Site icon Vistara News

‌Lok Sabha Election 2024: ಕರ್ನಾಟಕದಲ್ಲಿ ಪ್ರಚಾರಕ್ಕೆ‌ ಬರಲಿದ್ದಾರೆ ಪ್ರಿಯಾಂಕಾ, ರಾಹುಲ್‌ ಗಾಂಧಿ; ಮಹಿಳಾ ಮತಕ್ಕೆ ಕಾಂಗ್ರೆಸ್‌ ಪ್ಲ್ಯಾನ್!

Lok Sabha Election 2024 Priyanka and Rahul Gandhi to campaign in Karnataka

ಬೆಂಗಳೂರು: ಲೋಕಸಭಾ ಚುನಾವಣೆ (‌Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರದ ಭರಾಟೆ ಶುರುವಾಗಿದೆ. ಕೇಂದ್ರ ಸೇರಿದಂತೆ ಹಲವು ಕಡೆಗಳಿಂದ ನಾಯಕರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ, ರೋಡ್‌ ಶೋಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್‌ ಸಹ ಪ್ರಮುಖರನ್ನು ರಾಜ್ಯಕ್ಕೆ ಕರೆಸಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ತನ್ನದೇ ಕಾರ್ಯತಂತ್ರವನ್ನು (Political Tactics) ಹೆಣೆಯಲು ಮುಂದಾಗಿದೆ. ಇನ್ನು ರಾಜ್ಯಕ್ಕೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಕರೆತರಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

ಈ ಬಾರಿಯು ಲೋಕಸಭಾ ಚುನಾವಣೆಗೆ ಕೆಲವು ಕ್ಷೇತ್ರ ಚುನಾವಣೆ ಪ್ರಚಾರಕ್ಕೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕರೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಪ್ರಿಯಾಂಕಾ ಗಾಂಧಿ ಅವರಿಂದ ಮಹಿಳೆಯರ ಮತಗಳನ್ನು ಸೆಳೆಯುವ ಚಿಂತನೆ ಮಾಡಲಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಬಗ್ಗೆ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದರು. ಘೋಷಣೆ ಮಾಡಿದಂತೆ ಗೃಹ ಲಕ್ಷ್ಮಿ ಗ್ಯಾರಂಟಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲಾಗಿದೆ. ಹಾಗಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ಚುನಾವಣಾ ಪ್ರಚಾರ ಭಾಷಣ ಮಾಡಿಸುವುದು. ಈ ವೇಳೆ ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಒತ್ತಿ ಹೇಳುವುದು. ಈ ಮೂಲಕ ಮಹಿಳೆಯರಿಗೆ ಕಾಂಗ್ರೆಸ್‌ ಬಗ್ಗೆ ಮತ್ತಷ್ಟು ನಂಬಿಕೆ ಬರುವಂತೆ ಮಾಡುವ ಪ್ಲ್ಯಾನ್‌ ಅನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.

ಹಾಸನದಲ್ಲಿ ರಾಹುಲ್‌ ಗಾಂಧಿ ಪ್ರಚಾರ?

ಇನ್ನು ರಾಹುಲ್ ಗಾಂಧಿ ಅವರನ್ನು ಕರೆಸಿ ದಳಪತಿಗಳ ಕೋಟೆಯಾದ ಹಾಸನದಲ್ಲಿ ಪ್ರಚಾರ ನಡೆಸಲು ಚಿಂತನೆ ನಡೆಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿ ಟೀಮ್ ಜೆಡಿಎಸ್ ಎಂದು ರಾಹುಲ್ ಗಾಂಧಿ ಕರೆದಿದ್ದರು. ಈಗ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ರಾಹುಲ್‌ ಗಾಂಧಿಯವರಿಂದ ಮತ್ತೊಮ್ಮೆ ಇದೇ ಬಾಂಬ್‌ ಹಾಕಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಹಾಸನ ಮತ್ತು ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಮತಗಳನ್ನು ಸೆಳೆಯಲು ತಂತ್ರ ಹೂಡಲಾಗಿದೆ ಎನ್ನಲಾಗಿದೆ. ಈ ಮೂಲಕ ಮೈತ್ರಿಗೆ ಟಕ್ಕರ್ ಕೊಡುವ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Lok Sabha Election 2024: ಹಾಸನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೈ ಎಂದ ಪ್ರೀತಂ ಗೌಡ ಅತ್ಯಾಪ್ತರು; ಪ್ರಜ್ವಲ್‌ ರೇವಣ್ಣಗೆ ಶಾಕ್!

ಎಐಸಿಸಿ ನಾಯಕರ ಜತೆ ಮಾತುಕತೆ

ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದರೆ ಯಾವ ರೀತಿ ಪ್ಲಸ್‌ ಆಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಕೆಪಿಸಿಸಿ ಮುಖಂಡರು ಎಐಸಿಸಿ ನಾಯಕರ ಜತೆಗೆ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ರಾಹುಲ್ ಮತ್ತು ಪ್ರಿಯಾಂಕಾರನ್ನು ಕರೆಸಲು ಸದ್ಯಕ್ಕೆ ಚಿಂತನೆ ನಡೆಸಲಾಗಿದೆ. ಹಾಗೇ ಉತ್ತರ ಕರ್ನಾಟಕ ಮೂರು ಕ್ಷೇತ್ರಗಳಿಗೂ ಇವರನ್ನು ಬಳಸಿಕೊಳ್ಳುವ ಬಗ್ಗೆ ಪ್ಲ್ಯಾನ್‌ ಮಾಡಿದ್ದಾರೆನ್ನಲಾಗಿದೆ. ಇನ್ನು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಕರೆಸುವ ಬಗ್ಗೆಯೂ ಚರ್ಚೆ ನಡೆದಿದೆ.

ಮೈಸೂರಲ್ಲಿ ಪ್ರಿಯಾಂಕಾ ಪ್ರಚಾರ?

ಮತ್ತೊಂದೆಡೆ ಮೈಸೂರಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಸ್ಥಳೀಯರಿಂದ ಒತ್ತಡ ಹೆಚ್ಚಿದೆ. ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ವಿರುದ್ಧ ಹೆಚ್ಚು ಮಾತನಾಡಲು ಆಗದ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ನಾಯಕರು, ಪ್ರಿಯಾಂಕಾ ಅವರನ್ನು ಕರೆಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಲ್ಲಿಗೆ ಅವರನ್ನು ಕರೆಸಿದಲ್ಲಿ ಮಹಿಳಾ ಮತಗಳು ಕಾಂಗ್ರೆಸ್‌ ಪಾಲಿಗೆ ಬರಲಿವೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

Exit mobile version