Site icon Vistara News

Lok Sabha Election 2024: ಹಾಸನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೈ ಎಂದ ಪ್ರೀತಂ ಗೌಡ ಅತ್ಯಾಪ್ತರು; ಪ್ರಜ್ವಲ್‌ ರೇವಣ್ಣಗೆ ಶಾಕ್!

Lok Sabha Election 2024 Preetham Gowda announces support for Congress candidate Prajwal Revanna shocked

ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಕಾವು ದಿನೇ ದಿನೆ ಏರುತ್ತಲೇ ಇದೆ. ರಾಜಕೀಯ ಪಕ್ಷಗಳು ಮತಬೇಟೆಗೆ ಇಳಿದಿವೆ. ಆಯಾ ಪಕ್ಷಗಳೂ ಅವುಗಳದ್ದೇ ಆದ ರೀತಿಯಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿವೆ. ಇನ್ನು ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿರುವುದನ್ನು ಕೆಲವು ನಾಯಕರಿಗೆ ಅರಗಿಸಿಕೊಳ್ಳಲು ಸ್ಪಲ್ಪ ಕಷ್ಟವಾಗುತ್ತಿದೆ. ಆಗಾಗ ತಮ್ಮ ಮುನಿಸನ್ನು ಹೊರಗೆ ಹಾಕುತ್ತಲೇ ಬರುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ (Hassan Lok Sabha constituency) ಸಹ ಇದಕ್ಕೆ ಹೊರತಾಗಿಲ್ಲ. ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಅವರು ಹಾಸನದಲ್ಲಿ ದಳಪತಿಗಳನ್ನು ಎದುರು ಹಾಕಿಕೊಂಡೇ ರಾಜಕಾರಣ ಮಾಡಿದವರು. ಈಗ ಅವರೊಂದಿಗೆ ದೋಸ್ತಿ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ಈಗಾಗಲೇ ಅವರಿಗೆ ಈ ಚುನಾವಣೆ ಮುಗಿಯುವವರೆಗೆ ಹಾಸನ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಂತೆ ವರಿಷ್ಠರು ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ. ಕೊಟ್ಟಿರುವ ಬೇರೆ ಜಿಲ್ಲೆಗಳ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಂತೆ ಸೂಚಿಸಿದ್ದಾರೆನ್ನಲಾಗಿದೆ. ಈ ನಡುವೆ ಪ್ರೀತಂ ಗೌಡ ಅತ್ಯಾಪ್ತರು ಬಿಜೆಪಿ – ಜೆಡಿಎಸ್‌ ನಾಯಕರಿಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿ ಹಲವರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲವನ್ನು ಘೋಷಿಸಲಾಗಿದೆ. ಇದು ಬಿಜೆಪಿಗೆ ಇರಿಸುಮುರಿಸು ತಂದಿದ್ದರೆ, ಜೆಡಿಎಸ್‌ ನಾಯಕರಿಗೆ ದಿಗಿಲುಬಿಡಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ (Hassan Congress candidate Shreyas Patel) ಅವರನ್ನು ಭೇಟಿ ಮಾಡಿರುವ ಪ್ರೀತಂಗೌಡ ಅತ್ಯಾಪ್ತರು ಈ ಚುನಾವಣೆಯಲ್ಲಿ ನಮ್ಮ ಬೆಂಬಲ ನಿಮಗೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಯಾವುದೇ ಸೂಚನೆ ನೀಡದ ಪ್ರೀತಂಗೌಡ

ಈಗಾಗಲೇ ಪ್ರೀತಂ ಗೌಡ ಅವರು ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ (Prajwal Revanna) ವಿರುದ್ಧ ಆಗಾಗ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್‌ (Radha Mohan Agarwal) ಪ್ರಯತ್ನ ಪಟ್ಟರಾದರೂ ಪ್ರೀತಂ ಇದಕ್ಕೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಸಂಧಾನ ಮಾತುಕತೆ ಅಲ್ಲಿಗೇ ಮುರಿದುಬಿದ್ದಿತ್ತು. ಇನ್ನು ಪ್ರೀತಂಗೌಡ ಸಹ ಯಾರನ್ನು ಬೆಂಬಲಿಸಬೇಕು ಎಂದು ತಮ್ಮ ಬೆಂಬಲಿಗರಿಗೆ ಯಾವುದೇ ರೀತಿಯ ಸೂಚನೆಯನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರೇ ನಿರ್ಣಯಕ್ಕೆ ಬಂದಿದ್ದು, ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಎದುರು ಸ್ಪರ್ಧೆ ಮಾಡಿರುವ ಶ್ರೇಯಸ್‌ ಪಟೇಲ್‌ಗೆ ಬೆಂಬಲವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: Yathindra: ವರುಣ ಕ್ಷೇತ್ರದಲ್ಲೇ ಸಿಎಂ ಪುತ್ರ ಯತೀಂದ್ರರನ್ನು ಓಡಿಸಿದ ರೈತರು; ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಪ್ರಚಾರ ಕಾರ್ಯವೂ ಶುರು

