ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಸರಣಿ ಸಭೆಗಳನ್ನು ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ, ನೀವು ಎಂದಾದರೂ ರೈತರ ಕಷ್ಟಗಳನ್ನು ಆಲಿಸಿದ್ದೀರಾ? ನಿಮಗೆ ನಿಮ್ಮ ಪಕ್ಷದ ಸಭೆಯೇ ಮುಖ್ಯವಾಯಿತೇ? ಎಂದು ಪ್ರಶ್ನೆ ಮಾಡಿರುವ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಅವರು, ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಗ್ಯಾರಂಟಿ (Congress Guarantee) ಯೋಜನೆ ಫಲಾನುಭವಿ ಸಮಾವೇಶ ಸೇರಿದಂತೆ ತಾಲೂಕುವಾರು ನಡೆದ ಸಭೆಗೆಂದು ಒಂದೇ ತಿಂಗಳಲ್ಲಿ 9 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ದಾಖಲೆಯನ್ನು ಬಿಡುಗಡೆ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಮಾವೇಶ ನಡೆಸಲು ಸರ್ಕಾರದ ಹಣವೇ ಬೇಕಿತ್ತೇ? 8 ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು? 20 ರೂಪಾಯಿ ಇದ್ದ ಸ್ಟಾಂಪ್ ಕಾಗದವನ್ನು 120 ರಿಂದ 150 ರೂಪಾಯಿಗೆ ಏರಿಸಿದ್ದೀರಿ. ಉಚಿತ ವಿದ್ಯುತ್ ನೆಪದಲ್ಲಿ ವಿದ್ಯುತ್ ಬಿಲ್ಲನ್ನು ದುಪ್ಪಟ್ಟು ಮಾಡಿದ್ದೀರಿ. ಶಕ್ತಿ ಯೋಜನೆಯಡಿ (Shakti Scheme) ಉಚಿತ ಬಸ್ ನೀಡುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಿಗದಂತೆ ಮಾಡಿದ್ದೀರಿ. ಇದೆಲ್ಲವೂ ನಿಮ್ಮ ಸಾಧನೆಯೇ ಎಂದು ಪ್ರಶ್ನೆ ಮಾಡಿದರು.
ಬರದಿಂದಾಗಿ ಜಿಲ್ಲೆಯಲ್ಲಿ ಜನ, ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಕನಿಷ್ಠ 5 ದಿನವಾದರೂ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಕೆಆರ್‌ಎಸ್ ಡ್ಯಾಂನಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಇದರಿಂದಾಗಿ ಕೆರೆ ಕಟ್ಟೆಗಳು ಒಣಗಿ ಹೋಗಿವೆ. ನಾಲ್ಕು ವರ್ಷಗಳಿಂದ ಬೆಳೆದಿರುವ ತೆಂಗು, ಅಡಿಕೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಹಾಳಾಗುತ್ತಿವೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ರೈತರ ಹಿತ ಕಾಪಾಡದ ಚಲುವರಾಯಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.
ತಮಿಳುನಾಡಿಗೆ ಬಿಡಲು ನೀರು ಇಟ್ಟುಕೊಂಡಿದ್ದೀರಾ?
ಕೆ.ಆರ್.ಎಸ್.ನಲ್ಲಿ ಪ್ರಸ್ತುತ 86.05 ಅಡಿ ಅಂದರೆ 13.09 ಟಿಎಂಸಿಗೂ ಹೆಚ್ಚು ನೀರು ಬಳಕೆಗೆ ಲಭ್ಯವಿದ್ದು, ವಿ.ಸಿ. ನಾಲೆ, ವಿರಿಜಾ, ಮಾಧವಮಂತ್ರಿ ಸೇರಿದಂತೆ ಇತರೆ ನಾಲೆಗಳಿಗೆ ನೀರು ಹರಿಸಿದರೆ ಕೇವಲ ಒಂದೂವರೆ ಟಿಎಂಸಿಯಷ್ಟು ನೀರು ಸಾಕು. 74 ಅಡಿ ಸಾಮರ್ಥ್ಯದ ನೀರಿದ್ದರೆ ಕೃಷಿ ಚಟುವಟಿಕೆಗೆ ಬಳಸಬಹುದು ಎಂಬ ಕಾನೂನು ಇದೆ. ನೀರನ್ನು ಇಟ್ಟುಕೊಂಡಿರುವುದಾದರೂ ಏಕೆ? ತಮಿಳುನಾಡಿನವರು ನೀರು ಕೇಳಿದರೆ ಬಿಡಲೇ ಎಂದು ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ ಪಾತಿವ್ರತ್ಯ ನಮಗೆ ಗೊತ್ತಿರೋದೇ: ಸಿ.ಟಿ. ರವಿ
ಡಿಎಂಕೆ ನಿಲುವಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ?
ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ. ಇದರ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ? ನಾಲೆಗಳಿಗೆ ನೀರು ಬಿಡದ ನೀವು ಯಾವ ಮುಖ ಹೊತ್ತುಕೊಂಡು ಹಳ್ಳಿಗಳಿಗೆ ತೆರಳಿ ಮತ ಕೇಳುತ್ತೀರಿ? ಎಂದು ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರನ್ನು ಪ್ರಶ್ನೆ ಮಾಡಿದರು.
ನೀವು ಕೃಷಿ ಸಚಿವರಾಗಿರಬೇಕೇ?
ಚಲುವರಾಯಸ್ವಾಮಿ ಅವರೇ ನಿಮಗೆ ಕೃಷಿ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಲು ಬಾರದ ನೀವು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಟೀಕೆ ಮಾಡುತ್ತೀರಾ? ನೀವು ನೀರು ಕೊಡದೆ ಹಸಿರು ಜಿಲ್ಲೆಯನ್ನು ಬೆಂಗಾಡಾಗಿ ಪರಿವರ್ತಿಸಿದ್ದೀರಿ. ಮಂಡ್ಯ ಜಿಲ್ಲೆಯ ರೈತರ ಹಿತ ಕಾಯದೆ, ತಮಿಳುನಾಡಿನವರ ಹಿತ ಕಾಯಲು ಹೊರಟಿರುವ ನೀವು ಈ ಸ್ಥಾನದಲ್ಲಿರಕೂಡದು ಎಂದು ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.