Site icon Vistara News

Lok Sabha Election 2024: ಸುಮಲತಾ ಭೇಟಿ ಮಾಡಿದ ಎಚ್‌ಡಿಕೆ; ಅಭಿಷೇಕ್‌ ರಾಜಕೀಯ ಭವಿಷ್ಯ ನನಗೆ ಬಿಡಿ ಎಂದರೇ ಮಾಜಿ ಸಿಎಂ?

Lok Sabha Election 2024 HD Kumaraswamy meets Sumalatha Ambareesh

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಚುರುಕುಗೊಂಡಿದೆ. ಒಂದಿಲ್ಲೊಂದು ರಾಜಕೀಯ ಪಟ್ಟುಗಳನ್ನು ನಾಯಕರು ಹಾಕುತ್ತಲೇ ಬರುತ್ತಿದ್ದಾರೆ. ಇನ್ನು ಬಹು ಕುತೂಹಲವನ್ನು ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರು ಏನು ಮಾಡುತ್ತಾರೆ? ಅವರ ಮುಂದಿನ ನಡೆ ಏನು? ಏಪ್ರಿಲ್‌ 3ರಂದು ಮಂಡ್ಯದಲ್ಲಿ ಅವರು ಯಾವ ಘೋಷಣೆಯನ್ನು ಮಾಡುತ್ತಾರೆ? ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಬೆಂಬಲಿಸುತ್ತಾರೋ? ಅಥವಾ ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡುತ್ತಾರೋ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳು ಮೂಡಿದೆ. ಇದು ಸಹಜವಾಗಿ ಮಾಜಿ ಸಿಎಂ ಎಚ್‌ಡಿಕೆಯನ್ನು ಕಂಗೆಡೆಸಿದೆ. ಈ ನಿಮಿತ್ತ ಅವರು ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಸುದೀರ್ಘ ಮಾತುಕತೆ ನಡೆಸಿದ್ದು, ತಮ್ಮನ್ನು ಬೆಂಬಲಿಸಬೇಕು ಎಂದು ಕೋರಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದ ಸುಮಾಲತಾ ಅಂಬರೀಶ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿ ಚರ್ಚೆ ನಡೆಸಿದ್ದಾರೆ. ಈ ಬಾರಿ ತಮ್ಮನ್ನೇ ಬೆಂಬಲಿಸಬೇಕು ಎಂದು ಕೋರಿದ್ದಾರೆ. ಈ ವೇಳೆ ಬಿಜೆಪಿ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ಭರವಸೆಗಳು ಸೇರಿದಂತೆ ಮತ್ತಿತರ ವಿಚಾರಗಳು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಅಲ್ಲದೆ, ಸಮಾಧಾನದಿಂದಲೇ ಮಾತನಾಡಿರುವ ಸುಮಲತಾ ಅವರು ತಮ್ಮ ನಿರ್ಣಯವನ್ನು ಏಪ್ರಿಲ್‌ 3 ರಂದು ಮಂಡ್ಯದಲ್ಲಿ ತಮ್ಮ ಬೆಂಬಲಿಗರು, ಹಿತೈಷಿಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿಯೇ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.

30 ನಿಮಿಷಗಳ ಚರ್ಚೆ

ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಸಮ್ಮುಖದಲ್ಲಿ ಎಚ್.ಡಿ. ಕುಮಾರಸ್ವಾಮಿ ಎದುರು ಸುಮಾರು 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ನೀವು ಯಾವುದೇ ಕಾರಣಕ್ಕೂ ಈ ಬಾರಿ ಸ್ಪರ್ಧೆ ಮಾಡಬೇಡಿ. ಮಂಡ್ಯದಲ್ಲಿ ನನ್ನನ್ನು ಬೆಂಬಲಿಸಿ, ನಿಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ನನಗೆ ಬಿಡಿ. ನಾನು ಸಹ ಅಭಿಷೇಕ್‌ ಬೆಳವಣಿಗೆಗೆ ಬೆಂಬಲವನ್ನು ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಅಭಿಷೇಕ್‌ ಅವರು ಮಂಡ್ಯದಲ್ಲಿ ರಾಜಕಾರಣ ಮಾಡಬೇಕಿದೆ. ಅದಕ್ಕೆಲ್ಲ ತಮ್ಮ ಸಹಕಾರ ಇದ್ದೇ ಇದೆ ಎಂದು ಎಚ್‌ಡಿಕೆ ಮನವೊಲಿಕೆ ಮಾಡಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್; ಪಾಕ್‌ ಪರ ಘೋಷಣೆ ಕೇಸ್‌ ವಿವಾದಿತ ನಾಸಿರ್‌ ಹುಸೇನ್‌ಗೂ ಸ್ಥಾನ!

ಸುಮಲತಾ ಶತ್ರುವಲ್ಲ ಎಂದಿದ್ದ ಎಚ್‌ಡಿಕೆ

ಸುಮಲತಾ ಅಂಬರೀಶ್‌ ಅವರೇನು ನನ್ನ ಶತ್ರು ಅಲ್ಲ. ನಾನು ಈ ಹಿಂದೆ ಅಂಬರೀಶ್‌ ಇದ್ದಾಗ ಅವರ ಮನೆಗೆ ಭೇಟಿ ನೀಡಿ ಊಟ ಮಾಡಿದ್ದೆ. ಆಗ ನನಗೆ ಸುಮಲತಾ ಅವರೇ ಊಟವನ್ನು ಬಡಿಸಿದ್ದರು. ಅವರು ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಆಗಾಗ ಹೇಳಿಕೊಂಡು ಬರುತ್ತಲೇ ಇದ್ದಾರೆ. ಎಚ್‌ಡಿಕೆ ಈ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿ, ನಾವೇನು ನಿಮಗೆ ವಿಷ ಕೊಟ್ಟೆವೇ? ಬೆನ್ನಿಗೆ ಚೂರಿ ಹಾಕಿದೆವೇ? ಎಂದು ಪ್ರಶ್ನೆ ಮಾಡಿದ್ದರು.