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರೀತಂಗೌಡ ಬೆಂಬಲಿಗರು ತಿರುಗಿಬಿದ್ದಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್‌ ಪಟೇಲ್ ಅವರಿಗೆ ಮತವನ್ನು ಹಾಕಿ ಎಂದು ಬಹಿರಂಗವಾಗಿಯೇ ಪ್ರಚಾರಕ್ಕೆ ಇಳಿದಿದ್ದಾರೆ. ಇದನ್ನು ಈಗ ಬಿಜೆಪಿ ಯಾವ ರೀತಿ ಹತೋಟಿಗೆ ತರಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಪ್ರೀತಂ ಗೌಡ, ಪ್ರತಾಪ್‌ ಸಿಂಹರಿಗೆ ಹಾಸನ- ಮೈಸೂರು ಪ್ರವೇಶಿಸದಂತೆ ಬಿಜೆಪಿ ಕಟ್ಟಪ್ಪಣೆ!

ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಾಜ್ಯದ ಇತರ ಕಡೆ ತೆರಳುವಂತೆ, ತಮ್ಮ ಕರ್ಮಭೂಮಿಗಳನ್ನು ತೊರೆಯುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ (Pratap Simha) ಹಾಗೂ ಹಾಸನದ ಬಿಜೆಪಿ ನಾಯಕ ಪ್ರೀತಂ ಗೌಡ (Preetham J Gowda) ಅವರಿಗೆ ಬಿಜೆಪಿ ಹೈಕಮಾಂಡ್‌ ಕಟ್ಟಪ್ಪಣೆ ಮಾಡಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಪ್ರತಾಪ್ ಸಿಂಹ ಮತ್ತು ಪ್ರೀತಂ ಗೌಡ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಬಾರಿ ಲೋಕಸಭೆಗೆ (Lok Sabha Election 2024) ಅಭ್ಯರ್ಥಿಯಾಗಿ ಟಿಕೆಟ್‌ ಸಿಗುವ ಭರವಸೆಯಲ್ಲಿದ್ದರು. ಆದರೆ ಇಬ್ಬರಿಗೂ ದೊರೆತಿಲ್ಲ. ಇಬ್ಬರೂ ಆರಂಭದಲ್ಲಿ ಈ ಬಗ್ಗೆ ತಮ್ಮ ಅಸಮಾಧಾನವನ್ನು ನೇರವಾಗಿ, ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಬಳಿಕ ಅನಿವಾರ್ಯವಾಗಿ ಪ್ರಚಾರ ಕಾರ್ಯದಲ್ಲಿ ಅರೆಬರೆ ತೊಡಗಿಸಿಕೊಂಡಿದ್ದರು.

ಹೀಗಾಗಿ ಇವರಿಗೆ ಇಲ್ಲಿ ಪ್ರಭಾವ ಇದ್ದರೂ ಪುರಪ್ರವೇಶ ಮಾಡದಂತೆ ಸೂಚನೆ ನೀಡಲಾಗಿದೆ. ತಮ್ಮ ಕ್ಷೇತ್ರ ಬಿಟ್ಟು ರಾಜ್ಯ ಪರ್ಯಟನೆ ಮಾಡಲು ಇವರಿಗೆ ಸೂಚನೆ ನೀಡಲಾಗಿದೆ. ಹಾಸನದತ್ತ ಸುಳಿಯದಂತೆ ಪ್ರೀತಂ ಗೌಡಗೆ ಹಾಗೂ ಮೈಸೂರಿನಿಂದ ಹೊರಗುಳಿಯಲು ಪ್ರತಾಪ್ ಸಿಂಹಗೆ ನಿರ್ದೇಶನ ನೀಡಲಾಗಿದೆ.

ಒಳ ಏಟು ತಪ್ಪಿಸಲು ವರಿಷ್ಠರು ಈ ಯೋಜನೆ ಮಾಡಿದ್ದಾರೆ. ಈ ಇಬ್ಬರೂ ನಾಯಕರು ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಮೈಸೂರು- ಕೊಡಗಿನ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರ ಪ್ರಚಾರ ಸಭೆಯಲ್ಲಿ ಆಗೊಮ್ಮೆ ಈಗೊಮ್ಮೆ ಪ್ರತಾಪ್ ಸಿಂಹ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸನ ಬದಲು ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಪ್ರೀತಂ ಗೌಡ ಸುತ್ತುತ್ತಿದ್ದಾರೆ.

ಆದರೆ ಮೈತ್ರಿ ಅಭ್ಯರ್ಥಿಗೆ ಇವರು ವೋಟು ಕೇಳಿದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ನಡೆ, ನುಡಿಯ ಮೂಲಕ ಪರೋಕ್ಷವಾಗಿ ಇವರ ಅಸಮಾಧಾನ ವ್ಯಕ್ತವಾದರೆ ಒಕ್ಕಲಿಗ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಇಬ್ಬರೂ ನಾಯಕರನ್ನು ಕ್ಷೇತ್ರದಿಂದ ಹೊರಗಿಟ್ಟು ಚುನಾವಣೆ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ.

ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಪ್ರೀತಂ ಗೌಡ ಗೈರುಹಾಜರಾಗಿದ್ದರು.ಇತ್ತೀಚೆಗೆ ಹಾಸನದಲ್ಲಿ ಬಿಜೆಪಿ- ಜೆಡಿಎಸ್ ನಡೆಸಿದ ಜಂಟಿ ಸಮಾವೇಶದಲ್ಲಿ ಪ್ರೀತಂ ಗೌಡ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಎಚ್‌ಡಿ ದೇವೇಗೌಡರು ಬಿಜೆಪಿ ಹೈಕಮಾಂಡ್‌ಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಾಜಿ ಶಾಸಕ ಪ್ರೀತಂಗೌಡ ಅವರ ಗೈರುಹಾಜರಿಯನ್ನು ರಾಧಾಮೋಹನ್ ದಾಸ್ ಅಗರ್‌ವಾಲ್ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಂ ಗೌಡ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯೂ ಆಗಿದ್ದಾರೆ. ಹೀಗಾಗಿ ಅವರಿಗೆ ಅವರದ್ದೇ ಆದ ಜವಾಬ್ದಾರಿಗಳು ಇವೆ ಎಂದಿದ್ದಾರೆ.

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಸ್ಪರ್ಧೆ ಮಾಡಲು ಟಿಕೆಟ್ ಸಿಕ್ಕಿಲ್ಲ. ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ ಸ್ಪರ್ಧೆ ಮಾಡಿದ್ದಾರೆ. ಆದರೆ, ಪ್ರತಾಪ್ ಸಿಂಹ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಬೆಳಗಾವಿ ಜಿಲ್ಲೆಯಲ್ಲೂ ಜಗದೀಶ್ ಶೆಟ್ಟರ್ ಪರ ಮತ ಯಾಚನೆ ಮಾಡಿದರು. ಮೋದಿ ಸರ್ಕಾರದ ಸಾಧನೆಗಳನ್ನ ವಿವರಿಸಿದರು.

2018ರ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ವಿರುದ್ಧ 7854 ಮತಗಳ ಅಂತರದಿಂದ ಪರಾಭವ ಅನುಭವಿಸಿದ್ದರು.

ಇದನ್ನೂ ಓದಿ: Lok sabha Election 2024 : ಅಲ್ಲ, ಪ್ರತಾಪ್‌ ಸಿಂಹಗೆ ಟಿಕೆಟ್‌ ತಪ್ಪಿದ್ದು ಯಾಕೇಂತ; ಲಕ್ಷ್ಮಣ್‌ ಕುಹಕದ ಪ್ರಶ್ನೆ

ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಪ್ರತಾಪ್ ಸಿಂಹ ಕಾಂಗ್ರಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 31608 ಮತಗಳ ಅಂತರದಿಂದ ಗೇಲುವು ಸಾಧಿಸಿದ್ದರು. 2019ರ ಚುನಾವಣೆಯಲ್ಲಿ ಸಿಎಚ್ ವಿಜಯಶಂಕರ್ ವಿರುದ್ಧ ಜಯ ಗಳಿಸಿದ್ದರು.

Exit mobile version