ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಮತ್ತೆ ಕುಟುಂಬ ರಾಜಕಾರಣ (Family Politics) ಸದ್ದು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಇಂಡಿಯಾ ಒಕ್ಕೂಟದ (I.N.D.I.A.) ಕುರಿತು ವ್ಯಂಗ್ಯ ಮಾಡಿದ್ದಾರೆ. ಈ ಮೈತ್ರಿ ಒಕ್ಕೂಟದಲ್ಲಿ ಕುಟುಂಬ ರಾಜಕಾರಣವೇ ಇದ್ದು, ತಮ್ಮ ತಮ್ಮ ಕುಟುಂಬದವರಿಗೆ ಮಣೆ ಹಾಕುತ್ತಲೇ ಬರಲಾಗುತ್ತಿದೆ. ಎಲ್ಲವನ್ನೂ ಇವರ ಕುಟುಂಬದವರೇ ಪಡೆದುಕೊಂಡರೆ ಉಳಿದವರು ಏನು ಗಂಟೆ ಬಾರಿಸಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರ ಮತಯಾಚನೆ ಸಮಾರಂಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಫಾರುಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಒಂದೇ ಕುಟುಂಬದವರು. ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಒಂದೇ ಕುಟುಂಬದವರು, ಕೆಸಿಆರ್, ಕೆಕೆಆರ್ ಒಂದೇ ಕುಟುಂಬ, ಶರದ್ ಪವಾರ್, ಸುಪ್ರಿಯಾ ಸುಳೆ ಒಂದೇ ಕುಟುಂಬ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಒಂದೇ ಕುಟುಂಬದವರಾಗಿದ್ದಾರೆ. ಇದು ಇಂಡಿ ಅಲಯನ್ಸ್ ಆಗಿದ್ದು, ಅಧಿಕಾರ ಕುಟುಂಬದವರ ಕೈಯಲ್ಲೇ ಇದೆ. ಹಾಗಾದರೆ ಉಳಿದವರೇನು ಗಂಟೆ ಬಾರಿಸಬೇಕಾ? ಎಂದು ಪ್ರಶ್ನೆ ಮಾಡಿದರು.
ಭ್ರಷ್ಟಾಚಾರ, ಜೈಲು – ಬೇಲ್
ಕಾಂಗ್ರೆಸ್ ಕಾಮನ್‌ವೆಲ್ತ್ ಭ್ರಷ್ಟಾಚಾರ, ಕಲ್ಲಿದ್ದಲು ಭ್ರಷ್ಟಾಚಾರ, 2ಜಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಖಿಲೇಶ್ ಲ್ಯಾಪ್‌ಟಾಪ್ ಭ್ರಷ್ಟಾಚಾರ ಮಾಡಿದ್ದರು. ರಾಹುಲ್, ಸೋನಿಯಾ ಗಾಂಧಿ ಸೇರಿ ಹಲವರು ಬೇಲ್ ಮೇಲೆ ಇದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಇದ್ದಾರೆ. ಕೆಲವರು ಜೈಲಿನಲ್ಲಿ ಇದ್ದರೆ ಮತ್ತೆ ಕೆಲವರು ಬೇಲ್ ಮೇಲೆ ಇದ್ದಾರೆ. ಇದೇ ಇಂಡಿಯಾ ಅಲೆಯನ್ಸ್ ಆಗಿದೆ ಎಂದು ಜೆ.ಪಿ. ನಡ್ಡಾ ಕುಟುಕಿದರು.
ಇದು ವಿಕಸಿತ ಭಾರತ್ ಸಂಕಲ್ಪದ ಚುನಾವಣೆ
ಕರ್ನಾಟಕವು ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ. ಇದರೊಂದಿಗೆ ತಾಂತ್ರಿಕತೆಗೂ ಹೆಸರು ಪಡೆದಿದೆ. ದೇಶಭಕ್ತಿ ಎಂಬುದು ಇಲ್ಲಿನ ಜನರ ಕಣಕಣದಲ್ಲಿಯೂ ಇದೆ. 70ಕ್ಕೂ ಹೆಚ್ಚು ಸಮುದಾಯದವರು ಇಲ್ಲಿಗೆ ಬಂದಿದ್ದೀರಿ. ನೀವೆಲ್ಲ ನಿಮ್ಮ ಅಕ್ಕಪಕ್ಕದವರಿಗೂ ಮತ ಹಾಕುವಂತೆ ಹೇಳಿ. ಇದು ಕೇವಲ ಪ್ರಲ್ಹಾದ್ ಜೋಶಿ ಚುನಾವಣೆ ಅಲ್ಲ. ಇದು ನರೇಂದ್ರ ಮೋದಿಯವರ ವಿಕಸಿತ ಭಾರತ್ ಸಂಕಲ್ಪದ ಚುನಾವಣೆಯಾಗಿದೆ. ಹೇಗೆ ದೇಶವನ್ನು ಅಭಿವೃದ್ಧಿ ಮಾಡಬೇಕೆಂದು ತಿಳಿಯುವ ಚುನಾವಣೆಯಾಗಿದೆ ಎಂದು ಜೆ.ಪಿ. ನಡ್ಡಾ ಹೇಳಿದರು.
