Site icon Vistara News

Lok Sabha Election 2024: 47 ಮಂದಿಯ ಫೋನ್‌ ಕದ್ದಾಲಿಕೆ ಮಾಡಿರುವ ಎಚ್.ಡಿ. ಕುಮಾರಸ್ವಾಮಿ; ಮಾಗಡಿ ಬಾಲಕೃಷ್ಣ ಆರೋಪ

Lok Sabha Election 2024 HD Kumaraswamy taps phones of 47 people says Magadi Balakrishna

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ರಾಜ್ಯ ರಾಜಕೀಯದಲ್ಲಿ ಈಗ ಒಕ್ಕಲಿಗ ಪಾಲಿಟಿಕ್ಸ್‌ ಬಹು ಚರ್ಚೆಯಾಗುತ್ತಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರ ಟೆಲಿಫೋನ್‌ ಅನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ಸಚಿವ ಎನ್.‌ ಚಲುವರಾಯಸ್ವಾಮಿ ಆರೋಪವನ್ನು ಮಾಡಿದ್ದರು. ಇದಕ್ಕೆ ಈಗ ಶಾಸಕ ಮಾಗಡಿ ಬಾಲಕೃಷ್ಣ ಧ್ವನಿಗೂಡಿಸಿದ್ದು, ಒಟ್ಟು 47 ಜನರ ಪೋನ್ ಕದ್ದಾಲಿಕೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಫೋನ್‌ ಟ್ಯಾಪಿಂಗ್‌ ಗದ್ದಲ ಶುರುವಾದಂತಾಗಿದೆ.

ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಫೋನ್ ಕದ್ದಾಲಿಕೆ ಮಾಡುವುದು ಕಾನೂನು ಬಾಹಿರವಾಗಿದೆ. ಪೊಲೀಸ್ ಇಲಾಖೆಯಿಂದ ಮಾತ್ರ ಪೋನ್ ಟ್ಯಾಪ್‌ ಮಾಡಲು ಅವಕಾಶ ಇರುತ್ತದೆ. ಕಾನೂನು ಬಾಹಿರ ಚಟುವಟಿಕೆ ಮೇಲೆ ನಿಗಾ ಇಡಲು ಕೆಲವರ ಫೋನ್‌ಗಳನ್ನು ಟ್ಯಾಪ್‌ ಮಾಡಲಾಗುತ್ತದೆ. ಆದರೆ, ಆಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಯಾರ ಕಡೆಯಿಂದ ಕದ್ದಾಲಿಕೆ ಮಾಡಿಸಿದ್ದಾರೆ? ಎಷ್ಟು ಜನರ ಪೋನ್ ಕದ್ದಾಲಿಕೆಯಾಗಿದೆ ಎಂಬ ಮಾಹಿತಿ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ಪ್ರತ್ಯೇಕ ರೂಮ್ ಮಾಡಿ, 47 ಜನರ ಪೋನ್‌ಗಳನ್ನು ಕದ್ದಾಲಿಕೆ ಮಾಡಿಸಿದ್ದಾರೆ. ಆ 47 ಜನ ಯಾರು ಎಂಬುದನ್ನು ಈಗ ಎಚ್.ಡಿ. ಕುಮಾರಸ್ವಾಮಿ ಹೇಳಲಿ. ಇಲ್ಲ ಅಂದರೆ ನಾವೇ ಹೇಳುತ್ತೇವೆ. ಪರಮ ಪೂಜ್ಯ ಸ್ವಾಮೀಜಿಯವರ ಪೋನ್ ಅನ್ನು ಕದ್ದಾಲಿಕೆ ಮಾಡಿದ್ದಾರೆ. ಒಂದು ವೇಳೆ ಮಾಡಿಸಿಲ್ಲ ಎಂದಾದರೆ ಕಾಲಭೈರವೇಶ್ವರನ ಮೇಲೆ ಆಣೆ ಮಾಡಿ ಹೇಳಲಿ. ನಾವು ತಲೆಬಾಗುತ್ತೇವೆ. ಕುಮಾರಸ್ವಾಮಿ ಅವರ ಕುಟುಂಬದವರದ್ದು ಸೇರಿ 47 ಜನ ಪೋನ್ ಟ್ಯಾಪ್‌ ಮಾಡಿಸಿದ್ದಾರೆ. ಯಾರು ಯಾವೆಲ್ಲ ಚಟುವಟಿಕೆಯನ್ನು ನಡೆಸುತ್ತಿದ್ದಾರೆ? ತಮ್ಮ ಹೆಸರನ್ನು ಹೇಳಿಕೊಂಡು ಯಾರು ಹಣ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಎಚ್‌ಡಿಕೆ ಪೋನ್ ಟ್ಯಾಪ್ ಮಾಡಿಸಿದ್ದಾರೆ ಎಂದು ಶಾಸಕ ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ವಿಕೃತ ಮನಸ್ಸಿನ ನಾಯಕರು. ನಾನು ಸತ್ಯ ಹರಿಶ್ಚಂದ್ರ ಕಾಂಗ್ರೆಸ್‌ವರು ಕಳ್ಳರು. ಈ ಸಮಾಜಕ್ಕೆ ನಾನು ಕೊಡುಗೆ ಕೊಟ್ಟಿದ್ದೇನೆ. ಬೇರೆ ಯಾರೂ ಕೊಡುಗೆ ಕೊಟ್ಟಿಲ್ಲ ಎಂದು ಹೇಳಲು ಹೊರಟಿದ್ದಾರೆ ಎಂದು ಶಾಸಕ ಬಾಲಕೃಷ್ಣ ಆರೋಪ ಮಾಡಿದ್ದಾರೆ.