ಬೆಂಬಲಿಗರ ಸಭೆಯಲ್ಲಿ ಸುಮಲತಾ ಹೇಳಿದ್ದೇನು?

ತಮ್ಮ ಸ್ಪರ್ಧೆ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾ. 30ರಂದು ಸುಮಲತಾ ಅಂಬರೀಶ್‌ ಸಭೆ ಕರೆದಿದ್ದರು. ಇಲ್ಲಿ ಮಂಡ್ಯ ರಾಜಕಾರಣವನ್ನು ಬಿಟ್ಟು ಬೇರೆಲ್ಲೂ ಹೋಗಲ್ಲ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಆದರೆ, ಈ ಬಾರಿ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಮಾತ್ರ ದೃಢಪಡಿಸಿಲ್ಲ. ಇದನ್ನು ಮಂಡ್ಯದಲ್ಲಿಯೇ ಏಪ್ರಿಲ್‌ 3ರಂದು ಹೇಳುವುದಾಗಿ ಹೇಳಿದ್ದರು.

“ಮಂಡ್ಯದಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿದೆ. ಅಂಬರೀಶ್‌ ಅಭಿಮಾನಿಗಳ ಆಶೀರ್ವಾದದಿಂದ ನಾನು ಸಂಸದೆಯಾಗಿದ್ದೇನೆ. ಐದು ವರ್ಷಗಳ ಹಿಂದೆ ಈ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಆಗ ನನಗೆ ಬೆಂಬಲವಾಗಿ ನಿಂತದ್ದು ಇದೇ ಅಭಿಮಾನಿಗಳು. ಮಂಡ್ಯ ಬಿಟ್ಟು ನನಗೆ ರಾಜಕಾರಣವೇ ಬೇಡ ಎಂದು ಹೇಳಿದ್ದೆ. ಈಗಲೂ ಅದೇ ನನ್ನ ಮಾತಾಗಿದೆ. ನನ್ನ ಸ್ವಾರ್ಥ ನೋಡಿ ನಾನು ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ಜನರೇ ಜನ್ನ ಶಕ್ತಿ. ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು” ಎಂದು ತಿಳಿಸಿದ್ದರು.

ಇದನ್ನೂ ಓದಿ: Lok Sabha Election 2024: ನೀವೆಂಥವರೆಂದು ಗೊತ್ತಿದ್ದೂ ಮಾತನಾಡಿಲ್ಲ, ಘನತೆಯಿಂದ ಮಾತಾಡಿ; ಲಕ್ಷ್ಮಿಗೆ ಮಂಗಳಾ ವಾರ್ನಿಂಗ್‌

ಸುಮಲತಾ ಅವರಿಗೆ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಥವಾ ರಾಜ್ಯಸಭಾ ಸ್ಥಾನವನ್ನು ಕೊಡುವುದಾಗಿ ಬಿಜೆಪಿ ಹೈಕಮಾಂಡ್‌ ಹೇಳಿತ್ತು. ಆದರೂ, ಮಂಡ್ಯವೇ ತಮ್ಮ ರಾಜಕೀಯ ಕರ್ಮಭೂಮಿ ಎಂದು ಹೇಳಿದ್ದ ಸುಮಲತಾ ಅವರು ತಮ್ಮ ನಿರ್ಧಾರವನ್ನು ಮಂಡ್ಯದಲ್ಲಿ ಪ್ರಕಟಿಸುವುದಾಗಿ ಹೇಳುವ ಮೂಲಕ ಈ ಗೊಂದಲವನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ.

ಪಕ್ಷೇತರ ಸ್ಪರ್ಧೆಗೆ ಅಭಿಮಾನಿಗಳ ಒತ್ತಾಯ

ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಈ ನಡುವೆ ನಗರದ ಜೆ.ಪಿ.ನಗರದ ನಿವಾಸದದ ಬಳಿ ಶನಿವಾರ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಮತ್ತೊಮ್ಮೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದರು. ಮಂಡ್ಯ, ನಾಗಮಂಗಲ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರದಿಂದ ಸಭೆಗೆ ಬಂದಿದ್ದ ರೈತ ಪರ ಮುಖಂಡರು, ಅಭಿಮಾನಿಗಳು ಪಕ್ಷೇತರವಾಗಿಯೇ ಸ್ಪರ್ಧೆ ಮಾಡಿ ನಿಮ್ಮ ಬೆನ್ನ ಹಿಂದೆ ನಾವಿರುತ್ತೇವೆ ಎಂಬ ಅಭಯವನ್ನು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈಗ ಎಚ್‌.ಡಿ. ಕುಮಾರಸ್ವಾಮಿ ಸುಮಲತಾ ಮನೆಗೆ ಭೇಟಿ ನೀಡಿದ್ದಾರೆ. ತಮ್ಮನ್ನೇ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

Exit mobile version