Site icon Vistara News

Lok Sabha Election 2024: ಜೆಡಿಎಸ್‌ಗೆ 3 ಕ್ಷೇತ್ರ 3 ಟೆನ್ಶನ್;‌ ಪ್ರಜ್ವಲ್‌ ರೇವಣ್ಣಗೆ ಇಕ್ಕಟ್ಟು ತಂದ ನೆಗೆಟಿವ್‌ ರಿಪೋರ್ಟ್!

Lok Sabha Election 2024 JDS gets 3 seats Prajwal Revanna get negative report

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಅಖಾಡ ರಂಗೇರುತ್ತಿದೆ. ಕಾಂಗ್ರೆಸ್ ವರ್ಸಸ್ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಎಂಬ ನಿಟ್ಟಿನಲ್ಲಿ ರಾಜಕೀಯ ಕಣ ಸಿದ್ಧಗೊಂಡಿದೆ. ಇನ್ನು ಬಿಜೆಪಿ – ಜೆಡಿಎಸ್ ನಡುವೆ ಸೀಟ್ ಹಂಚಿಕೆ ಫೈನಲ್ ಆಗಿದ್ದು, ಜೆಡಿಎಸ್‌ಗೆ 3 ಬಿಜೆಪಿಗೆ 25 ಸ್ಥಾನ ಬಹುತೇಕ ಫಿಕ್ಸ್ ಆಗಿದೆ. ಈಗ ಜೆಡಿಎಸ್‌ಗೆ ಅಭ್ಯರ್ಥಿಗಳ ಆಯ್ಕೆ ತಲೆನೋವು ತಂದಿದೆ. ಮೂರು ಕ್ಷೇತ್ರ ಮೂರು ಟೆನ್ಶನ್‌ ಎಂಬಂತೆ ದಳದ ಪರಿಸ್ಥಿತಿಯಾಗಿದೆ. ಇದೇ ವೇಳೆ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರಿಗೆ ನೆಗೆಟಿವ್‌ ರಿಪೋರ್ಟ್‌ ಬಂದಿದ್ದು, ಇದು ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ. ಇದಕ್ಕೆ ಒಪ್ಪದ ಎಚ್.ಡಿ. ರೇವಣ್ಣ (HD Revanna) ಅವರು ಪುತ್ರನನ್ನೇ ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದಾರೆ ಇದೂ ಸಹ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ‌

28 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್‌ಗೆ ಸಿಕ್ಕಿರುವುದೇ ಮೂರು ಕ್ಷೇತ್ರವಾಗಿದೆ. ಹೀಗಾಗಿ ಮೂರಕ್ಕೆ ಮೂರರಲ್ಲೂ ಗೆಲ್ಲುವ ಅನಿವಾರ್ಯತೆ ಹಾಗೂ ಪಕ್ಷದ ಅಸ್ತಿತ್ವವನ್ನು ಸಾಬೀತು ಮಾಡಬೇಕಾದ ಪರಿಸ್ಥಿತಿ ಜೆಡಿಎಸ್‌ಗೆ ಇದೆ. ಈ ಹಿನ್ನೆಲೆಯುಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಈ ಮೊದಲೇ ಅವರು ಜೆಡಿಎಸ್‌ ಸ್ಪರ್ಧೆ ಮಾಡಲಿರುವ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ನಾಯಕರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅಭ್ಯರ್ಥಿ ಯಾರೇ ಇದ್ದರೂ ಅವರ ಗೆಲುವಿಗೆ ಶ್ರಮ ವಹಿಸಿ ಎಂದು ಕರೆ ನೀಡಿದ್ದಾರೆ. ಹಾಗಾಗಿ ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜತೆಗೆ ಜನರ ಮನಗೆಲ್ಲಲು ಸಮಾವೇಶವನ್ನು ನಡೆಸಲು ಜೆಡಿಎಸ್ ಪ್ಲ್ಯಾನ್‌ ಮಾಡಿಕೊಂಡಿದೆ.

ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಮತ್ತು ಚುನಾವಣಾ ತಂತ್ರಗಾರಿಕೆ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಸಭೆ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಬಿಡದಿ ಮನೆಯಲ್ಲಿ ಗೇಮ್ ಪ್ಲ್ಯಾನ್ ಶುರು ಮಾಡಿದ್ದಾರೆ. ಮೂರು ಕ್ಷೇತ್ರಗಳ ನಾಯಕರ ಜತೆ ಪ್ರತ್ಯೇಕ ಮಾತುಕತೆ ನಡೆಸಲಾಗಿದೆ. ಹೀಗಾಗಿ ಮೂರು ಕ್ಷೇತ್ರ, ಮೂರು ಟೆನ್ಶನ್‌ ಎಂಬಂತಹ ಸ್ಥಿತಿ ದಳ ಪಕ್ಷಕ್ಕೆ ನಿರ್ಮಾಣವಾಗಿದೆ.

