ಹಾಸನ: ನನಗೆ ಚಿಕ್ಕ ವಯಸ್ಸಿನಿಂದಲೇ ಆರೋಗ್ಯ ಸಮಸ್ಯೆ ಇದೆ. ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಈಗ ಮತ್ತೆ ಆಪರೇಷನ್‌ಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನನಗೆ ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ. ಇನ್ನೆರಡು ದಿನದಲ್ಲಿ ನಾನು ಮತ್ತೆ ಆಸ್ಪತ್ರೆಗೆ ಸೇರಬೇಕು. ಈ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಯಿಂದ ಯಾವುದೇ ವ್ಯತ್ಯಾಸ ಆಗಬಾರದು. ಕೈ ಜೋಡಿಸಿ ಮನವಿ ಮಾಡುತ್ತೇನೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ (Prajwal Revanna) ಅಭ್ಯರ್ಥಿಯಾಗಿದ್ದು, ನಾನು ಎಂದು ಭಾವಿಸಿ ಎಲ್ಲರೂ ಮತ ಹಾಕಿ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದ್ದಾರೆ. ಅಲ್ಲದೆ, ಈ ಲೋಕಸಭಾ ಚುಣಾವಣೆಯಲ್ಲಿ (Lok Sabha Election 2024) ಜೆಡಿಎಸ್ ಪಕ್ಷವನ್ನು (JDS Karnataka) ಉಳಿಸಿ ಎಂದು ಕೋರಿದ್ದಾರೆ.
ಹಾಸನದಲ್ಲಿ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಚುನಾಯಿತ ಪ್ರತಿನಿಧಿಗಳು, ಮಾಜಿ ಸದಸ್ಯರು ಹಾಗೂ ಪ್ರಮುಖರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರನ್ನು ಇಲ್ಲಿ ಚುನಾವಣೆಯಲ್ಲಿ ಸೋಲಿಸಿದ್ದೀರಿ. ಆದರೂ ಅವರು ಹಾಸನವನ್ನು ಮರೆಯಲಿಲ್ಲ ಅವರು ಜೀವನದಲ್ಲಿ ಎಂದೂ ತಮ್ಮ ಜಿಲ್ಲೆಯನ್ನು ಮರೆಯಲಿಲ್ಲ. ಅವರ ಮಗನಾಗಿ ಎಚ್.ಡಿ. ರೇವಣ್ಣ ಅವರು ದೇವೇಗೌಡರು ಮಾಡಿರದ ಹಲವಾರು ಕೆಲಸವನ್ನು ಮಾಡಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮ ಹಾಕಿದ್ದಾರೆ. ದೇವಸ್ಥಾನ, ರಸ್ತೆಗಳು ಎಲ್ಲವೂ ರೇವಣ್ಣನ ಕೆಲಸವನ್ನು ಹೇಳುತ್ತಿವೆ. ಇಷ್ಟೆಲ್ಲ ಮಾಡಿ ಉಪಯೋಗ ಏನು? ನಮ್ಮಲ್ಲಿರುವ ಸಣ್ಣ ಪುಟ್ಟ ತಪ್ಪುಗಳು ಆಕ್ರೋಶ ಆಗಿ ತಿರುಗಿದರೆ ಹೇಗೆ? ನಾವು ಸ್ವಾರ್ಥಕ್ಕೆ ಬದುಕಿಲ್ಲ. ಅಧಿಕಾರ ಸಿಕ್ಕಾಗ ನಾಡು ಕಟ್ಟಲು ಕೆಲಸ ಮಾಡಿದ್ದೇವೆ. ಹೀಗಾಗಿ ಈ ಬಾರಿ ನಮ್ಮ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿ ಎಂದು ಕೋರಿದ್ದಾರೆ.
