ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Lok Sabha constituency) ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್. ರಕ್ಷಾ ರಾಮಯ್ಯ (MS Raksha Ramayya) ಅವರು ಇಂದು (ಶನಿವಾರ – ಮಾ.30) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ (M Veerappa Moily) ಅವರನ್ನು ಭೇಟಿ ಮಾಡಿದರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಿಂದ ಬಿ. ಫಾರಂ ಪಡೆದರು. ಇದೇ ವೇಳೆ ಜಿಲ್ಲೆಯ ಎಲ್ಲ ನಾಯಕರನ್ನೊಳಗೊಂಡು, ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ.
ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಕ್ಷಾ ರಾಮಯ್ಯ ಅವರಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವಂತೆ ಶುಭ ಹಾರೈಸಿದ್ದಾರೆ.
ಚುನಾವಣಾ ಕಾರ್ಯತಂತ್ರ ಬಗ್ಗೆ ಚರ್ಚೆ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಕ್ಷಾ ರಾಮಯ್ಯ ಅವರಿಗೆ ಬಿ ಫಾರಂ ವಿತರಿಸಿದರು. ಅಲ್ಲದೆ, ಈ ಚುನಾವಣೆಯಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಗೆದ್ದು ಬರುವಂತೆ ಶುಭ ಹಾರೈಸಿದರು. ಎಲ್ಲ ಸಂದರ್ಭದಲ್ಲಿಯೂ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದರು. ಈ ವೇಳೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಂ ಜತೆ ಈ ನಾಯಕರನ್ನು ಭೇಟಿ ಮಾಡಿ ಚುನಾವಣಾ ಕಾರ್ಯತಂತ್ರ ಕುರಿತು ರಕ್ಷಾ ರಾಮಯ್ಯ ಚರ್ಚಿಸಿದರು. ಚುನಾವಣೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಾಮೂಹಿಕ ಹೋರಾಟದ ಮೂಲಕ ಗೆಲುವು ಸಾಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಸಲಹೆ ನೀಡಿದರು.
ಹಿರಿಯ ನಾಯಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ. ವೀರಪ್ಪ ಮೊಯ್ಲಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಶಿವಶಂಕರ ರೆಡ್ಡಿ ಸೇರಿದಂತೆ ಎಲ್ಲರ ನಾಯಕತ್ವದಡಿ ಚುನಾವಣೆ ಎದುರಿಸುತ್ತಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ಶಾಸಕರಾದ ಸುಬ್ಬಾರೆಡ್ಡಿ ಅವರು ಟಿಕೆಟ್ ಘೋಷಣೆಯಾದ ನಂತರ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದು, ಎಲ್ಲಿಯೂ ಅಸಮಾಧಾನವಿಲ್ಲ. ಅಸಮಾಧಾನದ ಪ್ರಶ್ನೆ ಉದ್ಭವಾಗುವುದಿಲ್ಲ. ಹೈಕಮಾಂಡ್ ಟಿಕೆಟ್ ಹಂಚಿಕೆಮಾಡಿದ್ದು, ಪಕ್ಷದ ಪ್ರಮುಖ ನಾಯಕರು ಪ್ರಚಾರದ ಪ್ರತಿಯೊಂದು ಹಂತದಲ್ಲೂ ನಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಿದರು.
ಹಿರಿಯರ ಆಶೀರ್ವಾದ ಪಡೆದು ಪ್ರಚಾರ
ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಏನೇ ಆದರೂ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ ರೆಡ್ಡಿ ಅವರ ಆಶೀರ್ವಾದ ಪಡೆದು ಪ್ರಚಾರ ನಡೆಸುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಸಕಾರಾತ್ಮಕವಾದ ಪ್ರತಿಕ್ರಿಯೆ ಇದೆ. ಯುವ ಸಮೂಹದವರು ಕೇಂದ್ರ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದು, ರೋಸಿ ಹೋಗಿದ್ದಾರೆ. ಯುವ ಕೇಂದ್ರಿತ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಬದಲಾವಣೆಗಾಗಿ ಯುವ ಸಮೂಹ ಕಾತರದಿಂದ ಕಾಯುತ್ತಿದ್ದು, ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.
