಬರದಿದ್ದರೂ ಕೇಂದ್ರವೇ ತಡೆದಿದೆ ಎನ್ನದಿದ್ದರೆ ಸಾಕು
ಅಪ್ಪ-ಮಗ ಇಬ್ಬರೂ ಮಳೆ ಆಗುವುದನ್ನೂ ಕೇಂದ್ರ ಸರ್ಕಾರವೇ ತಡೆಡಿದೆ ಎನ್ನದಿದ್ದರೆ ಸಾಕು! ಎಂದು ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ವಿರುದ್ಧ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಏನೇ ಆದರೂ ಕೇಂದ್ರ ಸರ್ಕಾರವೇ ಕಾರಣ ಎಂದು ಬೊಟ್ಟು ಮಾಡುತ್ತಿದ್ದಾರೆ. ಒಳ್ಳೆಯದಾದರೆ ತಾವು, ಕೆಟ್ಟದ್ದೇನಾದರು ಘಟಿಸಿದರೆ ಕೇಂದ್ರ ಕಾರಣ ಎನ್ನುವುದು ಅಪ್ಪ-ಮಗರಿಬ್ಬರಿಗೂ ಒಂದು ಹವ್ಯಾಸವಾಗಿಬಿಟ್ಟಿದೆ. ಪ್ರತಿಯೊಂದಕ್ಕೂ ಕೇಂದ್ರವನ್ನು ದೂಷಿಸುವ ಇವರು, ನಾಳೆ ಮಳೆ ಬರದಿದ್ದರೂ ಕೇಂದ್ರದತ್ತ ಬೊಟ್ಟು ತೋರಿದರು ಅಚ್ಚರಿ ಪಡಬೇಕಿಲ್ಲ. ಮಳೆ ಆಗಿಲ್ರಿ.. ಮೋದಿ ಅವರೇ ಬಂದ್ ಮಾಡಿಸಿದ್ದಾರೆ ಎನ್ನುವಂಥ ಸ್ವಭಾವ ಇವರದ್ದು ಎಂದು ಸಚಿವ ಜೋಶಿ ಲೇವಡಿ ಮಾಡಿದರು.
ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್; ಮೋದಿ ಬಂದರೂ ಹೆದರಲ್ಲ!
ಎಚ್‌ಡಿಕೆ ಆರೋಗ್ಯದ ಮೇಲೆ ಲೇವಡಿ ಸರಿಯಲ್ಲ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಸರಿಯಲ್ಲ. ಎಚ್‌ಡಿಕೆ ಅಲ್ಲ, ಯಾವುದೇ ಪಕ್ಷದವರ ಆರೋಗ್ಯ ವಿಚಾರದಲ್ಲಿ ಸಹಾನುಭೂತಿ ತೋರಬೇಕು. ರಾಜಕೀಯ ಸೌಜನ್ಯ ತೋರಬೇಕೆ ಹೊರತು ಕ್ಷುಲ್ಲಕವಾಗಿ ವರ್ತಿಸುವುದಲ್ಲ ಎಂದು ಕಾಂಗ್ರೆಸ್ಸಿಗರಿಗೆ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಚೆನ್ನೈನಂತಹ ಆಸ್ಪತ್ರೆಯಲ್ಲಿ ಯಾರಾದರೂ ಫೇಕ್ ಆಪರೇಷನ್ ಮಾಡಿಸಿಕೊಂಡು ಬರಲು ಸಾಧ್ಯವೇ? ಮೆಡಿಕಲ್ ಸೈನ್ಸ್ ತುಂಬಾ ಅಡ್ವಾನ್ಸ್ ಆಗಿದೆ ಎಂಬ ಅರಿವು ಇವರಿಗಿಲ್ಲವೇ? ಯಾವ ಕಾಲದಲ್ಲಿ ಇದ್ದಾರಿವರು? ಆರೋಗ್ಯದ ವಿಷಯದಲ್ಲಿ ಮಾನವೀಯತೆ ಮರೆತು ವರ್ತಿಸುವುದು ಸರಿಯಲ್ಲ ಎಂದು ಸಚಿವ ಜೋಶಿ ಆಕ್ಷೇಪವನ್ನು ವ್ಯಕ್ತಪಡಿಸಿದರು.