ವಿಶ್ವಕುಮಾರ್ ಭೋಗನಳ್ಳಿ, ಕಲಬುರಗಿ
ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹಳ ಕಸರತ್ತು ನಡೆಸಿವೆ. ಯಾರನ್ನು ಕಣಕ್ಕಿಳಿಸಿದರೆ ಇಲ್ಲಿ ಗೆಲುವು ಸುಲಭ? ಜಾತಿ ಲೆಕ್ಕಾಚಾರವೇನು? ಎದುರಾಳಿಯನ್ನು ಕಟ್ಟಿಹಾಕುವುದು ಹೇಗೆ? ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ಅದೇ ರೀತಿಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ (Kalaburagi Lok Sabha constituency) ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಮಾಡಲಾಗಿದೆ. ಕುಟುಂಬ ರಾಜಕಾರಣದ ಅಪಖ್ಯಾತಿ ನಡುವೆಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಅವರನ್ನು ಕಣಕ್ಕಿಳಿಸಿದ್ದಾರೆ. ಆದರೆ, ಇಲ್ಲಿ ಕೈಪಡೆಗೆ ಪ್ರಚಾರದ ಸರಕಿನ ಕೊರತೆ ಇದೆಯೇ? ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಬಿಜೆಪಿ ಸಂಸದ, ಹಾಲಿ ಅಭ್ಯರ್ಥಿ ಉಮೇಶ್ ಜಾದವ್ ಸಹ ಟಕ್ಕರ್ ಕೊಡಲು ಸಿದ್ಧರಾಗಿದ್ದು, ಗೆಲುವಿನ ಗುರಿ ಮುಟ್ಟಲು ಅವರು ಸಾಕಷ್ಟು ಬೆವರು ಹರಿಸಬೇಕಿದೆ.
ಲೋಕಸಭಾ ಚುನಾವಣೆ ಕಾವು ಆರಂಭವಾದಾಗಿನಿಂದಲೂ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಬಹಳ ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಇಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪರ್ಧೆ ಮಾಡಿದರೆ ಸೂಕ್ತ. ಅವರೇ ಹಾಲಿ ಸಂಸದ ಉಮೇಶ್ ಜಾದವ್‌ಗೆ ಟಕ್ಕರ್ ಕೊಡಲು ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ, ಖರ್ಗೆ ಮಾತ್ರ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಟಿಕೆಟ್ ಆಯ್ಕೆ ವಿಷಯ ಬಂದಾಗ ತಮ್ಮ ಅಳಿಯನಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ರಾಜಕೀಯದಾಟ ಕುತೂಹಲವನ್ನು ಕೆರಳಿಸಿದೆ.
ಖರ್ಗೆ ಸ್ಪರ್ಧೆಗೆ ಹೆದರಿದರೇ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳು ಜಾರಿ ಮಾಡಿದ್ದು, ಜನಪ್ರಿಯತೆಯನ್ನು ಹೊಂದಿದೆ. ಇಷ್ಟಾದರೂ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದು ಏಕೆ? ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಆದರೆ, ಖರ್ಗೆ ಅವರು ಈಗ ಸಾಮಾನ್ಯ ಸ್ಥಾನದಲ್ಲಿಲ್ಲ. ಅವರೀಗ ಎಐಸಿಸಿ ಅಧ್ಯಕ್ಷರು. ಇಡೀ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ವ್ಯಕ್ತಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸ್ಪರ್ಧೆ ಮಾಡಿ ಒಂದು ವೇಳೆ ಸೋಲು ಕಂಡರೆ ಅದು ಅವರೊಬ್ಬರ ಸೋಲಾಗಿ ಉಳಿಯುವುದಿಲ್ಲ. ಇಡೀ ಕಾಂಗ್ರೆಸ್‌ನ ಸೋಲು ಎಂದೇ ಬಿಂಬಿಸಲಾಗುತ್ತದೆ. ಅಲ್ಲದೆ, ತಮಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅಭ್ಯರ್ಥಿಯಾದರೆ ಪ್ರಚಾರ ಕಾರ್ಯಕ್ಕಾಗಿ ಕ್ಷೇತ್ರ ಸಂಚಾರವನ್ನು ಮಾಡಬೇಕು. ಜತೆಗೆ ಇಡೀ ದೇಶದ ಕಾಂಗ್ರೆಸ್ ಚುನಾವಣೆಗೆ ರಣತಂತ್ರ ರೂಪಿಸುವುದು, ಕಾರ್ಯತಂತ್ರವನ್ನು ಹೆಣೆಯುವುದು ಸೇರಿದಂತೆ ಇನ್ನಿತರ ಜವಾಬ್ದಾರಿಯನ್ನು ನಿಭಾಯಿಸಬೇಕು. ಹೀಗಾಗಿ ಸ್ಪರ್ಧೆಯ ಉಸಾಬರಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.
