Site icon Vistara News

‌Lok Sabha Election 2024: ಪ್ರತಾಪ್‌ ಸಿಂಹ, ಕರಡಿ, ಡಿವಿಎಸ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್‌? ಏನಿದು ಡಿಕೆಶಿ ಪ್ಲ್ಯಾನ್?

Lok Sabha Election 2024 Pratap Simha sanganna Karadi DV Sadananda Gowda to get Congress ticket and congress Flags in background

ಬೆಂಗಳೂರು: ಲೋಕಸಭಾ ಚುನಾವಣೆ (‌Lok Sabha Election 2024) ಸಮೀಪಕ್ಕೆ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ತಂತ್ರಗಾರಿಕೆಯೂ ಹೆಚ್ಚಾಗಿದೆ. ಈಗಾಗಲೇ ಬಿಜೆಪಿಯಿಂದ ರಾಜ್ಯದ 20 ಕ್ಷೇತ್ರಗಳಿಗೆ ಟಿಕೆಟ್‌ ಅನ್ನು ಘೋಷಣೆ ಮಾಡಲಾಗಿದೆ. ಇವರಲ್ಲಿ ಹಾಲಿ ಎಂಟು ಜನ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಹೀಗಾಗಿ ಕಾಂಗ್ರೆಸ್‌ (Congress Karnataka) ತನ್ನ ವ್ಯೂಹತಂತ್ರವನ್ನೇ ಬದಲಿಸಿಕೊಂಡಿದೆ. ಇವರಲ್ಲಿ ಕೆಲವು ಹಾಲಿಗಳಿಗೆ ಮಣೆ ಹಾಕಲು ಮುಂದಾಗಿದೆ ಎನ್ನಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ (Bangalore North Lok Sabha constituency,), ಮೈಸೂರು ಲೋಕಸಭಾ ಕ್ಷೇತ್ರ (Mysuru Lok Sabha constituency) ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಗಳ (Koppal Lok Sabha constituency) ಹಾಲಿ ಸಂಸದರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.

ವಿಧಾನಸಭೆ ಮಾದರಿಯಲ್ಲೇ ಲೋಕಸಭೆಗೂ ಕಾಂಗ್ರೆಸ್‌ ತನ್ನ ಫಾರ್ಮಾಲಾವನ್ನು ಅಪ್ಲೈ ಮಾಡಲು ಮುಂದಾಗಿದೆ. ಲೋಕಸಭೆಯಲ್ಲಿ ಗೆಲವೊಂದೇ ಮಾನದಂಡ ಎಂಬ ಫಾರ್ಮಲಾವನ್ನು ಅಳವಡಿಸಿಕೊಳ್ಳಲು ಪ್ಲ್ಯಾನ್‌ ಮಾಡಿಕೊಂಡಿರುವ ಕೈ ನಾಯಕರು, ಈಗ ಬಿಜೆಪಿಯಲ್ಲಿ ಯಾರು ಯಾರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಡಸಾಲೆಯಲ್ಲಿ ಹಾಲಿ ಸಂಸದರನ್ನು ಸೆಳೆಯುವ ಚರ್ಚೆ ತುಸು ಜೋರಾಗಿಯೇ ಕೇಳಿಬರುತ್ತಿದೆ.

ಇದಕ್ಕೆ ಪೂರಕವೆಂಬಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಸುಳಿವು ನೀಡಿದ್ದಾರೆ. ಬಿಜೆಪಿಯ ಮೂರು ಜನ ಹಾಲಿ‌ ಸಂಸದರು ನನ್ನ ಸಂಪರ್ಕದಲ್ಲಿ ಇದ್ದಾರೆ‌. ಆದರೆ, ನಾನು ಅವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಡಿ.ವಿ. ಸದಾನಂದಗೌಡ, ಪ್ರತಾಪ್‌ ಸಿಂಹ ಹಾಗೂ ಕರಡಿ‌ ಸಂಗಣ್ಣ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲಾಗುತ್ತದೆಯೇ? ಅವರೇ ಕೈ ಪಕ್ಷಕ್ಕೆ ಅಭ್ಯರ್ಥಿಗಳಾಗಿ ಬಿಜೆಪಿ ಸೆಡ್ಡು ಹೊಡೆಯಲು ಹೊರಡುತ್ತಾರೆಯೇ ಎಂಬ ಪ್ರಶ್ನೆಗಳು ಈಗ ಮೂಡಿವೆ.