ಮೋದಿ ಗ್ಯಾರಂಟಿ ಪೂರ್ಣಗೊಳ್ಳುತ್ತದೆ
ಕಳೆದ ಹತ್ತು ವರ್ಷಗಳಲ್ಲಿ ರಾಜಕೀಯ ನೀತಿ ಬದಲಾಗಿದೆ. ಇದಕ್ಕಿಂದ ಮುಂಚೆ ಏನೂ ಬದಲಾಗಿರಲಿಲ್ಲ. ಎಲ್ಲ ರಾಜಕಾರಣಿಗಳು ಭ್ರಷ್ಟರು ಅನ್ನುತ್ತಿದ್ದರು. ರಾಜಕಾರಣವನ್ನು ನೆಗೆಟಿವ್ ಶೇಡ್‌ನಲ್ಲಿ ನೋಡುತ್ತಿದ್ದರು. ಆದರೆ, ಈಗ ಈ ದೃಷ್ಟಿಕೋನ ಬದಲಾಗಿದೆ. ಮೋದಿಯವರ ಕಾಲದಲ್ಲಿ ಬದಲಾಗುತ್ತದೆ. ಬದಲಾಗುತ್ತಿದೆ ಎಂದು ಜನರೇ ಹೇಳುತ್ತಿದ್ದಾರೆ. ಮೋದಿಯವರ ಗ್ಯಾರಂಟಿ ಪೂರ್ಣಗೊಳ್ಳುತ್ತದೆ ಎನ್ನುವಂತಾಗಿದೆ. ರಾಜಕೀಯ ಎಂಬುದರ ಭಾಷ್ಯ ಬದಲಾಗಿದೆ. ಆಗುವುದಿಲ್ಲ ಎಂಬ ಶಬ್ದವೂ ಬದಲಾಗಿದೆ. ಈ ಮುಂಚೆ ಸಮುದಾಯ, ಜಾತಿಗಳ ನಡುವೆ ಜಗಳಗಳಾಗುತ್ತಿದ್ದವು. ಅವರವರ ನಡುವೆ ಜಗಳ ಹಚ್ಚಿ ಅಧಿಕಾರವನ್ನು ಪಡೆಯಲಾಗುತ್ತಿತ್ತು. ಆದರೆ, ನರೇಂದ್ರ ಮೋದಿಯವರ ಕಾಲದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಸಿಕ್ಕಿದೆ. ಯಾವುದನ್ನು ಕೊಡುತ್ತೇನೆ ಅಂದಿದ್ದರೋ ಅದನ್ನು ಕೊಟ್ಟಿದ್ದಾರೆ ಎಂದು ಜೆ.ಪಿ. ನಡ್ಡಾ ಹೇಳಿದರು.
Live : ಹುಬ್ಬಳ್ಳಿಯಲ್ಲಿ ಸಮುದಾಯಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ https://t.co/wttP9BIgJB
— BJP Karnataka (@BJP4Karnataka) April 21, 2024
ರಾಹುಲ್ ಗಾಂಧಿ ಹೇಳಿದಂತೆ ಚಿಟಿಕೆಯಲ್ಲಿ ಆಗುತ್ತಾ?
ವಿರೋಧ ಪಕ್ಷಗಳ ಕೂಗಾಟ, ಚೀರಾಟ ಹೆಚ್ಚಾಗಿದೆ. ದೇಶವನ್ನು ಹೇಗೆ ಗಟ್ಟಿಗೊಳಿಸಬೇಕು ಅನ್ನೋದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ. ಎಲ್ಲ ಬಗೆಯ ಜನರನ್ನು ಗಟ್ಟಿಗೊಳಿಸಬೇಕು. ಆಗಷ್ಟೇ ದೇಶ ಗಟ್ಟಿಯಾಗುತ್ತದೆ ಎಂಬುದು ಮೋದಿಯವರ ಲೆಕ್ಕಾಚಾರವಾಗಿದೆ. ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. 70 ವರ್ಷಗಳಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ, ರಾಹುಲ್ ಗಾಂಧಿ ಚಿಟಿಕೆ ಹೊಡೆಯುವುದರಲ್ಲೇ ಬಡತನ ನಿರ್ಮೂಲನ ಮಾಡುವುದಾಗಿ ಹೇಳುತ್ತಾರೆ. 70 ವರ್ಷದಲ್ಲಿ ಆಗದ್ದು ಚಿಟಿಕೆ ಹೊಡೆಯೋದೊರೊಳಗೆ ಹೇಗೆ ಆಗುತ್ತದೆ? ರಾಜ್ಯದಲ್ಲಿ 4 ಕೋಟಿ ಜನರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಜೆ.ಪಿ. ನಡ್ಡಾ ತಿಳಿಸಿದರು.
