Site icon Vistara News

Lok Sabha Election 2024: ಸುಮಲತಾ ಆಗ್ತಾರಾ ರೆಬೆಲ್?;‌ 3 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯದ ಟ್ರಬಲ್‌!

Sumalatha ambareesh Mandya Lok Sabha constituency MP

ಬೆಂಗಳೂರು: ಲೋಕಸಭಾ ಚುನಾವಣೆ 2024 (Lok Sabha Election 2024) ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಯಾರಿಗಳು ಜೋರಾಗಿ ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕೆಲವು ಹೈವೋಲ್ಟೇಜ್‌ ಕ್ಷೇತ್ರಗಳಿದ್ದು, ಎಲ್ಲರ ಕಣ್ಣು ಅದರತ್ತ ನೆಟ್ಟಿದೆ. ಇದರ ಭಾಗವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಕಣ್ಣಿಟ್ಟಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಈಗ ಭಾರಿ ನಿರಾಸೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಸುಮಲತಾ ಮಂಡ್ಯದಲ್ಲಿ ಸೋಮವಾರ (ಮಾ. 25) ಮುಖಂಡರ ಸಭೆ ಕರೆದಿದ್ದಾರೆ.

ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ ರೆಬೆಲ್‌ ಆಗುತ್ತಾರಾ? ಜೆಡಿಎಸ್‌ಗೆ ಟ್ರಬಲ್‌ ಕೊಡುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾವುದಕ್ಕೂ ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.

ಸಭೆಯಲ್ಲಿ ಆಪ್ತರೊಂದಿಗೆ ಚರ್ಚೆ ಮಾಡಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇಲ್ಲಿ ಮೈತ್ರಿಗೆ ಸಪೋರ್ಟ್ ಮಾಡಬೇಕಾ? ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯಬೇಕಾ ಎಂಬುದನ್ನು ಸುಮಲತಾ ಅಂಬರೀಷ್‌ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಮಂಡ್ಯ ಬಿಡಲ್ಲ ಎಂದಿರುವ ಸುಮಲತಾ ನಿರ್ಧಾರವೇನು?

ಈಗಾಗಲೇ ದೆಹಲಿಗೆ ಪರೇಡ್ ನಡೆಸಿದ್ದ ಸುಮಲತಾ ಅಂಬರೀಶ್‌ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆ ಮಂಡಿಸಿದ್ದರು. ಆದರೆ, ಅಲ್ಲಿ ಅವರಿಗೆ ಯಾವ ಭರವಸೆ ಸಿಕ್ಕಿದೆ ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಇದೆ. ಮುಂದಿನ ದಿನದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟ ಮಾಡುವುದಾಗಿ ಹೇಳಿದ್ದ ಸುಮಲತಾ, ತಾವು ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ.

ಸುಮಲತಾಗೆ ಸುಲಭವಲ್ಲ

ತನಗೇ ಟಿಕೆಟ್ ಅಂತ ಕಾನ್ಫಿಡೆಂಟ್ ಆಗಿದ್ದ ಸುಮಲತಾ ಅವರು ಈ ಬಾರಿಯೂ ಹಳೇ ನಿರ್ಧಾರವನ್ನು ತೆಗೆದುಕೊಳ್ತಾರಾ? ಪಕ್ಷೇತರವಾಗಿ ನಿಲ್ಲುವ ಮೂಲಕ ಮೈತ್ರಿ ಅಭ್ಯರ್ಥಿಗೆ ಟಕ್ಕರ್‌ ಕೊಡ್ತಾರಾ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ಆದರೆ, ಕಳೆದ ಬಾರಿ ಸುಮಲತಾ ಸ್ಪರ್ಧೆ ಮಾಡಿದ್ದರಿಂದ ಅವರಿಗೆ ಬೆಂಬಲ ನೀಡಿದ್ದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅಲ್ಲದೆ, ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಮೂಡಿದ್ದು ಸಹ ಸುಮಲತಾ ಅವರಿಗೆ ಪ್ಲಸ್‌ ಆಗಿತ್ತು. ಈಗ ಹಾಗಾಗದು. ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು, ಬಿಜೆಪಿ ಮೈತ್ರಿ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲಲಿದೆ. ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಯನ್ನು ಹಾಕಿದ್ದರಿಂದ ಈ ಬಾರಿ ಸ್ಪರ್ಧೆ ಮಾಡಿದರೂ ಏಕಾಂಗಿಯಾಗಬೇಕಾಗುತ್ತದೆ. ಇದರಿಂದ ಸುಮಲತಾಗೆ ಸುಲಭವಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಜತೆಗೆ ಮಗನ ರಾಜಕೀಯ ಭವಿಷ್ಯವನ್ನೂ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸುಮಲತಾ ಅಂಬರೀಶ್‌ ನಿರ್ಧಾರ ಈಗ ಮಹತ್ವ ಪಡೆದುಕೊಂಡಿದೆ.

ಜೆಡಿಎಸ್‌ ಅಭ್ಯರ್ಥಿಗಳಿಗೆ ತಟ್ಟಲಿದೆ ಬಂಡಾಯದ ಬಿಸಿ

ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾಗಿ ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ಸೋಮವಾರ ಘೋಷಿಸಿದ್ದಾರೆ. ಇನ್ನು ಮಂಡ್ಯ ಲೋಕಸಭಾದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಸಿ.ಎಸ್.‌ ಪುಟ್ಟರಾಜು ಹೇಳಿದ್ದಾರೆ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವ ಬಗ್ಗೆ ಸ್ವತಃ ಎಚ್‌ಡಿಕೆ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಜೆಡಿಎಸ್‌ ಟಿಕೆಟ್‌ ಸಿಗುವ ಬಗ್ಗೆ ಖಾತ್ರಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Lok Sabha Election 2024: ಕೋಲಾರ ಸೇರಿ 3 ಕ್ಷೇತ್ರ ಜೆಡಿಎಸ್‌ಗೆ; ಬಿಜೆಪಿ ಅಧಿಕೃತ ಪ್ರಕಟಣೆ

ಮೂರು ಕ್ಷೇತ್ರದಲ್ಲೂ ರೆಬೆಲ್‌

ಮಂಡ್ಯದಲ್ಲಿ ಜೆಡಿಎಸ್‌ಗೆ ಈಗ ಸುಮಲತಾ ರೆಬೆಲ್‌ ಆದರೆ, ಹಾಸನದಲ್ಲಿ ಮಾಜಿ ಸಚಿವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಜೆಡಿಎಸ್‌ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಇನ್ನು ಕೋಲಾರದಲ್ಲಿ ಹಾಲಿ ಸಂಸದ ಮುನಿಸ್ವಾಮಿಗೆ ಟಿಕೆಟ್‌ ಮಿಸ್‌ ಆಗಿರುವುದರಿಂದ ಅವರು ಸಹ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಐದು ವರ್ಷದ ತಮ್ಮ ರಿಪೋರ್ಟ್‌ ಕಾರ್ಡ್‌ ಅನ್ನು ನೀಡಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಜೆಡಿಎಸ್‌ಗೆ ಗೆಲ್ಲಲು ಸಾಕಷ್ಟು ಶ್ರಮ ಹಾಕಬೇಕಿದೆ. ಜತೆಗೆ ಬಂಡಾಯ ಶಮನಕ್ಕೆ ಬಿಜೆಪಿ ನಾಯಕರು ಮುಂದಾಗಬೇಕಿದೆ ಎನ್ನಲಾಗಿದೆ.

Exit mobile version