ಕಾಂಗ್ರೆಸ್‌ಗೆ ಬೆಂಗಳೂರು ಉತ್ತರ ಕ್ಷೇತ್ರ ಹೇಗಿದೆ?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಕೊರತೆ ಇದೆ. ಇಲ್ಲಿ ಒಕ್ಕಲಿಗ ನಾಯಕರಾಗಿರುವ ಡಿ.ವಿ. ಸದಾನಂದ ಗೌಡ ಅವರಿಗೆ ಒಳ್ಳೆಯ ಇಮೇಜ್‌ ಇತ್ತು. ಅವರು ಸಾಕಷ್ಟು ಅಭಿವೃದ್ಧಿ ಕಾರ್ಯವನ್ನೂ ಇಲ್ಲಿ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಈ ಬಾರಿ ಅವರಿಗೆ ಟಿಕೆಟ್‌ ನೀಡಿಲ್ಲ. ಸದಾನಂದ ಗೌಡರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಚರ್ಚೆ ಬಹಳ ಹಿಂದಿನಿಂದಲೇ ಬರುತ್ತಿದ್ದರಿಂದ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಸದಾನಂದ ಗೌಡರ ಜತೆಗೆ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.‌ ಆದರೆ, ಆಗ ಮಾತುಕತೆ ಸಫಲತೆ ನೀಡಿರಲಿಲ್ಲ. ಇದೀಗ ಟಿಕೆಟ್ ಮಿಸ್ ಆಗಿದೆ. ಹಾಗಾಗಿ ಸದಾನಂದಗೌಡರನ್ನು ಪಕ್ಷಕ್ಕೆ ಕರೆತರುವ ಕಾರ್ಯಕ್ಕೆ ಮತ್ತೆ ಚಾಲನೆ ಸಿಗಲಿದೆ ಎನ್ನಲಾಗಿದೆ.

ಮೈಸೂರು ಲೋಕಸಭಾ ಕ್ಷೇತ್ರಕ್ಕೂ ಕಾಂಗ್ರೆಸ್‌ಗಿಲ್ಲ ಪ್ರಬಲ ಅಭ್ಯರ್ಥಿ

ಇನ್ನು ಮೈಸೂರು ಲೋಕಸಭಾ ಕ್ಷೇತ್ರವನ್ನು ನೋಡುವುದಾದರೂ ಇಲ್ಲ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಇಲ್ಲ. ಹೀಗಾಗಿ ಪ್ರತಾಪ್‌ ಸಿಂಹ 2 ಬಾರಿ ನಿರಾಯಾಸವಾಗಿ ಗೆದ್ದುಕೊಂಡು ಬಂದಿದ್ದರು. ಅಲ್ಲದೆ, ಒಕ್ಕಲಿಗ ಪ್ರಾಬಲ್ಯವನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ಗೆ ಪ್ರತಾಪ್‌ ಸಿಂಹ ಅಭ್ಯರ್ಥಿಯಾದರೆ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಸಮುದಾಯದ ಯುವ ಮುಖಂಡನನ್ನು ಸೆಳೆದರೆ ಬೇರೆ ಕ್ಷೇತ್ರಗಳಿಗೂ ಸಹಕಾರಿಯಾಗಲಿದೆ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು. ಕೊನೇ ಘಳಿಗೆಯಲ್ಲಿ ಪ್ರತಾಪ್‌ ಸಿಂಹ ಕಾಂಗ್ರೆಸ್ ಅಭ್ಯರ್ಥಿ ಆಗಬಹುದು ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ: Lok Sabha Election 2024: ದೇವೇಗೌಡರ ಪಾರ್ಟಿ ಸರಿ ಇಲ್ಲವೆಂದು ತೀರ್ಮಾನಿಸಿದ ಬುದ್ಧಿವಂತ ಅಳಿಯ: ಡಿ.ಕೆ. ಸುರೇಶ್

ಕೊಪ್ಪಳ ಲೋಕಸಭೆಯಲ್ಲಿ ಕೈ ಜತೆ ಕರಡಿ ಕುಣಿತ?

ಹಾಲಿ ಸಂಸದ ಕರಡಿ ಸಂಗಣ್ಣಗೆ ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆಗಿದೆ. ಅವರ ಮೇಲೆ ಸಾಕಷ್ಟು ಅಸಮಾಧಾನಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ ಸಂಗಣ್ಣ ಕರಡಿ ಮುನಿಸಿಕೊಂಡಿದ್ದಾರೆ. ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿವೆ. ಹೀಗಾಗಿ ಕರಡಿ ಸಂಗಣ್ಣ ಪಕ್ಷಕ್ಕೆ ಬರುತ್ತಾರೆ ಎಂದಾದರೆ ನಮಗೆ ಓಕೆ ಎಂದು ಕೊಪ್ಪಳ ಜಿಲ್ಲೆಯ ಕೆಲ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಅವರನ್ನು ಸೆಳೆಯಲು ಚರ್ಚೆಗಳು ನಡೆಯುತ್ತಿವೆ.

Exit mobile version