ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಪ್ರಚಾರ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಸಂಪುಟ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ನಾಲಿಗೆ ಹರಿಬಿಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಬಿಜೆಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದರು. ಈಗ ಅವರಿಗೆ ತಂಗಡಗಿ ತಿರುಗೇಟು ನೀಡಿದ್ದಾರೆ. “ನಾನು ಯಾರಿಗೆ ಹುಟ್ಟಿದ್ದೇನೆ ಎಂಬ ಬಗ್ಗೆ ತಿಳಿಯಬೇಕಾ? ದಿನಾಂಕ ಫಿಕ್ಸ್ ಮಾಡಿ, ಬಿಜೆಪಿ ಕಚೇರಿಗೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕಕ್ಕೆ ಅನ್ಯಾಯವಾದಾಗ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಉತ್ತರ ಕರ್ನಾಟಕ ಮುಳುಗಿದಾಗ ಮೋದಿ ಬರಲಿಲ್ಲ. ಈಗ ಬಂದರೆ ನಮ್ಮ ಯುವಕರು ಕೇಳ್ತಾರಾ? ನಾನು ತಂದೆಯ ಸ್ಥಾನದಲ್ಲಿ ಇದ್ದು, ಸಹೋದರನ ಸ್ಥಾನದಲ್ಲಿ ಇದ್ದು ನಮ್ಮ ಯುವಕರಿಗೆ ಕಿವಿ ಮಾತು ಹೇಳಿದ್ದೇನೆ. ಸಿ.ಟಿ. ರವಿ ಅವರು ನನಗೆ ನಿಮ್ಮ ಅಪ್ಪನಿಗೆ ಹುಟ್ಟಿದರೆ ಅಂತ ಕೇಳಿದ್ದಾರೆ. ನಾನು ಸಿ.ಟಿ. ರವಿಗೆ ಈ ಮಾತನ್ನು ತಿರುಗಿ ಕೇಳಲ್ಲ. ನೀವು ಯಾರಿಗೆ ಹುಟ್ಟಿದ್ದೀರಿ ಅಂತ ಕೇಳಲ್ಲ. ನನ್ನ ಮತ್ತು ನಮ್ಮ ತಾಯಿ ಬಗ್ಗೆ ನಿಮಗೆ ಅನುಮಾನವಿದ್ದರೆ ದಿನಾಂಕ ಫಿಕ್ಸ್ ಮಾಡಿ. ನಾನು ಬಿಜೆಪಿ ಕಚೇರಿಗೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ. ನೀವು ರೆಡಿನಾ ಸಿಟಿ ರವಿ? ನೀನು ಲೂಟಿ ರವಿ ಎಂದು ಕಿಡಿಕಾರಿದ್ದಾರೆ.
ನಿಮ್ಮ ಮೋದಿಯವರನ್ನ ಹೊಗಳಬೇಕಾ?
ಎಷ್ಟು ಜನ ನೀವು ಚಾಕು, ಚೂರಿ ಇಟ್ಟುಕೊಂಡು ಓಡಾಡಿದ್ದೀರಿ? ನಮ್ಮ ಮಕ್ಕಳು ಸಹ ಇವುಗಳನ್ನು ಇಟ್ಟುಕೊಂಡು ಓಡಾಡಬೇಕಾ? ನಮ್ಮ ಯುವಕರು ದಾರಿ ತಪ್ಪಬಾರದು ಅಂತ ಹೇಳಿದ್ದೇನೆ. ನಿಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿ ಎಂದು ಹಲವು ಯುವಕರು ಕರೆ ಮಾಡಿ ಹೇಳಿದ್ದಾರೆ. ಆ ನಂಬರ್ ಕೊಡ್ಲಾ? ನಾನು ವಿರೋಧ ಪಕ್ಷದ ನಾಯಕನಾಗಿ ನಿಮ್ಮ ತಪ್ಪುಗಳನ್ನು ಹೇಳದೇ ನಿಮ್ಮ ಮೋದಿಯವರನ್ನ ಹೊಗಳಬೇಕಾ? ಬಿಜೆಪಿ ಕಚೇರಿಗೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಶಿವರಾಜ್ ತಂಗಡಗಿ ಸವಾಲು ಹಾಕಿದರು.
ಸುಳ್ಳು ಸತ್ಯದ ನಡುವಿನ ಯುದ್ಧ
ಈ ಚುನಾವಣೆ ಸುಳ್ಳು ಸತ್ಯದ ನಡುವೆ ನಡೆಯುತ್ತಿರುವ ಯುದ್ಧವಾಗಿದೆ. ನಮ್ಮ ರಾಜ್ಯಕ್ಕೆ ಬರ ಬಂದಿದೆ. ಬರದ ಹಣವನ್ನು ಬಿಡುಗಡೆ ಮಾಡಿದರಾ? ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಗ್ಗೆ ಏನು ಮಾತನಾಡಿದರು? ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ ಮಾಡಿದಿರಿ. ಆದರೆ, ಹಣ ಬಿಡುಗಡೆ ಮಾಡಿದಿರಾ? ಎಂದು ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದರು.
ಸಿ.ಟಿ. ರವಿ ಹೇಳಿದ್ದೇನು?
ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಸೋಮವಾರ ಹೇಳಿಕೆ ನೀಡಿದ್ದ ಸಿ.ಟಿ. ರವಿ, ಸಂಸ್ಕೃತಿಯೇ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಸಚಿವರ ಹೇಳಿಕೆ ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರವಾಗಿದೆ. ಅವರ ಹೇಳಿಕೆಗೆ ಪ್ರತಿಯಾಗಿ, ‘ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ದರೆ ಹೊಡಿ’ ಎಂದು ಹೇಳಬೇಕು ಅಂದುಕೊಂಡಿದ್ದೆ. ಆದರೆ, ತಂಗಡಗಿ ಮಟ್ಟಕ್ಕೆ ನಾವು ಇಳಿದು ಮಾತನಾಡಲು ಹೋಗಲ್ಲ. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು ಎಂದು ಕಿಡಿಕಾರಿದ್ದರು. ಈಗ ಇದಕ್ಕೆ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ.