ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024)ಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ (Congress)ಗೆ ಮತ್ತೊಂದು ಹೊಡೆತ ಬಿದ್ದಿದೆ. ನಿನ್ನೆ (ಮಾರ್ಚ್ 13) ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್ (Ajay Kapoor) ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕೈ ಪಡೆಗೆ ಶಾಕ್ ಕೊಟ್ಟಿದ್ದರು. ಇಂದು (ಗುರುವಾರ) ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿ, ಪಟಿಯಾಲ ಸಂಸದೆ ಪ್ರಣೀತ್ ಕೌರ್ (Preneet Kaur) ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ 2023ರ ಫೆಬ್ರವರಿಯಲ್ಲಿ ಪ್ರಣೀತ್ ಕೌರ್ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು. ಲೋಕಸಭೆ ಸದಸ್ಯತ್ವ ಕಳೆದುಕೊಳ್ಳಲು ಇಷ್ಟವಿಲ್ಲದ ಕಾರಣ ಅಂದು ಪ್ರಣೀತ್ ಕೌರ್ ಪಕ್ಷಕ್ಕೆ ರಾಜೀನಾಮೆ ನೀಡಿರಲಿಲ್ಲ. ಬಹಳ ಹಿಂದೆಯೇ ಅವರು ಬಿಜೆಪಿ ಸೇರುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದವು. ಬಿಜೆಪಿಯ ಹಿರಿಯ ಮುಖಂಡರು ಪ್ರಣೀತ್ ಕೌರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಈ ವೇಳೆ ಹಿಂದೆ ಕಾಂಗ್ರೆಸ್‌ನಲ್ಲಿದ್ದ, ಪ್ರಸ್ತುತ ಬಿಜೆಪಿ ಪಂಜಾಬ್ ಘಟಕದ ಮುಖ್ಯಸ್ಥ ಸುನಿಲ್ ಜಖರ್ ಮತ್ತಿತರರು ಹಾಜರಿದ್ದರು.
#WATCH | Preneet Kaur, suspended Congress MP and wife of former Punjab CM Amarinder Singh, joins BJP in Delhi, today pic.twitter.com/YziHMsHDez
— ANI (@ANI) March 14, 2024
ನಿರಂತರ ಸೇವೆ
ಪ್ರಣೀತ್ ಕೌರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ತಮ್ಮ ಕ್ಷೇತ್ರ, ರಾಜ್ಯ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ʼʼನಾನು ಕಳೆದು ಹೋದ ದಿನಗಳ ಬಗ್ಗೆ ಚಿಂತಿಸುವುದಿಲ್ಲ. ಕಾಂಗ್ರೆಸ್‌ನಲ್ಲಿ ನನ್ನ ಇನ್ನಿಂಗ್ಸ್ ಚೆನ್ನಾಗಿತ್ತು. ಬಿಜೆಪಿಯಲ್ಲಿ ಇನ್ನೂ ಉತ್ತಮವಾಗಿರಲಿದೆ ಎನ್ನುವ ವಿಶ್ವಾಸವಿದೆ. ನಾನು ಸ್ಪರ್ಧಿಸಬೇಕೆ ಎನ್ನುವುದನ್ನು ಪಕ್ಷ ನಿರ್ಧರಿಸಲಿದೆʼʼ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಣೀತ್ ಕೌರ್ ಅವರು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸುವ ಪರವಾಗಿ ಮತ ಚಲಾಯಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಬಳಿಕ ಮಹುವಾ ಮೊಯಿತ್ರಾ ಅವರ ಸದನದ ಸದಸ್ಯತ್ವವನ್ನು ರದ್ದು ಪಡಿಸಲಾಗಿತ್ತು. ಪ್ರಣೀತ್ ಕೌರ್ ಪಂಜಾಬ್‌ನ ಪಟಿಯಾಲಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಸಂಸದರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪಟಿಯಾಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ನಿರ್ಗಮನದಿಂದ ಕಾಂಗ್ರೆಸ್‌ಗೆ ಬಹು ದೊಡ್ಡ ಹೊಡೆತ ಬೀಳಲಿದೆ ಮತ್ತು ಬಿಜೆಪಿಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್
ಪ್ರಣೀತ್ ಕೌರ್ ಅವರ ಪತಿ ಅಮರಿಂದರ್ ಸಿಂಗ್ ಕಾಂಗ್ರೆಸ್‌ನಿಂದ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು. 2021ರಲ್ಲಿ ಅವರು ಕಾಂಗ್ರೆಸ್‌ನಿಂದ ಹೊರ ಬಂದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ (Punjab Lok Congress) ಅನ್ನು ಸ್ಥಾಪಿಸಿದ್ದರು. ಬಳಿಕ 2022ರ ಸೆಪ್ಟೆಂಬರ್ ಅದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಪ್ರಣೀತ್ ಕೌರ್ – ಅಮರಿಂದರ್ ಸಿಂಗ್ ದಂಪತಿಯ ಪುತ್ರಿ ಜೈ ಇಂದರ್ ಕೌರ್ ಕೂಡ ಬಿಜೆಪಿಯಲ್ಲಿದ್ದಾರೆ. ಈ ಬಾರಿ ಜೈ ಇಂದರ್ ಅವರನ್ನು ಬಿಜೆಪಿ ಪಟಿಯಾಲದಿಂದ ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