ಬೆಂಗಳೂರು: ಲೋಕಸಭಾ ಚುನಾವಣೆಗಾಗಿ (Lok Sabha Election 2024) ರಾಜಕೀಯ ಪಕ್ಷಗಳು ಭರ್ಜರಿ ತಯಾರಿಗಳನ್ನು ನಡೆಸಿಕೊಂಡು ಬರುತ್ತಿವೆ. ಕರ್ನಾಟಕದ ಮಟ್ಟಿಗೆ ಭಾರಿ ಚರ್ಚೆಗೆ ಗ್ರಾಸವಾಗಿರುವ, ಹೈ ವೋಲ್ಟೇಜ್ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದತ್ತ (Mandya Lok Sabha constituency) ಈಗ ಎಲ್ಲರ ಕಣ್ಣು ನೆಟ್ಟಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಸ್ಪರ್ಧೆ ವಿಷಯವು ನಿರ್ಣಾಯಕ ಘಟ್ಟವನ್ನು ತಲುಪಿದೆ. ಈಗಾಗಲೇ ಮಂಡ್ಯಕ್ಕೆ ಬಂದಿರುವ ಸುಮಲತಾ ಅಂಬರೀಶ್ ಜತೆ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದಿದ್ದಾರೆ. ಅಭಿಷೇಕ್ ಅಂಬರೀಶ್ ಜತೆಗಿದ್ದಾರೆ.
ಬೆಂಬಲಿಗರ ಸಭೆಗೂ ಮುನ್ನ ಸುಮಲತಾ ಅಂಬರೀಶ್ ಅವರು ಮಂಡ್ಯದ ಕಾಳಿಕಾಂಬಾ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಜನರ ಒಳಿತಿಗಾಗಿ ತಾವು ತೆಗೆದುಕೊಳ್ಳುತ್ತಿರುವ ನಿರ್ಣಯಕ್ಕೆ ಆಶೀರ್ವದಿಸು ತಾಯೇ ಎಂದು ಕೋರಿದ್ದಾರೆ. ಬಳಿಕ ಬೆಂಬಲಿಗರ ಜತೆ ಸಭೆ ನಡೆಸಲು ಅನುವಾಗಿದ್ದಾರೆ.
ಸುಮಲತಾ ನಡೆ ಏನು?
ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು? ಅವರು ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಗೆ (HD Kumaraswamy) ಬೆಂಬಲ ಕೊಡುತ್ತಾರಾ? ಎಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಸುಮಲತಾ ಅವರು ಬಿಜೆಪಿ ಹೈಕಮಾಂಡ್ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅವರು ಯಾವುದೇ ಕಾರಣಕ್ಕೂ ಮಂಡ್ಯ ಬಿಡದ ನಿರ್ಧಾರವನ್ನು ಮಾಡಿದ್ದಾರೆ. ಹೀಗಾಗಿ ಅವರು ಒಂದು ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದೇ ಹೌದಾದರೆ, ಕಮಲ ಪಕ್ಷವನ್ನು ಸೇರ್ಪಡೆಗೊಂಡರೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಭರವಸೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಸಿಕ್ಕಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸುಮಲತಾ ಅವರ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪೋಸ್ಟ್ ಹಾಕಿ ಕುತೂಹಲ ಮೂಡಿಸಿರುವ ಸುಮಲತಾ
ಈ ಮಧ್ಯೆ ಸುಮಲತಾ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಬುಧವಾರ (ಏಪ್ರಿಲ್ 3) ನಿರ್ಧಾರ ಪ್ರಕಟಿಸುವುದಾಗಿ ಮಂಗಳವಾರ ಹೇಳಿದ್ದರು. ಇದರಲ್ಲಿ, “ತಾವಾಗಲೀ, ತಮ್ಮ ಕುಟುಂಬದವರಾಗಲೀ ಅಧಿಕಾರಕ್ಕೆ ಎಂದೂ ಅಂಟಿಕೊಂಡಿಲ್ಲ” ಎಂದು ಹೇಳಿಕೊಂಡಿದ್ದರು. ಈ ಸಾಲನ್ನು ಸ್ವತಂತ್ರ ಸ್ಪರ್ಧೆಯ ಮುನ್ಸೂಚನೆಯಾಗಿ ಹೇಳಿದ್ದಾರೋ ಅಥವಾ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವ ಅರ್ಥದಲ್ಲಿ ಹೇಳಿದ್ದಾರೋ ಎಂಬುದಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ. ಇನ್ನು ಸುಮಲತಾ ಅವರು ಅಮಿತ್ ಶಾ (Amit Shah) ಅವರ ಕರೆಗಾಗಿ ಕಾಯುತ್ತಾ ಇದ್ದಾರೆ ಎಂದೂ ಹೇಳಲಾಗುತ್ತಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಸುಮಲತಾರನ್ನು ಎರಡು ದಿನಗಳ ಹಿಂದಷ್ಟೇ ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಜತೆಗೆ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ರಾಜಕೀಯ ಭವಿಷ್ಯಕ್ಕೆ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಜತೆಗೆ ಇನ್ನೊಮ್ಮೆ ಬಿಜೆಪಿ ಹೈಕಮಾಂಡ್ ಜತೆ ತಾವು ಮಾತನಾಡಬೇಕಿದೆ ಎಂದು ಸುಮಲತಾ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವ ಅಮಿತ್ ಶಾ ಅವರ ಕರೆಗಾಗಿ ಕಾಯುತ್ತಿದ್ದಾರಾ? ಎಂಬ ಪ್ರಶ್ನೆಯೂ ಮೂಡಿದೆ.
ಸುಮಲತಾ ಪೋಸ್ಟ್‌ನಲ್ಲೇನಿದೆ?
“ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೇ,
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.
ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರಿಯುವೆ ಎಂದು ಹೇಳಿದ್ದೇನೆ.
ಇದನ್ನೂ ಓದಿ: Lok Sabha Election 2024: ದೇಶದಲ್ಲಿ ನೆಮ್ಮದಿ, ಆರ್ಥಿಕತೆಯಲ್ಲಿ ನಂ 3 ಆಗಬೇಕಿದ್ದರೆ ಮೋದಿಯೇ ಆಯ್ಕೆ: ಅಮಿತ್ ಶಾ
ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ.
ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ,
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) April 2, 2024
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.
ಚುನಾವಣೆಗೆ ಸ್ಪರ್ಧಿಸುವ… pic.twitter.com/65Wte90LWJ
ಭಾವನೆಗಳಿಗೆ ನೋವು ತರಲಾರೆ
ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟ ಪಡಿಸುವ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ಅಂದು ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಬನ್ನಿ, ಜತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸೋಣ” ಎಂದು ಸುಮಲತಾ ಅಂಬರೀಶ್ ಬರೆದುಕೊಂಡಿದ್ದರು. ಅಲ್ಲದೆ, ನನ್ನ ಹೆಜ್ಜೆ ಮಂಡ್ಯಕ್ಕಾಗಿ ಎಂದು ಹ್ಯಾಷ್‌ಟ್ಯಾಗ್ ಹಾಕಿದ್ದರು.