ಮಂಡ್ಯ / ರಾಮನಗರ: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ಬಾರಿ ಕೆಲವು ಅಚ್ಚರಿಯ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅವರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ (Bangalore Rural Lok Sabha constituency) ಡಾ. ಸಿ.ಎನ್. ಮಂಜುನಾಥ್ (DR CN Manjunath) ಕೂಡ ಒಬ್ಬರು. ಈಗ ಅವರ ಗೆಲುವಿಗಾಗಿ ಪತ್ನಿ ಮನೆ ದೇವರಲ್ಲಿ ಹರಕೆ ಹೊತ್ತಿದ್ದಾರೆ. ವಿಶೇಷ ಪೂಜೆಯನ್ನೂ ಮಾಡಿಸಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಡಿ.ಕೆ. ಸುರೇಶ್ (DK Suresh) ಅವರು ಮಾರ್ಚ್ 28ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಅವರು ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಲೋಕಸಭಾ ಚುನಾವಣೆ (Lok Sabha Election 2024) ಗೆಲುವಿಗಾಗಿ ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಸಿ.ಎನ್. ಮಂಜುನಾಥ್, ಮನೆ ದೇವರ ಹೋಗಿದ್ದಾರೆ. ಡಾ. ಮಂಜುನಾಥ್ ಅವರು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಚಿಕ್ಕತಾರಹಳ್ಳಿಯ ಕೋಡಿ ಮಾರಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ಮನೆ ದೇವರ ದರ್ಶನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಮಂಡ್ಯ ಲೋಕಸಭೆ ಅಭ್ಯರ್ಥಿ ಎಚ್‌ಡಿಕೆ? ನಾಳೆಯೇ ಪ್ರಕಟ ಎಂದ ಮಾಜಿ ಸಿಎಂ!
ಲೋಕಸಭೆಯಲ್ಲಿ (Lok Sabha Election 2024) ಗೆಲುವಿಗಾಗಿ ಹರಕೆ ಹೊತ್ತ ಪತ್ನಿ
ಡಾ. ಮಂಜುನಾಥ್ ಅವರ ಪತ್ನಿ ಅನಸೂಯ ಅವರು ಮನೆ ದೇವರಲ್ಲಿ ಪತಿಯ ಗೆಲುವಿಗೆ ಹರಕೆ ಹೊತ್ತರು. ಪತಿಯನ್ನು ಗೆಲ್ಲಿಸುವಂತೆ ದೇವರ ಮೊರೆ ಹೋದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, ರಾಜ್ಯದ ಒಳಿತಿಗಾಗಿ ಹಾಗೂ ಮಳೆ ಬೆಳೆ ಆಗಲೆಂದು ಪೂಜೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮಾರ್ಚ್ 28ಕ್ಕೆ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ
ಮಾರ್ಚ್ 28ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂಬಂಧ ಡಿ.ಕೆ. ಸುರೇಶ್ ಅವರು ಅಧಿಕೃತ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಬಿಜೆಪಿಯಲ್ಲಿ ಕೆಆರ್‌ಪಿಪಿ ನಾಳೆ ವಿಲೀನ; ಅಧಿಕೃತ ಘೋಷಣೆ ಮಾಡಿದ ಜನಾರ್ದನ ರೆಡ್ಡಿ
ಎಲ್ಲರಿಗೂ ಆಹ್ವಾನ ನೀಡಿದ ಡಿ.ಕೆ. ಸುರೇಶ್
ಮುಂಬರುವ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಕಳೆದ 11 ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಜತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ನಾನು ಬದ್ಧವಾಗಿದ್ದೇನೆ. ಇದೇ ಮಾರ್ಚ್ 28ರ ಗುರುವಾರ ನಾನು ನಾಮಪತ್ರವನ್ನು ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಲ್ಲಿಸುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿ ಭಾಗವಹಿಸಬೇಕು ಎಂದು ಡಿ.ಕೆ. ಸುರೇಶ್ ಪೋಸ್ಟರ್ ಮೂಲಕ ಮನವಿ ಮಾಡಿದ್ದಾರೆ.