ಹೈದರಾಬಾದ್: ಚುನಾವಣಾ ಕಣದಲ್ಲಿ (Lok Sabha Election 2024) ಪ್ರಮುಖ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ʼಮುಸ್ಲಿಮರು ಹೆಚ್ಚಿನ ಮಕ್ಕಳನ್ನು ಹೊಂದಿರುತ್ತಾರೆʼ ಎನ್ನುವ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಹೈದರಾಬಾದ್‌ನ ಎಐಎಂಐಎಂ (AIMIM Hyderabad) ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi), ʼʼಮುಸ್ಲಿಂ ಸಮುದಾಯದ ಪುರುಷರು ಕಾಂಡೋಮ್ ಅನ್ನು ಹೆಚ್ಚು ಬಳಸುತ್ತಾರೆ ಮತ್ತು ಮಕ್ಕಳ ಅಂತರದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆʼʼ ಎಂದು ಹೇಳಿದ್ದಾರೆ.
ʼʼಮುಸ್ಲಿಮರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ ಎಂದು ಮೋದಿ ಹೇಳುತ್ತಿದ್ದಾರೆ. ನರೇಂದ್ರ ಮೋದಿ ಅವರಿಗೆ ಆರು ಜನ ಸಹೋದರರಿದ್ದಾರೆ. ಅಮಿತ್ ಶಾ ಅವರಿಗೆ ಆರು ಸಹೋದರಿಯರು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಸುಮಾರು 10-12 ಸಹೋದರಿಯರು ಮತ್ತು ಸಹೋದರರು ಇದ್ದಾರೆ” ಎಂದು ಒವೈಸಿ ಟೀಕಿಸಿದ್ದಾರೆ.
“ಮುಸ್ಲಿಮರ ಫಲವತ್ತತೆ ದರ ಕುಸಿಯುತ್ತಿದೆ. ಆದರೆ ನರೇಂದ್ರ ಮೋದಿ ಅವರು ನಮ್ಮ ಹಿಂದೂ ಸಹೋದರರಲ್ಲಿ ಭಯವನ್ನು ಸೃಷ್ಟಿಸಲು ದ್ವೇಷ ಹರಡುತ್ತಿದ್ದಾರೆ. ಈ ದೇಶದಲ್ಲಿ ಮುಸ್ಲಿಮರು ಎಂದಿಗೂ ಬಹುಸಂಖ್ಯಾತರಾಗುವುದಿಲ್ಲ. ನರೇಂದ್ರ ಮೋದಿ, ಮುಸ್ಲಿಮರ ಬಗೆಗಿನ ಈ ಭಯವನ್ನು ನೀವು ಎಷ್ಟು ದಿನ ಮುಂದುವರಿಸುತ್ತೀರಿ?ʼʼ ಎಂದು ಚುನಾವಣಾ ರ‍್ಯಾಲಿಯಲ್ಲಿ ಓವೈಸಿ ಪ್ರಶ್ನಿಸಿದ್ದಾರೆ.
ʼನುಸುಳುಕೋರರುʼ ಎಂಬ ಪದ ಬಳಕೆಗೆ ಅವರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು 17 ಕೋಟಿ ಭಾರತೀಯ ಮುಸ್ಲಿಮರನ್ನು ಗುಸ್ಪೆಟಿಯಾ (ಒಳನುಸುಳುಕೋರರು) ಎಂದು ಕರೆದಿದ್ದಾರೆ. ನೀವು ಗುಸ್ಪೆಟಿಯಾ ಆಗಿದ್ದೀರಾ?” ಎಂದು ಪ್ರಶ್ನಿಸಿದ ಅವರು, “ದಲಿತರು ಮತ್ತು ಮುಸ್ಲಿಮರ ವಿರುದ್ಧ ಪ್ರಧಾನಿ ಮೋದಿ ದ್ವೇಷ ಹರಡುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಮಾಧವಿ ಲತಾ ವಿರುದ್ಧವೂ ವಾಗ್ದಾಳಿ
ಇದಕ್ಕೂ ಮುನ್ನ ಹೈದರಾಬಾದ್ ಬಿಜೆಪಿ ಲೋಕಸಭಾ ಅಭ್ಯರ್ಥಿ ಮಾಧವಿ ಲತಾ ವಿರುದ್ಧವೂ ಒವೈಸಿ ವಾಗ್ದಾಳಿ ನಡೆಸಿದ್ದಾರೆ. ʼʼಹೈದರಾಬಾದ್‌ನ ಓಲ್ಡ್ ಸಿಟಿಯ ಮಸೀದಿಯೊಂದರ ಮೇಲೆ ಬಾಣ ಹೂಡುವಂತೆ ಮಾಧವಿ ಲತಾ ಅವರು ಸನ್ನೆ ಮಾಡಿದ್ದಾರೆ. ಬಿಜೆಪಿಯ ಮೆರವಣಿಗೆಯ ವಿಡಿಯೊದಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ. ಇದು ಮಸೀದಿಯ ಮೇಲೆ ಹೂಡಿದ ಬಾಣವಲ್ಲ, ಬದಲಾಗಿ ನಗರದಲ್ಲಿ ಶಾಂತಿಯನ್ನು ಹಾಳು ಮಾಡುವ ಉದ್ದೇಶಿತ ಪ್ರಯತ್ನ” ಎಂದು ಅವರು ಟೀಕಿಸಿದ್ದಾರೆ.
भारत देश के प्रधानमंत्री बोल रहे हैं…!#Rajasthan #LokSabhaElections2024 pic.twitter.com/wWj2s1OYip
— Avdhesh Pareek (@Zinda_Avdhesh) April 21, 2024
ಮೋದಿ ಹೇಳಿದ್ದೇನು?
ರಾಜಸ್ಥಾನದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ ʼʼದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ಹೇಳಿದೆ. ಯಾರಿಗೆ? ಈ ಹಿಂದೆ, ಅವರ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಇದರರ್ಥ ಅವರು ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಒಳನುಸುಳುವವರಿಗೆ ವಿತರಿಸುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಒಪ್ಪುತ್ತೀರಾ?” ಎಂದು ಮೋದಿ ಕೇಳಿದ್ದರು. ಜತೆಗೆ ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕು ಇದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನೂ ಅವರು ಉಲ್ಲೇಖಿಸಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