Site icon Vistara News

Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

Lok Sabha Election 2024 KP Nanjundi resigns from Legislative Council

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ವಿಶ್ವಕರ್ಮ ಸಮುದಾಯದ ನಾಯಕ ಕೆ.ಪಿ‌. ನಂಜುಂಡಿ (KP Nanjundi) ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ (Legislative Council membership) ರಾಜೀನಾಮೆ ನೀಡಿದ್ದಾರೆ. ಇಲ್ಲಿನ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ನಿವಾಸಕ್ಕೆ ಆಗಮಿಸಿ ರಾಜೀನಾಮೆ‌ ಸಲ್ಲಿಸಿದ್ದಾರೆ. ಸ್ವ – ಇಚ್ಛೆಯಿಂದ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಕೆ.ಪಿ. ನಂಜುಂಡಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಣದಲ್ಲಿ ಕೆ.ಪಿ. ನಂಜುಂಡಿ ಗುರುತಿಸಿಕೊಂಡಿದ್ದರು. ಇವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಇದೀಗ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ?

ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಈಚೆಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಮಾತನಾಡಿದ್ದರು. ಬೆಳಗ್ಗಿನ ಉಪಾಹಾರ ಸೇವನೆ ಮಾಡಿದ್ದರು. ಹೀಗಾಗಿ ನಂಜುಂಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಆಗಲೇ ವದಂತಿಗಳು ಹಬ್ಬಿದ್ದವು. ಈಗ ಅವರು ತಮ್ಮ ವಿಧಾನ ಪರಿಷತ್‌ ಅವಧಿ ಇರುವಾಗಲೇ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ ಎಂದು ಹೇಳಲಾಗಿದೆ. ಆದರೆ, ಯಾವಾಗ ಸೇರಲಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಡಿಕೆಶಿ ಜತೆ ಕಾಣಿಸಿಕೊಂಡಿದ್ದ ಸಹ ಶಿಕ್ಷಕ ಅಮಾನತು

ರಾಯಚೂರು: ಚುನಾವಣೆ ನೀತಿ ಸಂಹಿತೆ (Lok Sabha Election 2024) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆ ಸಹ ಶಿಕ್ಷಕ ಕೆ.ರಾಮು ಅಮಾನತುಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಕಾಣಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕೆ.ರಾಮು ಅವರನ್ನು ಅಮಾನತು ಮಾಡಿ ಆದೇಶಿಸಲಾಗಿತ್ತು.

ನಂಜುಂಡಿ ಮನೆಯಲ್ಲಿ ಕಾಣಿಸಿಕೊಂಡಿದ್ದ ಶಿಕ್ಷಕ

ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ಮನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪ್ರತ್ಯಕ್ಷವಾಗಿದ್ದ ಸಹ ಶಿಕ್ಷಕ ಕೆ.ರಾಮು ಅವರು, ಡಿ.ಕೆ. ಶಿವಕುಮಾರ್‌, ಕೆ.ಪಿ. ನಂಜುಂಡಿ ಸೇರಿ ವಿವಿಧ ರಾಜಕೀಯ ನಾಯಕರಿಗೆ ಉಪಾಹಾರ ಬಡಿಸಿದ್ದರು. ಶಿಕ್ಷಕ ಉಪಾಹಾರ ಬಡಿಸುವ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಇಒ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ಅವರು, ತನಿಖೆ ನಂತರ ಸಹ ಶಿಕ್ಷಕ ಕೆ ರಾಮು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Drought In Karnataka : ಭೀಕರ ಬರ; ಆಹಾರ ಸಿಗದೆ ಪ್ಲಾಸ್ಟಿಕ್, ನಟ್ಟು ಬೋಲ್ಟು ತಿನ್ನುತ್ತಿರುವ ಹಸುಗಳು!

ವರದಿ ಪ್ರಸಾರ ಮಾಡಿದ್ದ ವಿಸ್ತಾರ

ಸಹ ಶಿಕ್ಷಕ ರಾಮು ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಹ ಶಿಕ್ಷಕ ರಾಮು ಅವರ ವಿರುದ್ಧ ಬಿಜೆಪಿಯ ವಸಂತಕುಮಾರ್ ಹಾಗೂ ಇತರರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದಾಗ ಅವರಿಗೆ ಶಿಕ್ಷಕ ರಾಮು ಅವರು ಊಟ ಬಡಿಸುತ್ತಿರುವ ಬಗ್ಗೆ ವಿಸ್ತಾರ ವಾಹಿನಿಯಲ್ಲಿ ವರದಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ, ದೂರು ಸಲ್ಲಿಸಿದ್ದರು. ಹೀಗಾಗಿ ಅನುಮತಿ ಪಡೆಯದೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಸಚಿವರ ಹಾಗೂ ರಾಜಕೀಯ ವ್ಯಕ್ತಿಗಳ ಜತೆಯಲ್ಲಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆ.ರಾಮು ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

Exit mobile version