ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕ್ಷೇತ್ರ ಹಂಚಿಕೆಯೂ ಫೈನಲ್ ಆಗಿದೆ. ಈ ಬಗ್ಗೆ ಸ್ವತಃ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ ಎಂದು ಹೇಳಿದ್ದಾರೆ. ಮಂಡ್ಯ ಜೆಡಿಎಸ್ (Mandya JDS) ಪಾಲಾಗಿದೆ ಎಂದಾದರೆ ಅಲ್ಲಿನ ಹಾಲಿ ಸಂಸದರೆ ಸುಮಲತಾ ಅಂಬರೀಶ್ (Sumalatha Ambaressh) ಅವರ ಮುಂದಿನ ನಡೆ ಏನು ಎಂಬುದು ಸದ್ಯದ ಕುತೂಹಲವಾಗಿದೆ.
ಈ ಬಗ್ಗೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರವು ಜೆಡಿಎಸ್ ಪಾಲಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಅಲ್ಲಿಗೆ ತೆರಳಿ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಎಚ್‌ಡಿಕೆ, ಅಗತ್ಯ ಬಿದ್ದರೆ ಸುಮಲತಾ ಅವರ ಬಳಿಯೂ ಮಾತನಾಡುವುದಾಗಿ ಈ ಮುಂಚೆ ಹೇಳಿದ್ದರು. ಅಲ್ಲದೆ, ಮಂಡ್ಯಕ್ಕೆ ಸಿ.ಎಸ್. ಪುಟ್ಟರಾಜು ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಕುಮಾರಸ್ವಾಮಿ ಒಲವು ತೋರಿದ್ದಾರೆ ಎನ್ನಲಾಗಿದೆ. ಈಗ ಮಂಡ್ಯದಲ್ಲಿ ಸುಮಲತಾ ಅವರ ಮುಂದಿನ ನಡೆ ಏನು ಎಂಬುದೇ ಸದ್ಯದ ಕುತೂಹಲವಾಗಿದೆ.
ರೆಬೆಲ್ ಆಗ್ತಾರಾ ಸುಮಲತಾ?
ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ, ಮಂಡ್ಯ ಸಂಸದೆ (Mandya MP) ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದಲೇ ತನಗೆ ಚುನಾವಣೆಗೆ ಸ್ಪರ್ಧೆ ಬಯಸಿದ್ದು, ಬಿಜೆಪಿ ಟಿಕೆಟ್ (BJP Ticket) ಸಿಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಸಿಗದಿದ್ದರೆ ʼರೆಬೆಲ್ ಸ್ಟಾರ್ʼ ಆಗುವುದು ಗ್ಯಾರಂಟಿ ಎಂಬ ಸೂಚನೆಯನ್ನು ಈಗಾಗಲೇ ಹಲವು ಬಾರಿ ನೀಡಿದ್ದಾರೆ.
ಈ ಬಗ್ಗೆ ಮಂಗಳವಾರ “ವಿಸ್ತಾರ ನ್ಯೂಸ್”ನಲ್ಲಿ ಮಾತನಾಡಿದ್ದ ಸುಮಲತಾ ತಮ್ಮ ಮನದಾಳವನ್ನು ಹೊರಹಾಕಿದ್ದರು. ಮಂಡ್ಯ ಬಿಟ್ಟು ಕದಲಲಾರೆ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದರು.
“ಮಂಡ್ಯ ನನ್ನದೇ ಅಡ್ಡಾ. ಮಂಡ್ಯ ಬಿಟ್ಟು ಬೇರ್ಯಾವುದೇ ಕಡೆ ನಾನು ರಾಜಕಾರಣ ಮಾಡಲಾರೆ. ಮಂಡ್ಯ ಅಡ್ಡಾಕ್ಕೆ ಬರಬೇಡಿ. ಇಲ್ಲಿನ ಟಿಕೆಟ್ ನನಗೇ ಸಿಗುತ್ತೆ ಎಂಬ ವಿಶ್ವಾಸವಿದೆ. ಇದನ್ನು ಜೆಡಿಎಸ್‌ಗೆಗೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಈ ಕ್ಷಣದವರೆಗೂ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆʼʼ ಎಂದು ಸುಮಲತಾ ಹೇಳಿದ್ದರು.