ನಮ್ಮನ್ನು ಉಳಿಸಿಕೊಳ್ಳಿ
2018ರಲ್ಲಿ ನಾನೇ ಸಿಎಂ ಆದೆ. ಕಾಂಗ್ರೆಸ್ ಜತೆ ಹೊಂದಾಣಿಕೆ ಆಯಿತು. ನಾವು ಬೇಡ ಎಂದರೂ ಹೊಂದಾಣಿಕೆ ಮಾಡಿಕೊಂಡರು. ಈಗ ಸಿಎಂ ಮಂಡ್ಯ ಜಿಲ್ಲೆಯ ಚುನಾವಣೆ ಬಗ್ಗೆ ಸತ್ಯ ಹೇಳಿದ್ದಾರೆ. ಅಲ್ಲಿನ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣ ಎಂದು ಸತ್ಯ ಹೇಳಿದ್ದಾರೆ. ನಾನು ನನ್ನ ಮಗ ನಿಖಿಲ್‌ಗೆ ಅಲ್ಲಿ ಟಿಕೆಟ್ ಬೇಡ ಎಂದು ಹೇಳಿದ್ದೆ. ನಾವು ಅಲ್ಲಿ ಮೂರು ಸಚಿವರು, ಶಾಸಕರು ಇದ್ದರೂ ಗೆಲ್ಲಲು ಆಗಲಿಲ್ಲ. ನಾವು ತಪ್ಪು ಮಾಡಿದೆವು ಎಂದು ಸೋಲಿಸಿದರೇ? ಖಂಡಿತಾ ಅಲ್ಲ. ಅಂದು ನಮ್ಮ ಸೋಲಿಗೆ ಇದೇ ಕಾಂಗ್ರೆಸ್, ಇದೇ ಬಿಜೆಪಿ ಕಾರಣವಾಯಿತು. ಇದೇ ಸ್ಥಿತಿ ನನ್ನ ಸಹೋದರನ ಮಗನಿಗೆ ಆಗಬಾರದು. ನಮ್ಮನ್ನು ಉಳಿಸಿಕೊಳ್ಳಿ ಎಂದು ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಹಾಸನಕ್ಕೆ ನಾನೇ ಅಭ್ಯರ್ಥಿ ಎಂದು ಭಾವಿಸಿ
ಈಗ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ, ರಾಮ ಮಂದಿರದ ಅಲೆ ಇದೆ. ಇಷ್ಟಿದ್ದರೂ ನಮ್ಮ ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಕೊಡುತ್ತಿದೆ. ವಿಜಯಪುರ, ಕಲಬುರಗಿ ಕ್ಷೇತ್ರಗಳಲ್ಲಿ ಲಕ್ಷ ಲಕ್ಷ ಮತದಾರರು ಇದ್ದಾರೆ. ನಾನು ಹಾಸನದ ಬಿಜೆಪಿ ಮುಖಂಡರಿಗೆ ಮನವಿ ಮಾಡುತ್ತೇನೆ. ದೇವೇಗೌಡರ ಹೆಸರು ಉಳಿಸಲು ಈ ಮೈತ್ರಿಯ ತೀರ್ಮಾನ ಮಾಡಿದ್ದೇನೆ. ಅವರ ಹೆಸರು ಹಾಳು ಮಾಡಲು ಅಲ್ಲ. ನಾನು ಬಿಜೆಪಿ ನಾಯಕರ ಮನೆಗೆ ಹೋದವನಲ್ಲ. ಕಳೆದ ಚುನಾವಣೆಯಲ್ಲಿ ಏನು ಕುತಂತ್ರ ಆಯ್ತು? ಎರಡು ಪಕ್ಷಗಳು ಸೇರಿ ಜೆಡಿಎಸ್ ಮುಗಿಸಲು ತೀರ್ಮಾನ ಮಾಡಿದ್ದವು. ನಾವು ತಪ್ಪು ಮಾಡಿದ್ದರೆ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ. ನೀವು ನಮ್ಮನ್ನು ಸೋಲಿಸಿಲ್ಲ, ನಾವೇ ಮೈ ಮರೆತಿದ್ದೇವೆ. ಪಕ್ಷ ಕಟ್ಟಬೇಕು ಎಂದು ನಿರಂತರ 90 ದಿನ ಶ್ರಮ ಹಾಕಿದೆ. ಎಲ್ಲ ಕಡೆ ಜನ ಸಾಗರವೇ ಸೇರಿತು. ಆದರೆ ಯಾರ ಕೆಟ್ಡ ದೃಷ್ಟಿ ಬಿತ್ತೋ ಗೊತ್ತಿಲ್ಲ. 19 ಸ್ಥಾನಕ್ಕೆ ಇಳಿದಿದ್ದೇವೆ. ಈಗ ಈ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ಅಲ್ಲ ಕುಮಾರಸ್ವಾಮಿ ಎಂದು ಭಾವಿಸಿ ತೀರ್ಮಾನ ಮಾಡಿ ಎಂದು ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಎಲ್ಲ ಕಡೆ ಸ್ಪರ್ಧಿಸುವ ಶಕ್ತಿ ನಮಗಿಲ್ಲ
