ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ‘ಇಂಡಿಯಾ’ ಮೈತ್ರಿಕೂಟ (I.N.D.I.A bloc)ದ ಆಂತರಿಕ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗಪಡಿಸಿದರು. ಮೈತ್ರಿಕೂಟದ ಪಾಲುದಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ʼʼಇಂಡಿಯಾʼ ಬಣಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸೀಟು ದೊರೆಯಲಿದೆ. ನಾಲ್ಕು ಹಂತಗಳ ಮತದಾನದಲ್ಲಿಯೂ ʼಇಂಡಿಯಾʼ ಒಕ್ಕೂಟ ಮುನ್ನಡೆ ಸಾಧಿಸಿದೆʼʼ ಎಂದು ತಿಳಿಸಿದರು.
ಒಬಿಸಿ, ಎಸ್‌ಸಿ / ಎಸ್‌ಟಿ ಸಮುದಾಯಗಳ ಮೀಸಲಾತಿ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮಾತನಾಡಿದ ಖರ್ಗೆ, ʼʼಕೆಲವರು ಮಾತ್ರ ಮೀಸಲಾತಿ ಪಡೆದುಕೊಳ್ಳಬಹುದು. ಆದರೆ ರಾಷ್ಟ್ರದ ಭವಿಷ್ಯಕ್ಕಾಗಿ ಕೆಲಸ ಮಾಡುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿʼʼ ಎಂದು ಹೇಳಿದರು. ʼʼಮೀಸಲಾತಿ ಭಾರತದ ಪ್ರಜಾಪ್ರಭುತ್ವವನ್ನು ಭದ್ರಪಡಿಸುವ ಒಂದು ಭಾಗ. ಕಾಂಗ್ರೆಸ್ ಯಾವಾಗಲೂ ಮೀಸಲಾತಿಯ ಬಗ್ಗೆ ಮಾತನಾಡುತ್ತದೆ. ಆದರೆ ಅದರಿಂದ ನನಗೆ ಪ್ರಯೋಜನವೇನು? ಎಂದು ಅನೇಕರು ಹೇಳುತ್ತಾರೆ. ಮೀಸಲಾತಿ ಪ್ರಯೋಜನಗಳನ್ನು ಕೆಲವರು ಪಡೆಯಬಹುದು, ಆದರೆ ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದರಲ್ಲಿ ವಿಫಲವಾದರೆ ನಾವು ಗುಲಾಮರಾಗಬೇಕಾಗುತ್ತದೆʼʼ ಎಂದು ವಿವರಿಸಿದರು.
चार चरण के मतदान की रिपोर्ट कहती है की INDIA गठबंधन आगे है और भाजपा पीछे है ! pic.twitter.com/iAYCRycw1j
— Mallikarjun Kharge (@kharge) May 15, 2024
“ಈ ಹಿಂದೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. ಜತೆಗೆ ಅನೇಕ ಬಿಜೆಪಿ ನಾಯಕರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆʼʼ ಎಂದ ಖರ್ಗೆ, ʼʼಸಂವಿಧಾನ ಬದಲಾವಣೆ ನಿಜವಾಗಿಯೂ ನಿಮ್ಮ ಉದ್ದೇಶವಲ್ಲದಿದ್ದರೆ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ನೀವು ಏಕೆ ಕ್ರಮ ಕೈಗೊಳ್ಳಬಾರದು?” ಎಂದು ಮೋದಿ ಅವರನ್ನು ಪ್ರಶ್ನಿಸಿದರು. ʼʼನೀವು (ಮೋದಿ) ನಿಮ್ಮ 56 ಇಂಚಿನ ಎದೆಯ ಬಗ್ಗೆ ಪದೇ ಪದೆ ಮಾತನಾಡುತ್ತೀರಿ. ಆದರೆ ಸಂವಿಧಾನದ ವಿರುದ್ಧವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಯಾಕೆ?ʼʼ ಎಂದು ಕೇಳಿದರು.