ಇಂದಿರಾ ಆವಾಸ್ ಅಡಿ 2 ಮನೆ ಮಂಜೂರಾಗಿತ್ತು!
ನಾನು 1993ರಲ್ಲಿ ಶಾಸಕನಾಗಿದ್ದೆ. ಆಗ ಅಧಿಕಾರಿಯೊಬ್ಬರು ಬಂದು ನಿಮ್ಮ ಕ್ಷೇತ್ರಕ್ಕೆ 2 ಇಂದಿರಾ ಆವಾಸ್ ಮನೆಗಳು ಮಂಜೂರಾಗಿವೆ ಎಂದು ಹೇಳಿದರು. ಒಂದು ಕ್ಷೇತ್ರಕ್ಕೆ ಎರಡೇ ಮನೆಗಳೇ? ಹಾಗಾದರೆ ನನಗೆ ಬೇಡ ಅವುಗಳನ್ನು ನೀನೇ ಇಟ್ಟುಕೋ ಎಂದು ಹೇಳಿದ್ದೆ. ಆದರೆ, ಇಂದು ಮೋದಿಯವರು ಕರ್ನಾಟಕ ರಾಜ್ಯವೊಂದಕ್ಕೇ 9 ಲಕ್ಷ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವೂ ವಿಭಿನ್ನ ಮತ್ತು ವಿಶಾಲ ಮನೆಗಳಾಗಿವೆ. ಆ ಮನೆಯಲ್ಲಿ ಎಲ್ಲ ವ್ಯವಸ್ಥೆಯೂ ಇದೆ. ಒಂದೊಂದು ವಾರ್ಡ್‌ಗೆ 400ಕ್ಕೂ ಹೆಚ್ಚು ಮನೆಗಳು ಸಿಕ್ಕಿವೆ ಎಂದು ಜೆ.ಪಿ. ನಡ್ಡಾ ವಿವರಿಸಿದರು.
ಮೋದಿ ಬಂದ ಬಳಿಕ ಎಲ್ಲವೂ ಬದಲು
ಭಾರತ ಇದೀಗ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಜಗತ್ತಿನಲ್ಲಿ ಯಾವತ್ತೂ ಇಂಡಿಯಾ ಜತೆ ಪಾಕಿಸ್ತಾನವನ್ನು ಜೋಡಿಸಿಯೇ ಮಾತನಾಡಲಾಗುತ್ತಿತ್ತು. ಆದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಬಳಿಕ ಎಲ್ಲವೂ ಬದಲಾಯಿತು. ಇಂಡಿಯಾ ಒಕ್ಕೂಟವು ಇಂಡಿಯಾಗಿಯೇ ಉಳಿಯಿತು. ಪಾಕಿಸ್ತಾನ ಏನಾಯಿತು ಎಂಬುದು ನಿಮಗೇ ಗೊತ್ತು. ಮುಂಚೆ ಗಡಿಯಲ್ಲಿ ಗುಂಡು ಹಾರಿಸಲು ಅನುಮತಿ ಬೇಕಿತ್ತು. ಆದರೆ, ಇಂದು ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಇದು ಭಾರತದ ಶಕ್ತಿ. ಭ್ರಷ್ಟಾಚಾರಿ ಹಠಾವೋ ಎಂದು ಮೋದಿ ಹೇಳುತ್ತಾರೆ. ಆದರೆ, ಇಂಡಿಯಾ ಘಟಬಂಧನ್ ಭ್ರಷ್ಟಾಚಾರಿಗಳನ್ನು ರಕ್ಷಿಸಿ ಎಂಬುದಾಗಿ ಹೇಳುತ್ತದೆ ಎಂದು ಜೆ.ಪಿ. ನಡ್ಡಾ ತಿಳಿಸಿದರು.
ನಮ್ಮ ಎಲ್ಲ ಯೋಜನೆಗಳೂ ಮುಂದುವರಿಯಲಿವೆ. ನಾವು 3 ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಜಗತ್ತಿನಲ್ಲಿ ಭಾರತ ಎಲ್ಲ ಪೋರಮ್‌ನಲ್ಲಿ ಇದೆ ಎಂದು ಜೆ.ಪಿ. ನಡ್ಡಾ ಹೇಳಿದರು.