ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ (Mandya Lok Sabha constituency) ಈಗ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಕುತೂಹಲವಾಗಿದೆ. ಅಭ್ಯರ್ಥಿ ನೀವೇ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಒತ್ತಾಯ ಮಾಡಿದ ಮಂಡ್ಯ ಜೆಡಿಎಸ್ (JDS Karnataka) ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು, ಜೆ.ಪಿ. ನಗರದಲ್ಲಿರುವ ಕುಮಾರಸ್ವಾಮಿ ನಿವಾಸದ ಎದುರಿನ ರಸ್ತೆಯಲ್ಲಿಯೇ ಕುಳಿತು ಘೋಷಣೆ ಕೂಗಿದ್ದಾರೆ. ಹೀಗಾಗಿ ಇನ್ನೊಂದೇ ದಿನದಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಎಚ್‌ಡಿಕೆ ಹೇಳಿದ್ದಾರೆ. ಆದರೆ, ಬಹುತೇಕ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ಮೂರನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ (Heart Surgery) ಒಳಗಾಗಿ ಮನೆಗೆ ಮರಳಿದ ಅವರನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ಮುಖಂಡರು ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಕುಮಾರಸ್ವಾಮಿ ಮಧ್ಯಪ್ರವೇಶ
ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಂದೆಯವರು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಈಗಷ್ಟೇ ಮನೆಗೆ ಬಂದಿದ್ದಾರೆ. ಅವರಿಗೆ ಒಂದು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು. ನಿಖಿಲ್ ಮಾತಿನ ನಡುವೆಯೇ ಕುಮಾರಸ್ವಾಮಿ ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಣೆಗಳನ್ನು ಕೂಗತೊಡಗಿದ ಕಾರ್ಯಕರ್ತರನ್ನು ಕೊನೆಗೆ ಕುಮಾರಸ್ವಾಮಿ ಅವರೇ ಸಮಾಧಾನಪಡಿಸಬೇಕಾಯಿತು.
ಮಂಡ್ಯದಲ್ಲಿ ನಮಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ಅದು ನನ್ನ ಭಾಗ್ಯ. ನಾನು ಈ ಭೂಮಿಯಲ್ಲಿ ಇರುವವರೆಗೂ ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಈವರೆಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನನ್ನ ಆರೋಗ್ಯವನ್ನು ನೋಡಿಕೊಂಡು ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಕ್ಷದಲ್ಲಿ ಬೆಳೆದವರೇ ಬೀದಿಗೆ ಬಿಟ್ಟಿದ್ದಾರೆ
ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಿಮಗೆ ನಿರಾಸೆ ಮಾಡಲ್ಲ ಎಂದು ಮಂಡ್ಯದ ಸಭೆಯಲ್ಲೇ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ? ಇಂದು ಅಥವಾ ನಾಳೆ ಘೋಷಣೆ!
ಜೆಡಿಎಸ್ ಕಾರ್ಯಕರ್ತರಿಂದ ಗಲಾಟೆ
ನಾಳೆ ಹೇಳುತ್ತೇನೆ
ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ನನಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವ ಜಿಲ್ಲೆ ಮಂಡ್ಯ. ಈ ನೆಲವನ್ನು, ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಾಳೆ (ಸೋಮವಾರ) ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡುತ್ತೇನೆ. ನಾಳೆಯ ದಿನ ಯಾವುದೇ ಕಾರಣಕ್ಕೂ ನಿಮಗೆ ನಿರಾಶೆ ಮಾಡಲ್ಲ ಎಂದು ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಚನ್ನಪಟ್ಟಣ ಕಾರ್ಯಕರ್ತರ ಸಭೆ ಬಳಿಕ ನಿರ್ಧಾರ; ನಿಖಿಲ್
ಇದಕ್ಕೂ ಮೊದಲು ಮಂಡ್ಯ ಕಾರ್ಯಕರ್ತರ ಜತೆ ಮಾತನಾಡಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು; ಮಂಡ್ಯ ಕಾರ್ಯಕರ್ತರಾದ ತಾವೆಲ್ಲರೂ ಬಂದು ಒತ್ತಾಯ ಮಾಡುತ್ತಿದ್ದೀರಿ. ನಾಳೆ ಚನ್ನಪಟ್ಟಣ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮಂಡ್ಯದಲ್ಲಿ ತಂದೆಯವರೇ ಚುನಾವಣೆಗೆ ನಿಲ್ಲಲಿ ಎಂದು ಒತ್ತಡ ಇದೆ. ನಮ್ಮ ಕುಟುಂಬದಿಂದ ಚುನಾವಣೆ ಸ್ಪರ್ಧೆ ಬೇಡ ಅಂದುಕೊಂಡಿದ್ದೆವು. ಆದರೆ ಮಂಡ್ಯದ ಪರಿಸ್ಥಿತಿಯೇ ಬೇರೆ ಇದೆ. ಹೀಗಾಗಿ ಕುಮಾರಣ್ಣ ಅವರ ಮೇಲೆ ನೀವೆಲ್ಲ ಒತ್ತಡ ಹಾಕುತ್ತಿದ್ದೀರಿ. ತಂದೆಯವರು ಒಂದು ದಿನದ ಸಮಯಾವಕಾಶ ಕೇಳಿದ್ದಾರೆ. ನಾಳೆ (ಸೋಮವಾರ) ಸಂಜೆಯೊಳಗೆ ಅಭ್ಯರ್ಥಿ ಯಾರೆಂದು ಅಂತಿಮ ಆಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತು
2019ರ ಲೋಕಸಭಾ ಚುನಾವಣೆಯಲ್ಲಿ ನನಗೆ ಕೆಲವರ ಕುತಂತ್ರದಿಂದ ಸೋಲಾಯಿತು. ಚಿತಾವಣೆಯಿಂದಲೇ ನಾನು ಸೋತೆ. ಹಾಗಾಗಿ ಜಿಲ್ಲೆಯ ಜನರು, ಕಾರ್ಯಕರ್ತರು ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಕಳೆದ ಬಾರಿ ಸೊತಿದ್ದೀರಿ, ಈ ಬಾರಿ ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾಳೆ ಸಂಜೆಯೊಳಗೆ ತಂದೆಯವರ ನಿರ್ಧಾರ ಗೊತ್ತಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: HD Kumaraswamy: ಹಾರ್ಟ್ ಆಪರೇಷನ್ ಬಳಿಕ ಎಚ್‌ಡಿಕೆ ಮೊದಲ ಮಾತು; ಮಂಡ್ಯ, ಸಿಎಂ ಬಗ್ಗೆ ಹೇಳಿದ್ದೇನು?
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹಿರಿಯ ನಾಯಕರು, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಶಾಸಕರಾದ ಎಚ್.ಟಿ. ಮಂಜುನಾಥ್, ಮಾಜಿ ಶಾಸಕರಾದ ಡಾ.ಕೆ. ಅನ್ನದಾನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡ ರಾಮಚಂದ್ರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಎಚ್‌ಡಿಕೆ ನಿವಾಸದ ಎದುರು ಸೇರಿದ್ದರು.