ಆಂತರಿಕ ಸಮೀಕ್ಷೆಯಲ್ಲಿ ಏನಿದೆ?
ʼʼನಾಲ್ಕು ಹಂತದ ಮತದಾನ ಮುಗಿದಿದೆ. ಜತೆಗೆ ಪಕ್ಷದ ಆಂತರಿಕ ಸಮೀಕ್ಷೆಯ ವರದಿ ನಮ್ಮ ಕೈ ಸೇರಿದೆ. ಇದು ʼಇಂಡಿಯಾʼ ಒಕ್ಕೂಟ ಉತ್ತಮ ಸಾಧನೆ ಮಾಡಲಿದೆ ಎಂದು ಹೇಳಿದೆ. ಜೂನ್ 4ರಂದು ʼಇಂಡಿಯಾʼ ಬಣ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆʼʼ ಎಂದು ಖರ್ಗೆ ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಸಿದ್ಧಾಂತಗಳ ನಡುವಿನ ಕದನ ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷರು, ʼʼಒಂದು ಬಣ ಬಡವರಿಗಾಗಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಬಣ ಧರ್ಮದ ಆಧಾರದಲ್ಲಿ ತಮ್ಮ ಶ್ರೀಮಂತ ಗೆಳೆಯರಿಗಾಗಿ ಕಣ್ಣಕ್ಕಿಳಿದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡಲು ನಾವು ಹೋರಾಟ ನಡೆಸುತ್ತಿದ್ದೇವೆʼʼ ಎಂದು ಹೇಳಿದರು. ಜತೆಗೆ ʼʼಆಡಳಿತ ಪಕ್ಷ (ಬಿಜೆಪಿ) ಅಭ್ಯರ್ಥಿಗಳನ್ನು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬೆದರಿಸುತ್ತಿದೆʼʼ ಎಂದು ಆರೋಪಿಸಿದರು.
ʼʼಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಮತದಾರರನ್ನು ಬೆದರಿಸಲು ಪ್ರಯತ್ನಿಸುತ್ತಿದೆʼʼ ಎಂದು ಖರ್ಗೆ ದೂರಿದರು. ʼʼತಪಾಸಣೆ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಸ್ಲಿಂ ಮಹಿಳೆಯರ ಬುರ್ಕಾ ತೆಗೆದುದನ್ನು ನಾವೆಲ್ಲ ನೋಡಿದ್ದೇವೆʼʼ ಎಂದು ಮಾಧವಿ ಲತಾ ಅವರ ನಡೆಯನ್ನು ಖರ್ಗೆ ಪ್ರಸ್ತಾವಿಸಿದರು.
ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್ ಶಾ ವಾಗ್ದಾಳಿ
ಪ್ರಧಾನಿ ಮಟನ್, ಮಂಗಳಸೂತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ
ʼʼಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಮಟನ್, ಚಿಕನ್ ಮತ್ತು ಮಂಗಳಸೂತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮಣಿಪುರದಲ್ಲಿನ ಸಂಘರ್ಷದ ಬಗ್ಗೆ ತುಟಿ ಬಿಚ್ಚುತ್ತಿಲ್ಲʼʼ ಎಂದು ಖರ್ಗೆ ಟೀಕಿಸಿದರು. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಸುಳ್ಳು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ ಖರ್ಗೆ “ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ನಾವು ಎಕ್ಸ್-ರೇ ಮಾಡುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಎರಡು ಎಮ್ಮೆಗಳಿದ್ದರೆ, ಒಂದನ್ನು ಮುಸ್ಲಿಮರಿಗೆ ನೀಡಬೇಕಾಗುತ್ತದೆ ಎಂದು ಅವರು ಎಲ್ಲೋ ಹೇಳಿದರು. ಪ್ರಧಾನಿ ಇಷ್ಟು ಸುಳ್ಳು ಹೇಳಿದರೆ ನಾವೇನು ಮಾಡಲು ಸಾಧ್ಯ?ʼʼ ಎಂದು ತಿಳಿಸಿದರು.