ಕಾಂಗ್ರೆಸ್‌ನಿಂದ ಯುವ ಜನರಿಗೆ ಟಿಕೆಟ್
ಪ್ರತಿಸ್ಪರ್ಧಿ ಡಾ. ಕೆ. ಸುಧಾಕರ್ ಅವರ ವಿರುದ್ಧ ನಮ್ಮ ಹೋರಾಟ ಅತ್ಯಂತ ರಚನಾತ್ಮಕವಾಗಿರುತ್ತದೆ. ನಮ್ಮ ಒಳ್ಳೆಯತನ, ನಮ್ಮ ಕೆಲಸಗಳು, ನಮ್ಮ ಗುರಿ, ಪಕ್ಷದ ಸಿದ್ಧಾಂತ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಈ ಬಾರಿ ಯುವ ಸಮೂಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇದು ತಮಗೆ ಸಂತಸ ತಂದಿದೆ. ಯುವ ಜನಾಂಗ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿದೆ. ರಾಜ್ಯದಲ್ಲಿ ಶೇ. 32 ರಿಂದ 35 ರಷ್ಟು ಯುವ ಜನಾಂಗಕ್ಕೆ ಸ್ಪರ್ಧಿಸಲು ಟಿಕೆಟ್ ದೊರೆತಿದ್ದು, ಕರ್ನಾಟಕದಲ್ಲಿ ಇದು ಉತ್ತಮ ಬೆಳವಣಿಗೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್; ಮೋದಿ ಬಂದರೂ ಹೆದರಲ್ಲ!
ನಮ್ಮ ಹಿರಿಯ ನಾಯಕರು ತಮಗೆ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ 29 ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರತಿಯೊಂದು ಗಂಟೆಯೂ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ಗಂಟೆ ಗಂಟೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ಯುವ ಸಮುದಾಯ, ಮಹಿಳೆಯರು ಒಳಗೊಂಡಂತೆ ಎಲ್ಲ ವರ್ಗದ ಜನರ ಜತೆಗೂಡಿ ಪ್ರಚಾರ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳು, ಪಕ್ಷದ ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಪ್ರಚಾರ ಹಮ್ಮಿಕೊಳ್ಳಲಾಗುವುದು ಎಂದು ರಕ್ಷಾ ರಾಮಯ್ಯ ತಿಳಿಸಿದರು.
ಮುಂದಿನ ಗುರಿ, ಯೋಜನೆಯನ್ನು ತೆರೆದಿಟ್ಟ ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಆದ್ಯತೆಯಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಸ್ತುತ ಶೇ. 82 ರಿಂದ 85ರಷ್ಟು ಸಾರಕ್ಷತೆಯಿದೆ. ಬರುವ ದಿನಗಳಲ್ಲಿ ಶೇ. 100ರಷ್ಟು ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಒತ್ತು ನೀಡಲಾಗುವುದು. ಪ್ಲೋರೈಡ್ ಯುಕ್ತ ನೀರಿನಿಂದಾಗಿ ಕ್ಯಾನ್ಸರ್ ಮತ್ತಿತರೆ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಂಡಿದ್ದು, ಈ ಸಮಸ್ಯೆ ನಿವಾರಣೆ ನಮ್ಮ ಗುರಿಯಾಗಿದೆ. ಯುವ ಸಬಲೀಕರಣಕ್ಕೆ ಒತ್ತು ನೀಡಲಾಗುವುದು ಎಂದು ರಕ್ಷಾ ರಾಮಯ್ಯ ಅವರು ತಮ್ಮ ಮುಂದಿನ ಗುರಿಯನ್ನು ತೆರೆದಿಟ್ಟರು.