ಯಾರು ಈ ರಾಧಾಕೃಷ್ಣ ದೊಡ್ಡಮನಿ?
ರಾಧಾಕೃಷ್ಣ ದೊಡ್ಡಮನಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ. ಅಲ್ಲದೆ, ಪೀಪಲ್ ಆಫ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಮಾವ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ವ್ಯವಹಾರ ಸೇರಿದಂತೆ ಅವರ ಇನ್ನಿತರ ವಹಿವಾಟುಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಈ ಸಂಬಂಧ ಕಲಬುರಗಿಗೆ ಅವರು ಆಗಾಗ ಬಂದು ಹೋಗುತ್ತಿದ್ದರು. ಹೀಗಾಗಿ ಅವರಿಗೆ ಕಾಂಗ್ರೆಸ್‌ನ ಕೆಲವು ಮುಖಂಡರ ಪರಿಚಯವಿದೆಯೇ ವಿನಃ ಬೇರೆ ಜನಸಾಮಾನ್ಯರ ನಡುವೆ ಒಡನಾಟ ಇಲ್ಲ. ಹೀಗಾಗಿ ಈಗ ಜನಸಾಮಾನ್ಯರೊಂದಿಗೆ ಅವರು ಯಾವ ರೀತಿ ಬೆಸೆದುಕೊಳ್ಳಲಿದ್ದಾರೆ? ಏಕಾಏಕಿ ಜನರ ಮನಸ್ಸನ್ನು ಗೆಲ್ಲಲು ಯಾವ ರೀತಿ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಎಂಬುದು ಕುತೂಹಲವನ್ನು ಮೂಡಿಸಿದೆ.
ಗ್ಯಾರಂಟಿ ಮಾತ್ರವೇ ಪ್ರಚಾರದ ಸರಕು?
ರಾಧಾಕೃಷ್ಣ ದೊಡ್ಡಮನಿ ಅವರಿಗೆ ಪ್ರಚಾರ ಕಾರ್ಯವನ್ನೇನೋ ಶುರು ಮಾಡಿದ್ದಾರೆ. ಆದರೆ, ಅವರಿಗೆ ಈಗ ಪ್ರಚಾರದ ಸರಕು ಏನು ಎಂಬುದು ಪ್ರಶ್ನೆಯಾಗಿದೆ. ಕಾರಣ ಅವರ ಈ ಭಾಗದಲ್ಲಿ ಹಾಕಲಾದ ಬ್ಯಾನರ್‌ಗಳಲ್ಲಿ ಆರ್ಟಿಕಲ್ 371 (J) ಹಾಗೂ ಪಂಚ ಗ್ಯಾರಂಟಿಗಳ ಬಗ್ಗೆ ಮಾತ್ರವೇ ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿದರೆ ಸಾಲದು, ಜತೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನೂ ತಿಳಿಸಿ ಮನಗೆಲ್ಲಬೇಕಿದೆ. ಇದರ ಹೊರತಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮ ಮುಂದಿನ ಪ್ಲ್ಯಾನ್ ಬಗ್ಗೆಯೂ ಹೇಳಬೇಕಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶ ಕಾಣುತ್ತಾರೆ ಎಂಬುದು ಮುಖ್ಯವಾಗಿದೆ. ಆದರೆ, ತಮ್ಮ ಅಳಿಯ ಅಭ್ಯರ್ಥಿಯಾಗಿರುವುದರಿಂದ ಖರ್ಗೆ ಕುಟುಂಬಕ್ಕೆ ಸಹ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಸಂಬಂಧ ಈಗಾಗಲೇ ಖರ್ಗೆ ಅವರು ಕ್ಷೇತ್ರಕ್ಕೆ ಹಲವು ಸುತ್ತಿನ ಸಂಬಂಧಿಸಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ಬೇಕು ಎಂದು ಹಲವರಿಗೆ ಈಗಾಗಲೇ ಜವಾಬ್ದಾರಿ ವಹಿಸಿದ್ದಾರೆನ್ನಲಾಗಿದೆ. ಇನ್ನು ಪುತ್ರ ಪ್ರಿಯಾಂಕ್ ಖರ್ಗೆ ಸಹ ಅಖಾಡಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ: Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ
ಉಮೇಶ್ ಜಾದವ್ ಪ್ರತಿತಂತ್ರ
ಇತ್ತ ಬಿಜೆಪಿಯ ಹಾಲಿ ಸಂಸದ ಡಾ.ಉಮೇಶ್ ಜಾದವ್ ಸಹ ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ತಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜತೆಗೆ ಮೋದಿ ಸರ್ಕಾರದ ಸಾಧನೆಯ ಪಟ್ಟಿಯನ್ನೂ ಹಿಡಿದು ಮತ ಕೇಳಲು ಹೊರಟಿದ್ದಾರೆ. ಇದಲ್ಲದೆ, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಆಗಾಗ ಕಿಡಿಕಾರುತ್ತಲೇ ಇರುವ ಅವರು ಪ್ರಿಯಾಂಕ್ ಖರ್ಗೆ ಮೇಲೆ ಹರಿಹಾಯುತ್ತಲೇ ಬರುತ್ತಿದ್ದಾರೆ. ತಾವು ಕಾಂಗ್ರೆಸ್ ಪಕ್ಷ ಬಿಡಲು ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಸಾಕಷ್ಟು ಬಾರಿ ಹೇಳಿಕೊಂಡು ಬಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿಲ್ಲ. ಕಲ್ಯಾಣ ಕರ್ನಾಟಕವೆಂದರೆ ಖರ್ಗೆ ಆ್ಯಂಡ್ ಕಂಪನಿಯಾಗಿದೆ. ಇದರಿಂದ ಈ ಭಾಗವನ್ನು ಹೊರಗೆ ತರುವುದೇ ತಮ್ಮ ಗುರಿ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದೂ ಸಹ ಜಾದವ್ ಆರೋಪ ಮಾಡಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಸಹಿತ ಹಲವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಜಾದವ್‌ಗೆ ಹಾದಿ ಸುಲಭ ಇದೆಯೇ?
ಹಾಗಂತ ಉಮೇಶ್ ಜಾದವ್‌ಗೆ ಹಾದಿ ಸುಲಭವೇನಿಲ್ಲ. ಈಗ ಆಡಳಿತರೂಢ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಒಂದು ಮಟ್ಟಿನ ಹಿಡಿತವನ್ನು ತೆಗೆದುಕೊಳ್ಳಲು ಮುಂದಾಗಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗೆ ಅನುಷ್ಠಾನ ಸಮಿತಿಯನ್ನು ರಚನೆ ಮಾಡಿದೆ. ಈ ತಂಡ ಸಹ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವುದು, ಈ ಯೋಜನೆಗಳನ್ನು ಕಾಂಗ್ರೆಸ್ ತಂದಿದೆ ಎಂದು ಮನದಟ್ಟು ಮಾಡುವುದರ ಜತೆಗೆ ಕೇಂದ್ರ ಸರ್ಕಾರದಿಂದ ಅನುದಾನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಅಂಶವನ್ನೂ ಹೇಳಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ರೂಪಿಸುವ ಚಕ್ರವ್ಯೂಹವನ್ನು ಉಮೇಶ್ ಜಾದವ್ ಹೇಗೆ ಭೇದಿಸುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.