ಬೆಂಗಳೂರು/ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಅಭ್ಯರ್ಥಿಗಳು ಅಖಾಡಕ್ಕೆ ಇಳಿದಿದ್ದು, ಗಲ್ಲಿ ಗಲ್ಲಿಗಳನ್ನು ಸುತ್ತಿ ಮತ ಶಿಕಾರಿಗೆ ಮುಂದಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣವು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದೆ. ಮೈತ್ರಿ ಅಭ್ಯರ್ಥಿಯಾಗಿ ಕೊನೆಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕಣಕ್ಕಿಳಿದಿದ್ದಾರೆ. ಆದರೆ, ಅವರು ನಾಲ್ಕು ದಿನಗಳ ಹಿಂದೆ ಮಂಡ್ಯಕ್ಕೆ ಬಂದು ನಾಮಪತ್ರ ಸಲ್ಲಿಸಿ ಹೋದ ಬಳಿಕ ಮತ್ತೆ ಇತ್ತ ತಲೆಹಾಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೋಸ್ಟರ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಮಂಡ್ಯಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗಮಿಸಿಲ್ಲ. ಇದೇ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿ ಪ್ರಚಾರದ ಸಭೆ ನಡೆಸಿ ಹೋಗಿದ್ದರು. ಆದರೆ, ಆ ಬಳಿಕ ಅವರು ಇತ್ತ ತಲೆ ಹಾಕಿಲ್ಲ ಎಂಬ ವಿಚಾರವಾಗಿ ಪೋಸ್ಟರ್‌ವೊಂದನ್ನು ಹರಿಬಿಡಲಾಗಿದೆ.
ಕಾರ್ಟೂನ್ ಬಗ್ಗೆ ಜೆಡಿಎಸ್ ಆಕ್ರೋಶ
“ನಾಮಪತ್ರ ಸಲ್ಲಿಸಿ ಮಂಡ್ಯದಿಂದ ಹೋದವರು. ಈಗಲೇ ಕೈಗೆ ಸಿಗುತ್ತಿಲ್ಲ, ಇನ್ನು ಮುಂದೆ ಜನರ ಕೈಗೆ ಸಿಗ್ತಾರಾ? ಎಂದು ಪ್ರಶ್ನೆ ಮಾಡಿ ಕಾರ್ಟೂನ್‌ವೊಂದನ್ನು ಬಿಡಿಸಲಾಗಿದೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಇದನ್ನು ಕಾಂಗ್ರೆಸ್‌ನವರು ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಜೆಡಿಎಸ್ ಕಾರ್ಯಕರ್ತರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಟೆಂಪಲ್ ರನ್..!
ಒಂದು ಕಡೆ ಮಂಡ್ಯಕ್ಕೆ ಪ್ರಚಾರಕ್ಕೆ ಆಗಮಿಸಿಲ್ಲ ಎಂಬ ಪೋಸ್ಟರ್ ಇದ್ದರೆ, ಇನ್ನೊಂದು ಕಡೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಅವರು ಈ ಬಾರಿ ಗೆಲ್ಲುವ ನಿಟ್ಟಿನಲ್ಲಿ ದೇವರ ಮೊರೆ ಹೋಗಿದ್ದಾರೆ. ಹೀಗಾಗಿ ತಮಿಳುನಾಡಿನ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ತಮ್ಮ ಗೆಲುವಿಗಾಗಿ ದೇವಿಯ ಮೊರೆ ಹೋಗಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮೈತ್ರಿ ಸೂತ್ರದನ್ವಯ ಮೂರು ಸೀಟುಗಳು ಲಭ್ಯವಾಗಿವೆ. ಮಂಡ್ಯ, ಹಾಸನ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ದೇವರ ಬಳಿ ಎಚ್‌ಡಿಕೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಪಕ್ಷದ ಅಸ್ತಿತ್ವದ ಪ್ರಶ್ನೆ ಇದಾಗಿರುವುದರಿಂದ ಅವರು ಮದುರೈನಲ್ಲಿ ಸೋಮವಾರ ಬೆಳಗ್ಗೆ 5.15ಕ್ಕೆ ಮದುರೈ ಮೀನಾಕ್ಷಿ ದರ್ಶನ ಪಡೆದು, ಆಶೀರ್ವಾದವನ್ನು ಪಡೆದುಕೊಂಡಿದದ್ದಾರೆ.
ಚುನಾವಣಾ ಪ್ರಚಾರ ಆರಂಭ
ಮದುರೈ ಮೀನಾಕ್ಷಿ ದರ್ಶನ ಪಡೆದ ಬಳಿಕ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಲು ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಕೇರಳದ ಚೋಟಾನಿಕ್ಕೆರದ ಭಗವತಿ ದೇವಸ್ಥಾನಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು.
ಮಂಡ್ಯ ಗೆಲ್ಲಲು ಅಸ್ತ್ರ ಬಿಡಲು ಸಜ್ಜಾದ ಎಚ್‌ಡಿಕೆ
ಮಂಡ್ಯ ಗೆಲ್ಲಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಪಕ್ಷಾತೀತವಾಗಿ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಆಗಿ ಚರ್ಚೆ ನಡೆಸಲಿದ್ದಾರೆ.
ಒಕ್ಕಲಿಗ ಮತಕ್ಕೆ ಪ್ಲ್ಯಾನ್!
ಎಸ್ಎಂ ಕೃಷ್ಣ ಅವರನ್ನು ಭೇಟಿಯಾಗಿ ಚುನಾವಣೆ ಕುರಿತು ಮಾತುಕತೆ ನಡೆಸಲು ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಎಸ್.ಎಂ. ಕೃಷ್ಣ ಅವರನ್ನು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿಯಾಗಿ ಸಹಕಾರ ಕೋರಿದ್ದರು. ಆದರೆ, ಎಸ್‌ಎಂಕೆ ಈಗ ಬಿಜೆಪಿಯಲ್ಲಿ ಇರುವುದರಿಂದ ಅವರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಮಂಡ್ಯದ ಮತಗಳನ್ನು ಮತ್ತಷ್ಟು ಭದ್ರ ಮಾಡಿಕೊಳ್ಳಲು ಎಚ್‌ಡಿಕೆ ತಂತ್ರಗಾರಿಕೆಯನ್ನು ಹೂಡಿದ್ದಾರೆ.