Site icon Vistara News

Lok Sabha Election 2024: ಕಾಂಗ್ರೆಸ್‌ – ಜೆಡಿಎಸ್‌ ಮಧ್ಯೆ ಮದ್ಯ, ಬಾಡೂಟ ಪಾಲಿಟಿಕ್ಸ್;‌ ಏಟು – ಎದುರೇಟು!

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ನಡೆಯುವ ಪ್ರತಿ ಸಭೆ, ಕಾರ್ಯಕ್ರಮಗಳು ಈಗ ಮಹತ್ವ ಪಡೆದುಕೊಂಡಿದೆ. ಇವುಗಳಲ್ಲಿ ಯಾವುದೇ ರೀತಿಯ ರಾಜಕೀಯದ ವಾಸನೆ ಬರುವಂತೆ ಇಲ್ಲ. ಬಂದರೆ ನೀತಿ ಸಂಹಿತೆ ಅಡಿ ಇಲ್ಲವೇ ಅಭ್ಯರ್ಥಿಯ ಖರ್ಚಿನ ಲೆಕ್ಕಕ್ಕೆ ಬರೆದುಕೊಳ್ಳಲಾಗುತ್ತದೆ. ಈಗ ಗುರುವಾರ (ಏಪ್ರಿಲ್‌ 11) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ತಮ್ಮ ಬಿಡದಿ ತೋಟದ ಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದಕ್ಕೆ ಈಗ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಜೆಡಿಎಸ್‌ (JDS Karnataka) ಸಹ ತಿರುಗೇಟು ನೀಡಿದ್ದು, ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ (Congress Karnataka) ಕಾಕದೃಷ್ಟಿ ಬೀರಿದೆ ಎಂದು ಕುಟುಕಿದೆ. ಆದರೆ, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಾಜಕೀಯ ಮುಖಂಡರು ಬಂದರೆ ಎಲ್ಲವನ್ನೂ ಸೀಜ್ ಮಾಡಿ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಕಿಡಿಕಾರಿರುವ ಕಾಂಗ್ರೆಸ್‌, ಸೋಲಿನ ಭೀತಿಯಿಂದ ಹೊಸತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಹಿತಿಯಿದೆ. ಮಾಹಿತಿಗಳಿದ್ದರೂ ಚುನಾವಣಾ ಆಯೋಗದವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.

ಕಾಂಗ್ರೆಸ್‌ ಪೋಸ್ಟ್‌ನಲ್ಲೇನಿದೆ?

“ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಹಿತಿಯಿದೆ. ಮಾಹಿತಿಗಳಿದ್ದರೂ ಚುನಾವಣಾ ಆಯೋಗದವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ?” ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ ಕಾಕದೃಷ್ಟಿ: ಜೆಡಿಎಸ್ ತಿರುಗೇಟು

ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಹಿಂದೂ ಸಂಸ್ಕೃತಿಯ ಮೇಲೆ ತನ್ನ ಕಾಕದೃಷ್ಟಿ ಬೀರಿದೆ ಎಂದು ಜಾತ್ಯತೀತ ಜನತಾದಳ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಜೆಡಿಎಸ್‌, ಯುಗಾದಿ ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಾಂಗ್ರೆಸ್ ಪಕ್ಷ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ಕಾಕದೃಷ್ಟಿ ಬೀರಿದೆ. ಬಾಡೂಟವನ್ನು ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ ಎಂದು ಕಿಡಿಕಾರಿದೆ.

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಆರೋಪಿಸಿದೆ.

ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ

ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ಹೊಂದಿರುವ ಕಾಂಗ್ರೆಸ್ಸಿಗೆ, ಕಾವೇರಿ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಜೆಡಿಎಸ್ ದೂರಿದೆ.

ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ

ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ಟೀಕಿಸುವ ಬರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ ಎಂದು ಪಕ್ಷ ಹೇಳಿದೆ.

ಇದನ್ನೂ ಓದಿ: Fact Check : ಹಿಂದುಗಳ ಮತ ಕಾಂಗ್ರೆಸ್‌ಗೆ ಬೇಡ; ಮುಸ್ಲಿಂ ಮತ ಮಾತ್ರವೇ ಸಾಕೆಂದರೇ ಸಿಎಂ ಸಿದ್ದರಾಮಯ್ಯ?

ಚುನಾವಣಾಧಿಕಾರಿಗಳ ಭೇಟಿ; ರಾಜಕೀಯ ಮುಖಂಡರು ಬಂದರೆ ಸೀಜ್ ಎಚ್ಚರಿಕೆ

ಇನ್ನು ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಗೆ ಚುನಾವಣಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಾಡೂಟದ ಬಗ್ಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಊಟದ ವ್ಯವಸ್ಥೆ, ಚೇರ್, ಪೆಂಡಾಲ್‌ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ಸೇರಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಮಾಡಬಹುದು. ಆದರೆ, ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಒಂದು ವೇಳೆ ರಾಜಕೀಯ ಮುಖಂಡರು ಬಂದರೆ ಎಲ್ಲವನ್ನೂ ಜಪ್ತಿ ಮಾಡಿ ಕೇಸ್ ಹಾಕುತ್ತೇವೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಹೇಳಿಕೆ ನೀಡಿದ್ದು, ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಎಂಸಿಸಿ ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆಯಾದರೆ ಕಾನೂನು ರೀತಿಯ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.

Exit mobile version