ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಬಂದಿದೆ. ಈಗ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್‌ಗಾಗಿ ಲಾಬಿ ಮಾಡಲಾಗುತ್ತಿದೆ. ಈ ಮಧ್ಯೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟ ಮಾಡಿದೆ. ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಮೈತ್ರಿ ಪಕ್ಷ ಜೆಡಿಎಸ್‌ಗೆ (JDS Karnataka) ಮೂರು ಸೀಟು ಬಿಟ್ಟುಕೊಡಲು ನಿರ್ಧಾರ ಮಾಡಿದ್ದು, ಅದರ ಘೋಷಣೆ ಬಾಕಿ ಇದೆ. ಆದರೆ, ಆ ಕ್ಷೇತ್ರಗಳಿಗೆ ಜೆಡಿಎಸ್ ತಯಾರಿ ನಡೆಸಿದ್ದು, ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಈ ಬಾರಿಯ ಲೋಕಸಭಾ ಕಣದಿಂದ ದೇವೇಗೌಡರ ಕುಟುಂಬ ಹಿಂದೆ ಸರಿದಿದೆ.
2024ರ ಲೋಕಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಮೂರು ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದನ್ನು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಕುಟುಂಬಕ್ಕಿಂತ ಕಾರ್ಯಕರ್ತನಿಗೆ ಟಿಕೆಟ್?
ಮಂಡ್ಯದಲ್ಲಿ ಈ ಮೊದಲು ಎಚ್.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಆಗಾಗ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದ ಎಚ್‌ಡಿಕೆ ಅಲ್ಲಿನ ನಾಡಿಮಿಡಿತವನ್ನೂ ಅರಿತು ಬಂದಿದ್ದರು. ಅಲ್ಲದೆ, ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದರು. ಈ ಮಧ್ಯೆ ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕುವ ತೀರ್ಮಾನವನ್ನು ಎಚ್‌ಡಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಇಲ್ಲವೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಎಂಬಂತೆ ಕೇಳಿಬರುತ್ತಿದ್ದ ಮಾತುಗಳಿಗೆ ಬ್ರೇಕ್ ಹಾಕಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿ.ಎಸ್ ಪುಟ್ಟರಾಜು ಅವರಿಗೆ ಟಿಕೆಟ್ ಒಲಿಯಲಿದೆ ಎಂದು ತಿಳಿದುಬಂದಿದೆ.
ಪುಟ್ಟರಾಜು ಆಯ್ಕೆ ಏಕೆ?
ಸಿ.ಎಸ್. ಪುಟ್ಟರಾಜು ಅವರು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದರೆ, ನಿಖಿಲ್ ಇಲ್ಲವೇ ಕುಮಾರಸ್ವಾಮಿ ಅಭ್ಯರ್ಥಿಯಾದರೆ ಕುಟುಂಬ ರಾಜಕಾರಣ ಎಂಬ ಕೂಗು ಏಳುವುದಲ್ಲದೆ, ಮಂಡ್ಯಕ್ಕೂ ಮತ್ತು ದೇವೇಗೌಡರ ಕುಟುಂಬಕ್ಕೂ ಏನು ಸಂಬಂಧ ಎಂಬ ಪ್ರಶ್ನೆಯನ್ನು ಜನರ ಮುಂದೆ ಕಾಂಗ್ರೆಸ್ ಇಡಲಿದೆ. ಹೀಗಾಗಿ ಪುಟ್ಟರಾಜುಗೆ ಟಿಕೆಟ್ ಕೊಡುವ ತೀರ್ಮಾನ ಮಾಡಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.
ಹಾಸನದಲ್ಲಿ ಪ್ರಜ್ವಲ್‌ಗೆ ಮಣೆ
ಹಾಸನ ಜೆಡಿಎಸ್ ಭದ್ರಕೋಟೆಯಾಗಿದೆ. ಆದರೆ, ಈ ಜಿಲ್ಲೆಯಲ್ಲಿ ಮಾಡಿಸಿದ ಸರ್ವೆ ಪ್ರಕಾರ, ಪ್ರಜ್ವಲ್ ರೇವಣ್ಣ ಅವರ ಬಗ್ಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಹೀಗಾಗಿ ಪ್ರಜ್ವಲ್ ಬದಲಿಗೆ ಬೇರೆಯವರನ್ನು ಕಣಕ್ಕೆ ಇಳಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ತೀರ್ಮಾನ ಮಾಡಿದ್ದರು. ಇದಕ್ಕೆ ಎಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿ, ತನ್ನ ಪುತ್ರನಿಗೇ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಸಾಕಷ್ಟು ಹಗ್ಗಜಗ್ಗಾಟಗಳ ಬಳಿಕ ರೇವಣ್ಣ ಒತ್ತಡಕ್ಕೆ ಎಚ್.ಡಿ. ಕುಮಾರಸ್ವಾಮಿ ಮಣಿದಿದ್ದಾರೆ.
ಇದನ್ನೂ ಓದಿ: Vistara News Polling Booth: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜನ ಬೆಂಬಲ; ಕಾಂಗ್ರೆಸ್ ನಂ. 2
ಕೋಲಾರಕ್ಕೆ ಮಲ್ಲೇಶ್ ಬಾಬು?
ಇನ್ನು ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಮಾಡಲಾಗಿದೆ. ಇಲ್ಲಿ ಹಾಲಿ ಸಂಸದರಾಗಿ ಬಿಜೆಪಿಯ ಮುನಿಸ್ವಾಮಿ ಇದ್ದಾರಾದರೂ ಇದು ಜೆಡಿಎಸ್‌ನ ಭದ್ರಕೋಟೆ ಆಗಿರುವುದರಿಂದ ಆ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಬಿಜೆಪಿಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಈಗ ಈ ಕ್ಷೇತ್ರಕ್ಕೆ ಕೆಜಿಎಫ್ ಮಲ್ಲೇಶ್ ಬಾಬುಗೆ ಟಿಕೆಟ್ ಕೊಡುವ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಅವರ ಹೆಸರೇ ಬಹುತೇಕ ಪಕ್ಕಾ ಎಂಬಂತಾಗಿದೆ.