ಆರು ತಿಂಗಳ ಹಿಂದೆಯೇ ತಮಗೆ ಮೈಸೂರು ಅಥವಾ ಬೇರೆ ಕಡೆ ಬಿಜೆಪಿಯಿಂದ ಟಿಕೆಟ್ ನೀಡುವ ಸೂಚನೆ ಪಕ್ಷದ ವರಿಷ್ಠರಿಂದ ನೀಡಲಾಗಿತ್ತು ಎಂಬುದನ್ನು ಸುಮಲತಾ ಸಂದರ್ಶನದಲ್ಲಿ ಹೊರಗೆಡಹಿದ್ದರು. ಅಂದರೆ, ಮೈಸೂರಿನಲ್ಲಿ ಟಿಕೆಟ್ ಪ್ರತಾಪ್ ಸಿಂಹಗೆ ಕೈ ತಪ್ಪುವದು ಖಚಿತವಾದಂತೆಯೇ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಚಿಂತನೆ ನಡೆಸಿದೆ ಎಂಬುದೂ ಖಚಿತವಾಗಿತ್ತು. ಆದರೆ, ಹೀಗಾಗಿ ಟಿಕೆಟ್ ಮಿಸ್ ಆದರೆ ಸುಮಲತಾ ರೆಬೆಲ್ ಆಗಿ, ಕಳೆದ ಸಲದಂತೆಯೇ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತವಾಗಿತ್ತು.
ಇಕ್ಕಟ್ಟಿನಲ್ಲಿ ಸುಮಲತಾ ಅಂಬರೀಶ್
ಐದು ವರ್ಷಗಳ ಹಿಂದೆ ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸಿದ್ದಾಗ, ಬಿಜೆಪಿ ಮೌನ ಬೆಂಬಲ ನೀಡಿತ್ತು. ಆದರೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ ಅವರನ್ನು ಕಟುವಾದ ಶಬ್ದಗಳಿಂದ ಚುನಾವಣೆ ಕಣದಲ್ಲಿ ಟೀಕಿಸಿ ಎದುರಿಸಿದ್ದರು. ಆದರೆ ಈಗ ಬಿಜೆಪಿ- ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ಚಿತ್ರಣ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಸ್ಪರ್ಧೆಯಲ್ಲಿ ಅಭದ್ರತೆ ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಈಗ ಇಕ್ಕಟ್ಟಿನ ಪರಿಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ.
ಬೆಂಗಳೂರು ಉತ್ತರ, ಮೈಸೂರು ಕ್ಷೇತ್ರದ ಆಫರ್ ತಿರಸ್ಕರಿಸಿದ್ದು ಏಕೆ?
ನಾಲ್ಕೂವರೆ ವರ್ಷಗಳ ಬಳಿಕ ಮಗ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಿದ್ದಾರೆ. ಮಂಡ್ಯದಿಂದಲೇ ರಾಜಕೀಯ ಪ್ರವೇಶ ಮಾಡಲು ಅವರು ನಿರ್ಧರಿಸಿದ್ದು ಮಗನ ಭವಿಷ್ಯ ಸುಭದ್ರಪಡಿಸಲು ಸುಮಲತಾ ನಿರ್ಧರಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿಯೇ ರಾಜಕಾರಣ ಮಾಡಲು ತೀರ್ಮಾನಿಸಿದ್ದಾರೆ. ಇದರಿಂದಾಗಿಯೇ ತಮಗೆ ಬಂದ ಬೆಂಗಳೂರು ಉತ್ತರ ಮತ್ತು ಮೈಸೂರು ಆಫರ್ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಸುಮಲತಾಗೆ ಮಂಡ್ಯ ಕ್ಷೇತ್ರ ಬಹುತೇಕ ಮಿಸ್! ನಾನು ನೋಡ್ಕೊಳ್ತೇನೆ ಅಂದ್ರು ಶಾ
ಸದ್ಯ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕರೆಗೆ ಸುಮಲತಾ ಕಾಯುತ್ತಿದ್ದಾರೆ. ಒಂದು ವೇಳೆ ಕೊನೆಯ ಕ್ಷಣದಲ್ಲಿ ಆ ಕರೆ ಬಂದರೆ ಸುಮಲತಾ ನಿಲುವು ಬದಲಾಗುವ ಸಾಧ್ಯತೆಯೂ ಇದೆ. “ಈ ಬಾರಿ ನೀವು ಕ್ಷೇತ್ರ ತ್ಯಾಗ ಮಾಡಿ. ನಿಮ್ಮ ಮಗನ ರಾಜಕೀಯ ಏಳಿಗೆ ನಮಗೆ ಬಿಡಿ” ಎಂಬ ಭರವಸೆ ನೀಡಿದರೆ, ಸುಮಲತಾ ಅವರಿಗೆ ರಾಜ್ಯಸಭೆ ಇಲ್ಲವೇ ವಿಧಾನ ಪರಿಷತ್ ಆಫರ್ ಕೊಟ್ಟರೆ, ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ, ಈಗ ಅವರ ತೀರ್ಮಾನ ಏನು ಎಂಬುದು ಮಾತ್ರ ನಿಗೂಢವಾಗಿದೆ.