ಮಂಡ್ಯ, ಕೋಲಾರ, ಹಾಸನ ಜಿಲ್ಲೆಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ನಾಯಕರು ತೀರ್ಮಾನ ಮಾಡಿದ್ದಾರೆ. ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ಅವರು ಕೊಡವವರಿದ್ದರು. ಆದರೆ, ಅಲ್ಲೆಲ್ಲ ಚುನಾವಣೆ ಮಾಡೋ ಶಕ್ತಿ ನಮಗಿಲ್ಲ. ನಾನು ಅಷ್ಟು ಬೇಗ ಸಾಯಲ್ಲ. ನಿಮ್ಮ ಜತೆ ಇರುತ್ತೇನೆ. ಭಗವಂತ ನನಗೆ ಆಯಸ್ಸು ಕೊಡುತ್ತಾನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನನ್ನ ರೇವಣ್ಣ ಅವರಲ್ಲಿ ಭಿನ್ನಾಭಿಪ್ರಾಯ ಇದ್ದವು
ನನ್ನ ರೇವಣ್ಣ ಅವರಲ್ಲಿ ಭಿನ್ನಾಭಿಪ್ರಾಯ ಇದ್ದವು. ಆದರೆ, ನಾನು ಕುಟುಂಬ ಒಡೆಯಲು ಬಿಡಲಿಲ್ಲ. ಕಠಿಣ ನಿರ್ಧಾರ ಮಾಡಿ ಸ್ವರೂಪ್‌ಗೆ ಟಿಕೆಟ್ ಕೊಟ್ಟೆ. ರೇವಣ್ಣ ಅವರ ಅಭಿವೃದ್ಧಿ ಕೆಲಸದ ಮುಂದೆ ನಾನು ಇಲ್ಲ. ಆದರೆ, ಅವನು ಸ್ವಲ್ಪ ಮುಂಗೋಪಿ, ಬೈಯ್ತಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಅವನನ್ನು ಕ್ಷಮಿಸಿಬಿಡಿ. ನಮ್ಮಲ್ಲಿ ತಪ್ಪುಗಳಾಗಿರಬಹುದು. ಆದರೆ ತಿದ್ದಿಕೊಳ್ಳಲು ಅವಕಾಶ ಕೊಡಿ. ಜನರು ಕ್ಷಮಿಸುತ್ತಾರೆ ಅದರಲ್ಲಿ ನಂಬಿಕೆ ಇದೆ. ಈ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ದಯವಿಟ್ಟು ಪಕ್ಷ ಉಳಿಸಿಕೊಡಿ ಎಂದು ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ
ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ. ನಾನು ಆಸ್ತಿ ಸಂಪಾದನೆ ಮಾಡಿಲ್ಲ. ನಿಮ್ಮಂತಹ ಲಕ್ಷಾಂತರ ಜನರನ್ನು ಸಂಪಾದಿಸಿದ್ದೇನೆ. ಇವನು ರೇವಣ್ಣನ ಮಗ ಅಲ್ಲ, ನನ್ನ ಮಗ. ಬಹಳಷ್ಟು ಬದಲಾವಣೆ ತರುತ್ತೇನೆ. ಅವನೂ ಬದಲಾಗುತ್ತಾನೆ. ಎಲ್ಲ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈ ಬಾರಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತಿಲ್ಲ. ಮಂಡ್ಯದಲ್ಲಿ ಅರ್ಜಿ ಹಾಕಿ ಹೋಗು ಅಂತಾರೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ನಿಲ್ಲಿ ಅಂತಾರೆ. ಯಾರ ಯಾರ ಕುಟುಂಬದ ಎಷ್ಟೆಷ್ಟು ಮಂದಿ ರಾಜಕೀಯದಲ್ಲಿದ್ದಾರೆ ಅಂತ ಲೆಕ್ಕ ಹಾಕೋಣವೇ? ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆ ಆಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ಹೊರಹಾಕಿದರು.
