Site icon Vistara News

Lok Sabha Election 2024: ರೆಸಾರ್ಟ್‌ನಲ್ಲೇ ಆಪರೇಷನ್‌ ಹಸ್ತ ಶುರು ಮಾಡಿದ ಸಿಎಂ; ಬಿಎಸ್‌ವೈ ಆಪ್ತರೇ ಟಾರ್ಗೆಟ್‌!

Lok Sabha Election 2024 Operation Hasta start by Cm Siddaramaiah at resort

ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಆಯಾ ರಾಜಕೀಯ ಪಕ್ಷಗಳು ಕಾರ್ಯತಂತ್ರವನ್ನು ಹೆಣೆಯುವಲ್ಲಿ ನಿರತವಾಗಿವೆ. ಈಗಾಗಲೇ ಕರ್ನಾಟಕದ ಮಟ್ಟಿಗೆ ಬಹುತೇಕ ಅಭ್ಯರ್ಥಿಗಳ ಘೋಷಣೆಯಾಗಿದೆ. ಪ್ರಚಾರ ಕಾರ್ಯಗಳೂ ಶುರುವಾಗಿವೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮದೇ ಲೆಕ್ಕಾಚಾರಗಳನ್ನು ಮತ್ತು ರಾಜಕೀಯ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ತವರು ಜಿಲ್ಲೆಯ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರವನ್ನು (Mysuru Kodagu Lok Sabha constituency) ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅವರು, ಪಕ್ಕದ ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha constituency) ಮೇಲೆಯೂ ಕಣ್ಣಿಟ್ಟಿದ್ದಾರೆ. ಇದರ ಭಾಗವಾಗಿ ಈ ರೆಸಾರ್ಟ್‌ನಲ್ಲಿ ಕುಳಿತುಕೊಂಡೇ ಆಪರೇಷನ್ ಹಸ್ತ (Operation Hasta) ಶುರು ಮಾಡಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಆ ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದೆ. ಇದು ಸಿಎಂ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಭಾಗವೂ ಆಗಿದೆ. ಅಲ್ಲದೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದ್ದು, ಅದರ ಲಾಭವನ್ನು ಪಡೆಯಬೇಕು ಎಂದು ಕಾರ್ಯತಂತ್ರವನ್ನು ಹೆಣೆಯಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ಈ ಭಾಗದಲ್ಲಿ ಕೈಪಡೆ ಗೆಲ್ಲಬೇಕೆಂದರೆ ಎಲ್ಲ ಸಮುದಾಯದವರು ಮತ ಬೇಕು. ಹಾಗಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ ಬಂದಿದ್ದಾರೆ. ಈ ನಿಟ್ಟಿನಲ್ಲೇ ಈಗ ಆಪರೇಷನ್‌ ಹಸ್ತಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: Lok Sabha Election 2024: ಯದುವೀರ್‌ ರೇಡಿಯೋ ಕಾರ್ಯಕ್ರಮ ʼರಾಜರ ಕತೆಗಳುʼ ನಿಲ್ಲಿಸ್ತಾರಾ? ಚುನಾವಣಾ ಆಯೋಗದ ಮುಂದಿದೆ ದೂರು

ಬಿ.ಎಸ್‌. ಯಡಿಯೂರಪ್ಪ ಆಪ್ತರೇ ಟಾರ್ಗೆಟ್?

‌ಈಗ ಆಪರೇಷನ್‌ ಹಸ್ತ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಆಪ್ತರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಆಪ್ತರಿಗೆ ಒಬ್ಬೊಬ್ಬರಾದ ಮೇಲೆ ಒಬ್ಬೊಬ್ಬರಂತೆ ಗಾಳ ಹಾಕುತ್ತಿದ್ದಾರೆ. ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬೇಟೆ ನಂತರ ಈಗ ಮತ್ತೊಬ್ಬ ಆಪ್ತನನ್ನು ಸೆಳೆದಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಹಾಗೂ ‌ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅತ್ಯಾಪ್ತರಾಗಿರುವ, ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಶ ಕಂಡಿದ್ದಾರೆ.

ಸದಾನಂದ ಸೇರ್ಪಡೆ ಯಾಕೆ?

ಸದಾ ಬಿಎಸ್‌ವೈ ಮತ್ತು ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತಿದ್ದ ಸದಾನಂದ ಅವರನ್ನು ಟಾರ್ಗೆಟ್‌ ಮಾಡಲು ಕಾರಣವೂ ಇಲ್ಲವೆಂದೆಲ್ಲ. ಸದಾನಂದ ಅವರು ವೀರಶೈವ ಸಮುದಾಯದ ಮುಖಂಡರಾಗಿದ್ದಾರೆ. ಅಲ್ಲದೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಮತಗಳು ಹೆಚ್ಚಿವೆ. ಹೀಗಾಗಿ ವೀರಶೈವರ ಮತಗಳನ್ನು ಕ್ರೋಡೀಕರಣ ಮಾಡುವ ಪ್ಲ್ಯಾನ್‌ ಅನ್ನು ಸಿಎಂ ಮಾಡಿದ್ದಾರೆ.

ಯಾವೆಲ್ಲ ನಾಯಕರಿಗೆ ಗಾಳ?

  1. ಮೈಸೂರು ಚಾ.ನಗರ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸದಾನಂದ (ಲಿಂಗಾಯತ)
  2. ಮೈಮುಲ್ ನಿರ್ದೇಶಕ ಓಂಪ್ರಕಾಶ್ (ಲಿಂಗಾಯತ)
  3. ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ (ಬ್ರಾಹ್ಮಣ)
  4. ಮಾಜಿ ಮೇಯರ್ ಬಿ.ಎಲ್. ಭೈರಪ್ಪ (ಕುರುಬ)
  5. ಮಾಜಿ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ (ಲಿಂಗಾಯತ)

ಇದನ್ನೂ ಓದಿ: Lok Sabha Election 2024: ಮೋದಿ ಗೆಲುವಿಗಾಗಿ ಈ 4 ವರ್ಗಗಳನ್ನು ಟಾರ್ಗೆಟ್‌ ಮಾಡಿದ ಬಿಜೆಪಿ

ಮೈಸೂರಲ್ಲಿ ಆಪರೇಷನ್‌ ಹಸ್ತ ಶುರು ಮಾಡಿದ ಸಿಎಂ;

ಈಗ ಕಾಂಗ್ರೆಸ್‌ ಸೇರುತ್ತಿರುವ ನಾಯಕರಲ್ಲಿ ಮೂವರು ಬಿಜೆಪಿ, ಓರ್ವ ಜೆಡಿಎಸ್ ಹಾಗೂ ಮತ್ತೊಬ್ಬರು ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಮಾಜಿ ಪಾಲಿಕೆ ಸದಸ್ಯರಾಗಿದ್ದಾರೆ. ಈ ಎಲ್ಲ ನಾಯಕರು ಒಟ್ಟಾದರೆ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಅವರು ಆಪರೇಷನ್‌ ಹಸ್ತವನ್ನು ರೆಸಾರ್ಟ್‌ನಲ್ಲಿದ್ದುಕೊಂಡೇ ಶುರು ಮಾಡಿದ್ದಾರೆ.

Exit mobile version