ಎಚ್‌ಡಿಕೆ ಕಾರ್ಯತಂತ್ರ

ಆ ಮೂರು ಕ್ಷೇತ್ರಗಳ ಟೆನ್ಶನ್‌ನಿಂದ ಹೊರಬರಲು ಎಚ್‌.ಡಿ. ಕುಮಾರಸ್ವಾಮಿ ಪ್ಲ್ಯಾನ್‌ ಮಾಡಿದ್ದಾರೆ. ಮಂಡ್ಯದಲ್ಲಿ ಅಭ್ಯರ್ಥಿ ಆಯ್ಕೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಅಲ್ಲಿಗೆ ಭೇಟಿ ನೀಡಿದ್ದ ಎಚ್‌ಡಿಕೆ ಸ್ಥಳೀಯರ ನಾಯಕರ ಜತೆ ಸಭೆ ಮಾಡಿದ್ದಾರೆ. ಮಾಜಿ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.

ಮಂಡ್ಯಕ್ಕೆ ಲೋಕಸಭಾ ಅಭ್ಯರ್ಥಿಯಾಗಿ ಸಿ.ಎಸ್ ಪುಟ್ಟರಾಜು ಅವರನ್ನು ಕಣಕ್ಕಿಳಿಸಬೇಕು ಎಂಬುದು ಎಚ್ಡಿಕೆ ಒಲವಾಗಿದೆ. ಆದರೆ, ಸ್ಥಳೀಯ ನಾಯಕರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬದಿಂದಲೇ ಅಭ್ಯರ್ಥಿ ಆಗಬೇಕು ಎಂದು ಮನವಿ ಮಾಡುತ್ತಿದ್ದಾರೆ. ಸಮಾಧಾನ ಮಾಡಲು ಮುಂದಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ, “ನೀವೇ ಸ್ಪರ್ಧೆ ಮಾಡಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ” ಎಂದು ಹೇಳಿದ್ದಾರೆ. ಅದಾಗದಿದ್ದರೆ ನಿಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನಾದರೂ ಕಣಕ್ಕೆ ಇಳಿಸಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ದೇವೇಗೌಡರ ಕುಟುಂಬದಿಂದ ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಹೊರಗಿನಿಂದ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಇಲ್ಲಿ ಬೆಲೆಯೇ ಇಲ್ಲವೇ? ಸ್ಥಳೀಯ ನಾಯಕರನ್ನು ಏಕೆ ಬೆಳೆಸುವುದಿಲ್ಲ ಎಂದು ಕಾಂಗ್ರೆಸ್‌ನವರು ಪ್ರಶ್ನೆ ಮಾಡುತ್ತಾರೆ ಎಂಬ ಆತಂಕ ಎಚ್.ಡಿ. ಕುಮಾರಸ್ವಾಮಿ ಅವರದ್ದಾಗಿದೆ. ಹೀಗಾಗಿ ಇನ್ನೂ ಗೊಂದಲದಲ್ಲಿಯೇ ಎಚ್‌ಡಿಕೆ ಇದ್ದಾರೆ.

ಪ್ರಜ್ವಲ್‌ ರೇವಣ್ಣ ಬಗ್ಗೆ ನೆಗೆಟಿವ್‌ ರಿಪೋರ್ಟ್‌

ಹಾಸನದಲ್ಲಿ ಹಾಲಿ ಸಂಸ ಪ್ರಜ್ವಲ್ ರೇವಣ್ಣ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಮಾಡಿರುವ ರಿಪೋರ್ಟ್‌ನಲ್ಲಿ ಪ್ರಜ್ವಲ್‌ ಬಗ್ಗೆ ನೆಗೆಟಿವ್‌ ಅಂಶಗಳು ದಾಖಲಾಗಿವೆ. ಇದರಿಂದ ಬದಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಉತ್ತಮ ಎಂಬ ಅಭಿಪ್ರಾಯ ಎಚ್‌ಡಿಕೆ ಹಾಗೂ ಬಿಜೆಪಿ ಹೈಕಮಾಂಡ್‌ನದ್ದಾಗಿದೆ. ಆದರೆ, ಇದಕ್ಕೆ ಸೊಪ್ಪು ಹಾಕದ ಎಚ್.ಡಿ. ರೇವಣ್ಣ, ತಮ್ಮ ಮಗನಿಗೇ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಕೋಲಾರ ಕ್ಷೇತ್ರದಿಂದ ನಿಸರ್ಗ ನಾರಾಯಣ ಸ್ವಾಮಿ ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಚಿಂತನೆಯನ್ನು ನಡೆಸಲಾಗಿದೆ. ಆದರೆ, ಜಿಲ್ಲಾ ಜೆಡಿಎಸ್‌ ನಾಯಕರು ಇದಕ್ಕೆ ತೀವ್ರ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಕೋಲಾರ ಜಿಲ್ಲೆಯ ಮುಖಂಡರಿಗೆ ಟಿಕೆಟ್ ಕೊಡಿ ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ಇದು ಸಹ ಕುಮಾರಸ್ವಾಮಿಗೆ ತಲೆನೋವು ತಂದಿಟ್ಟಿದೆ.

Exit mobile version