ಡಾ. ಮಂಜುನಾಥ್‌ಗೆ ಮಾಧ್ಯಮದವರಿಂದ ಪ್ರಚಾರ
ಡಾ. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ನಾವು ತೀರ್ಮಾನ ಮಾಡಿರಲಿಲ್ಲ. ಹದಿನೇಳು ವರ್ಷ ಅವರ ಸೇವೆ ನೋಡಿ ಅವರೇ ಅಭ್ಯರ್ಥಿ ಆಗಬೇಕು ಅಂತ ಮಾಧ್ಯಮದವರೇ ಶುರು ಮಾಡಿದರು. ಮಾಧ್ಯಮಗಳಲ್ಲೇ ಡಾ.ಮಂಜುನಾಥ್ ರಾಜಕೀಯಕ್ಕೆ ಬರಬೇಕು ಎಂದು ಪ್ರಚಾರ ಮಾಡಲಾಯಿತು. ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಗೂ ನೀವು ಆ ರೀತಿಯ ಪ್ರಚಾರ ಕೊಡಲಿಲ್ಲ. ಡಾ.ಮಂಜುನಾಥ್ ಈ ಜಿಲ್ಲೆಯ ಮಣ್ಣಿನ ಮಗ. ಬಿಜೆಪಿ ಹೈಕಮಾಂಡ್ ನಾಯಕರು ನಿಮ್ಮ ಭಾವ ಅವರನ್ನು ಒಪ್ಪಿಸಬೇಕು ಎಂದು ಮನವಿ ಮಾಡಿದರು. ಹೀಗಾಗಿ ಅವರನ್ನು ಒಪ್ಪಿಸಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಮಂಡ್ಯ ಜೆಡಿಎಸ್‌ಗೆ ಎಂದ ಎಚ್‌ಡಿಕೆ; ಸುಮಲತಾ ಮುಂದಿನ ನಡೆ ಏನು?
ಇಲ್ಲಿ ಕೂಗಿದರೆ ಕನಕಪುರಕ್ಕೆ ಕೇಳಬೇಕು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ. ಮಂಜುನಾಥ್ ಸ್ಪರ್ಧಿಸುತ್ತಿರುವುದರಿಂದ ಕನಕಪುರದಿಂದ ಬಂದು ಇಲ್ಲಿ ಜೆಡಿಎಸ್ ಅನ್ನು ಸೋಲಿಸುತ್ತೇವೆ ಎಂದು ಹೇಳುತ್ತಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಇಲ್ಲಿ ಬಂದು ಹಾಸನದಲ್ಲಿ ಕೂಗಿದರೆ ಹೊಳೆನರಸೀಪುರಕ್ಕೆ ಕೇಳಬೇಕು ಎಂದು ಹೇಳುತ್ತಾರೆ. ರಾಜಕೀಯದಲ್ಲಿ ಸೋಲು, ಗೆಲುವು ಸಹಜ. ನಾವು ಗೆದ್ದಾಗ ದುರಂಹಕಾರ ಮಾಡಿಲ್ಲ, ಸೋತಾಗ ಕುಗ್ಗಿಲ್ಲ. ಇಲ್ಲಿ ಕೂಗಿದರೆ ಕನಕಪುರಕ್ಕೆ ಕೇಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.