ನಿಮ್ಮ ರಾಜಕೀಯಕ್ಕೆ ನನ್ನ, ಮಠದ ಹೆಸರು ಬಳಸಬೇಡಿ: ನಿರ್ಮಲಾನಂದನಾಥ ಶ್ರೀ ಸೂಚನೆ

ಕಳೆದ 2 ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿರುವ ನಿರ್ಮಲಾನಂದನಾಥ ಶ್ರೀಗಳು, ಒಕ್ಕಲಿಗ ಹಿರಿಯ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ನಿಮ್ಮ ರಾಜಕೀಯಕ್ಕೆ ಮಠವನ್ನು ಬಳಸಿಕೊಳ್ಳಬೇಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎನ್‌. ಚಲುವರಾಯಸ್ವಾಮಿಗೆ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ.

ನಿಮ್ಮ ವೈಯುಕ್ತಿಕ ಆರೋಪಗಳ ನಡುವೆ ಮಠವನ್ನು ಹಾಗೂ ತಮ್ಮ ಹೆಸರನ್ನು ಎಳೆದು ತರಬೇಡಿ. ನಿಮ್ಮ ಮಾತುಗಳಿಗೆ ಮಠದ ಹೆಸರನ್ನು ಏಕೆ ಬಳಕೆ ಮಾಡುತ್ತೀರಿ? ಮಠಕ್ಕೆ ಅದರದ್ದೇ ಆದ ಗೌರವ, ಘನತೆ ಇದೆ. ಹೀಗಾಗಿ ಇನ್ನು ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ತಿರುವು ಪಡೆದಿರುವ “ಒಕ್ಕಲಿಗ” ಪಾಲಿಟಿಕ್ಸ್‌

ಡಿ.ಕೆ. ಶಿವಕುಮಾರ್‌ ಹೇಳಿಕೆ ಬಳಿಕ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಎನ್. ಚಲುವರಾಯಸ್ವಾಮಿ‌ (N Chaluvarayaswamy) ಗಂಭೀರ ಆರೋಪವನ್ನು ಮಾಡಿದ್ದರು. ಹಳೇ ವಿಷಯವನ್ನು ಮತ್ತೆ ಕೆದಕಿ, ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ನಿರ್ಮಲಾನಂದನಾಥ ಶ್ರೀಗಳ ಫೋನ್‌ ಟ್ಯಾಪ್‌ (Tap phone) ಮಾಡಿಸಿದ್ದರು ಎಂದು ಆರೋಪ ಮಾಡಿದ್ದರು.

ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಟ್ಯಾಪ್‌ ಮಾಡಿಸಿದ್ದರು. ಈಗ ಅವರ ಬಳಿಗೇ ಹೋಗಿ ಹೇಗೆ ಆಶೀರ್ವಾದವನ್ನು ಕೇಳುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಎಚ್‌ಡಿಕೆ ವಿರುದ್ಧ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಂಭೀರ ಆರೋಪ ಮಾಡಿದ್ದರು.

ಸ್ವಾಮೀಜಿಯಾದವರು ಯಾರ ಪರ ಅಥವಾ ಯಾವ ಪಕ್ಷದ ಪರವೂ ಪ್ರಚಾರವನ್ನು ಮಾಡಲು ಆಗುವುದಿಲ್ಲ. ಚುಂಚನಗಿರಿ ಮಠವು ಒಕ್ಕಲಿಗ ಸಮುದಾಯದ ಮಠವಾಗಿದ್ದರೂ ಎಲ್ಲ ಜಾತಿಯವರನ್ನೂ ಒಳಗೂಡಿಸಿಕೊಂಡು ಹೋಗುತ್ತಿರುವ ಮಠವಾಗಿದೆ. ಇದು ಜಾತ್ಯತೀತ ಮಠ ಎಂಬ ಹೆಸರನ್ನು ಗಳಿಸಿದೆ. ಬಾಲಗಂಗಾಧರನಾಥ ಶ್ರೀಗಳು ಎಲ್ಲ ಜಾತಿಯವರನ್ನು ಬೆಳೆಸಿದ್ದಾರೆ. ಜೆಡಿಎಸ್‌ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು ಕಿರುಕುಳ‌ ಕೊಟ್ಟಿದ್ದರು ಎಂಬುದು ಗೊತ್ತಿರುವ ಸಂಗತಿಯಾಗಿದೆ. ನಾವು ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡಿದ್ದೇವೆ. ಚುನಾವಣೆ ಸಮಯದಲ್ಲಿ ಇಂತಹ ಭೇಟಿ ಮಾಮೂಲಿ ಎಂದು ಹೇಳಿದ್ದರು.

ತಿರುಗೇಟು ನೀಡಿದ್ದ ಎಚ್‌ಡಿಕೆ

ಇದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದು, ನಾನು ಫೋನ್ ಟ್ಯಾಪಿಂಗ್ ಮಾಡುತ್ತಿದ್ದರೆ ನನ್ನ ಸರ್ಕಾರವನ್ನು ಏಕೆ ಬೀಳಿಸಿಕೊಳ್ಳುತ್ತಿದ್ದೆ ಎಂದು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ, ಬೇಕಿದ್ದರೆ ಮತ್ತೆ ತನಿಖೆ ಮಾಡಿಸಿಕೊಳ್ಳಲಿ ಎಂದು ಸವಾಲನ್ನು ಸಹ ಹಾಕಿದ್ದರು.

ಹಾಸನ ಜಿಲ್ಲೆಯ ಅರಕಲಗೂಡಿನ ರಾಮನಾಥಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಎಚ್.ಡಿ. ಕುಮಾರಸ್ವಾಮಿ, ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರ್ಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ, ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು? ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ್ದ ಎಚ್‌ಡಿಕೆ, ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ. ಅದರಲ್ಲಿ ಏನಿದೆ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕಾ? ಎಂದು ಕೇಳಿದ್ದರು.

ಸ್ವಾಮೀಜಿ ಭೇಟಿ ರಾಜಕೀಯವೇ?

