ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನು ಮಾಡುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪಕ್ಷಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿವೆ. ಎರಡನೇ ಪಟ್ಟಿಯನ್ನು ಅಂತಿಮ ಮಾಡಿಡಲಾಗಿದ್ದು, ಯಾವುದೇ ಸಮಯದಲ್ಲಿ ಬೇಕಿದ್ದರೂ ಬಿಡುಗಡೆ ಮಾಡಬಹುದಾಗಿದೆ. ಈ ನಡುವೆ ಬಿಜೆಪಿಯ ಮೈತ್ರಿ ಪಕ್ಷ ಜೆಡಿಎಸ್‌ನಿಂದ (BJP JDS Alliance) ಅಭ್ಯರ್ಥಿಗಳ ಆಯ್ಕೆ ನಡೆದಿದೆಯಾದರೂ ಘೋಷಣೆ ಮಾತ್ರ ಬಾಕಿ ಇದೆ. ಈಗ ಬದಲಾದ ಸನ್ನಿವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha constituency) ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಒಂದು ವೇಳೆ ಎಚ್‌ಡಿಕೆ ಇಲ್ಲಿ ಅಖಾಡಕ್ಕೆ ಇಳಿದಿದ್ದೇ ಆದಲ್ಲಿ ಕಾಂಗ್ರೆಸ್‌ನಲ್ಲಿ (Congress Karnataka) ಸಹ ಎಫೆಕ್ಟ್ ಹೊಡೆಯಲಿದ್ದು, ಅಭ್ಯರ್ಥಿಯೇ ಬದಲಾದರೂ ಆಶ್ಚರ್ಯ ಇಲ್ಲ ಎನ್ನುವ ಸ್ಥಿತಿ ಇದೆ ಎನ್ನಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟ ಮಾಡಿಲ್ಲ. ಅವರನ್ನು ಬಿಜೆಪಿ ಹೈಕಮಾಂಡ್ (BJP high command) ನಾಯಕರು ನವ ದೆಹಲಿಗೆ ಕರೆಸಿಕೊಂಡಿದ್ದು, ಮಾತುಕತೆ ನಡೆಸುತ್ತಿದ್ದಾರೆ. ಈ ಸಂಬಂಧ ಅವರು ಇನ್ನೂ ಡೆಲ್ಲಿಯಲ್ಲಿಯೇ ನೆಲೆಸಿದ್ದಾರೆ. ಅಲ್ಲಿನ ಚರ್ಚೆ ಬಳಿಕ ತಮ್ಮ ಮುಂದಿನ ನಡೆ ಏನೆಂಬುದು ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆ ಚರ್ಚೆ ನಡೆಸಿ ನಿರ್ಧಾರವನ್ನು ಪ್ರಕಟ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರ ಮನವೊಲಿಕೆ ಮಾಡಿ ತಾವೇ ಚುನಾವಣೆಗೆ ಸ್ಪರ್ಧೆ ಮಾಡಿದರೆ ಹೇಗೆ ಎಂಬ ತರ್ಕಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ನಾಯಕರಿಂದಲೂ ಒತ್ತಡ
ಇತ್ತ ಮಂಡ್ಯ ಜಿಲ್ಲೆಯ ಜೆಡಿಎಸ್ (JDS Karnataka) ನಾಯಕರು ಸಹ ಎಚ್.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿದರೆ ಬೆಸ್ಟ್ ಎಂದು ಒತ್ತಾಯ ಮಾಡುತ್ತಿದ್ದಾರೆ. ಮಂಡ್ಯ ರಾಜಕೀಯವೇ ಬೇರೆ ರೀತಿ ಇದ್ದು, ಈ ಹೊತ್ತಿನಲ್ಲಿ ನಿಮ್ಮ ಸ್ಪರ್ಧೆಯೇ ಸೂಕ್ತ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೊನೇ ಕ್ಷಣದಲ್ಲಿ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯೇ ಕಣಕ್ಕಿಳಿಯುತ್ತಾರೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.
ಸಿ.ಎಸ್. ಪುಟ್ಟರಾಜು ಏನು ಮಾಡ್ತಾರೆ?
ಇಷ್ಟು ದಿನಗಳ ಕಾಲ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು (CS Puttarajau) ಅವರೇ ಮೈತ್ರಿ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅವರೂ ಸಹ ಈಗಾಗಲೇ ದೇವಸ್ಥಾನಗಳ ಭೇಟಿ ಸೇರಿದಂತೆ ಕೆಲವು ಮುಖಂಡರ ಜತೆ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಎಚ್.ಡಿ. ಕುಮಾರಸ್ವಾಮಿಯೇ ಕಣಕ್ಕಿಳಿದರೆ ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಪುಟ್ಟರಾಜು ಅವರು ಕಟ್ಟರ್ ಜೆಡಿಎಸ್ ಆಗಿದ್ದರಿಂದ ಎಚ್‌ಡಿಕೆಗೆ ಬೆಂಬಲ ಕೊಡುತ್ತಾರೆ. ಹೀಗಾಗಿ ಇದು ಸಮಸ್ಯೆಯಾಗದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇದೆ.
ಮಾರ್ಚ್ 25ರಂದು ಎಚ್‌ಡಿಕೆ ಘೋಷಣೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ಸಂಬಂಧ ಮಾರ್ಚ್ 25ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ವೇಳೆ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೋ ಇಲ್ಲವೇ ಸಿ.ಎಸ್. ಪುಟ್ಟರಾಜು ಅವರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಲಿದ್ದಾರೋ ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ: Lok Sabha Election 2024: ಜೆ.ಪಿ. ನಡ್ಡಾ ಜತೆ ಸುಮಲತಾ ಚರ್ಚೆ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸಂಸದೆ
ಬದಲಾಗ್ತಾರಾ ಕಾಂಗ್ರೆಸ್ ಅಭ್ಯರ್ಥಿ?
ಒಂದು ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕಿಳಿದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಬದಲು ಮಾಡುವ ಲೆಕ್ಕಾಚಾರದಲ್ಲಿದೆ ಎಂದು ತಿಳಿದು ಬಂದಿದೆ. ಸ್ಟಾರ್ ಚಂದ್ರು ದೊಡ್ಡ ಮಟ್ಟದ ಗುತ್ತಿಗೆದಾರರಾಗಿದ್ದು, ಹಣ ಬಲ ಭಾರಿ ಇದ್ದರೂ ಅವರಿಗೆ ಚುನಾವಣೆ ಹೊಸದು. ಆದರೆ, ಮಂಡ್ಯದ ಮಟ್ಟಿಗೆ ಕುಮಾರಸ್ವಾಮಿ ಮೇಲೆ ಜನರಿಗೆ ಸಾಫ್ಟ್ ಕಾರ್ನರ್ ಇದ್ದೇ ಇದೆ. ಹೀಗಾಗಿ ಎಚ್‌ಡಿಕೆ ಅಖಾಡಕ್ಕಿಳಿದರೆ ಅವರ ವಿರುದ್ಧ ಪ್ರಬಲವಾದ ಇನ್ನೊಬ್ಬ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೆಲ್ಲವೂ ಎಚ್‌ಡಿಕೆ ನಿರ್ಧಾರದ ಮೇಲೆ ನಿಂತಿದೆ.