ಸ್ವಾಮೀಜಿ ಅವರನ್ನು ಭೇಟಿ ಮಾಡುವುದಕ್ಕೆ ಕಾಂಗ್ರೆಸ್‌ನವರು ಎಷ್ಟು ಜನ ಹೋಗಿದ್ದರು? ಎಲ್ಲ ಟಿವಿಗಳಲ್ಲಿ ಈ ಬಗ್ಗೆ ವಿಡಿಯೊ ಬಂದಿದೆಯಲ್ಲ. ಇವರು ಏನು ಬೇಕಾದರೂ ಮಾಡಬಹುದು, ನಾವು ಮಾಡುವ ಹಾಗಿಲ್ಲವೇ? ಅದು ಕೂಡ ಒಂದು ದೊಡ್ಡ ರಾಜಕೀಯನಾ? ವರ್ಷದ ಮೊದಲ ದಿನ ನಮ್ಮ ಸಮುದಾಯದ ಗುರು ಹಿರಿಯರ ಆಶೀರ್ವಾದ ಪಡೆಯುತ್ತೇವೆ. ಅದೇನು ಮಹಾ ಅಪರಾಧವಾ? ಜ್ವರ ಬಂದಾಗ ಆಸ್ಪತ್ರೆಗೆ ಹೋಗದೆ ಇನ್ನೆಲ್ಲಿಗೆ ಹೋಗಲು ಸಾಧ್ಯ? ನಾನು 140 ಮಠಗಳಿಗೆ ಅನುದಾನ ನೀಡಿದ್ದೆ. ಮಠಗಳು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಿದ್ದೆ. ಇದೇನು ಹೊಸದಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು.

ಇದನ್ನೂ ಓದಿ: Lok Sabha Election 2024: ಸೋಲಿಸಿದರೆ ಸಮಸ್ಯೆಗಳಿಗೆ ನೀವೇ ಕಾರಣರಾಗುತ್ತೀರಿ; ಅಪಾರ್ಟ್‌ಮೆಂಟ್‌ನಲ್ಲಿ ಡಿಕೆಶಿ ಮತಯಾಚನೆ

ಒಂದು ವರ್ಷದೊಳಗೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾದು ನೋಡಿ. ರಾಜಕೀಯ ಎಂದರೆ ಅದು ಹರಿಯುವ ನೀರು. ಯಾವಾಗ ಏನೇನಾಗುತ್ತದೆಯೋ ನಮಗೂ ಗೊತ್ತಾಗಲ್ಲ. ಅವರಿಗೂ ಗೊತ್ತಾಗೋದಿಲ್ಲ. ಸಚಿವರೇ ಹೇಳುತ್ತಿದ್ದಾರೆ, ಕಾಂಗ್ರೆಸ್ ನಾಯಕರೇ ದಿನ ಬೆಳಗಾದರೆ ಹೇಳುತ್ತಿದ್ದಾರಲ್ಲ, ನೀವು ಅವರನ್ನೇ ಕೇಳಿ ಎಂದು ಮಾಧ್ಯಮಗಳಿಗೆ ಹೇಳಿದ್ದರು.

ಡಿಕೆಶಿ ವಿರುದ್ಧ ಕಿಡಿ

ಜೆಡಿಎಸ್ ಎಲ್ಲಿದೆ ಎನ್ನುವ ದುರಹಂಕಾರದ ಮಾತುಗಳನ್ನು ‌ಡಿಸಿಎಂ ಡಿ.ಕೆ. ಶಿವಕುಮಾರ್ ಆಡುತ್ತಿದ್ದಾರೆ. ಇವರ ಸಹವಾಸ ಮಾಡಿದ್ದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ‌ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಕದಲ್ಲಿಯೇ ಕುಳಿತು ಹಳ್ಳ ತೋಡಿದರಲ್ಲ, ಎಲ್ಲವೂ ನೆನಪಿದೆ ನನಗೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

Exit mobile version