Site icon Vistara News

Lok Sabha Election 2024: ಸುಮಲತಾ ಅಂಬರೀಶ್‌ ಪಕ್ಷೇತರ ಸ್ಪರ್ಧೆ ಇಲ್ಲ; ಬಿಜೆಪಿ ಸೇರ್ಪಡೆ ಘೋಷಣೆ

Lok Sabha Election 2024 Sumalatha Ambareesh not to contest as an independent candidate Joining BJP

ಬೆಂಗಳೂರು: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣಾ (Lok Sabha Election 2024) ಕಣದಿಂದ ಹಿಂದೆ ಸರಿದಿದ್ದೇನೆ. ನಾನು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸೇರ್ಪಡೆ ಬಗ್ಗ ಸ್ಪಷ್ಟ ಸಂದೇಶವನ್ನು ನೀಡಿದರು. ಇದು ನನ್ನ ಕಾರ್ಯಕರ್ತರ ಹಾಗೂ ಮಂಡ್ಯ ಜಿಲ್ಲೆಯ ಜನತೆಯ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಮಂಡ್ಯವೇ ನನ್ನ ಕರ್ಮ ಭೂಮಿ. ಹೀಗಾಗಿ ನನ್ನ ರಾಜಕಾರಣ ಮಂಡ್ಯ ಬಿಟ್ಟು ಒಂದಿಂಚೂ ಸಾಗದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಈ ಮೂಲಕ ಮಂಡ್ಯ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ ವರ್ಸಸ್‌ ಎನ್‌ಡಿಎ ಅಭ್ಯರ್ಥಿ ಎಂಬುದು ಫೈನಲ್‌ ಆಗಿದೆ.

ಕಳೆದ ಹಲವು ತಿಂಗಳಿನಿಂದ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸಮಲತಾ ಅಂಬರೀಶ್‌ ಅವರ ನಡೆ ಈಗ ಬಹಿರಂಗವಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಶಾಲಿಯಾಗಿ ಐದು ವರ್ಷ ಕೆಲಸ ಮಾಡಿದ್ದ ಸುಮಲತಾ ಅವರು ಈಗ ಬಿಜೆಪಿಯನ್ನು ಬೆಂಬಲಿಸುವ ಮೂಲಕ ತಮ್ಮ ಹೊಸ ರಾಜಕೀಯ ಇನ್ನಿಂಗ್ಸ್‌ ಅನ್ನು ಆರಂಭ ಮಾಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಅವರ ರೋಲ್‌ ಏನು? ಮಂಡ್ಯದಲ್ಲಿ ಅವರ ಪಾತ್ರ ಏನು ಎಂಬುದು ಮಾತ್ರ ಇನ್ನಷ್ಟೇ ಗೊತ್ತಾಗಬೇಕಿದೆ.

ಮಂಡ್ಯದ ಕಾಳಿಕಾಂಬಾ ಸಮುದಾಯ ಭವನದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್‌, ಈ ಒಂದು ಚುನಾವಣೆಯಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಗಳ ಬಗ್ಗೆ ವಿಸ್ತೃತವಾಗಿ ಹೇಳಿದರು. ಈ ಮೂಲಕ ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸಿದರು. ಈ ಮಂಡ್ಯದ ಜನರನ್ನು ಎಂದೆಂದಿಗೂ ಕೈಬಿಡಲಾರೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಬಾಹ್ಯ ಬೆಂಬಲವನ್ನು ಕೊಟ್ಟಿತ್ತು. ಅದೇ ರೀತಿ ನಾನು ಕಳೆದ 2023ರ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪರವಾಗಿ ಬೆಂಬಲ ನೀಡಿದ್ದೆ. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ, ಬದಲಾದ ಪರಿಸ್ಥಿತಿಯಲ್ಲಿ ನಾನು ಈ ತೀರ್ಮಾನವನ್ನು ತೆಗೆದಕೊಂಡಿದ್ದೇನೆ. ಪಕ್ಷೇತರವಾಗಿ ಬೇಕಾದರೂ ನಾನು ಸ್ಪರ್ಧೆ ಮಾಡಬಹುದು. ಆದರೆ, ಇದರಿಂದ ಯಾರಿಗೆ ಲಾಭ ಆಗುತ್ತದೆ ಎಂಬುದು ಮುಖ್ಯ ಪ್ರಶ್ನೆ ಆಗುತ್ತದೆ ಎಂದು ಹೇಳಿದರು.

ಟಿಪಿಕಲ್‌ ರಾಜಕಾರಣಿ ನಾನಲ್ಲ

ನಾನು ಎಲ್ಲರಂತೆ ಟಿಪಿಕಲ್‌ ರಾಜಕಾರಣಿ ಅಲ್ಲ. ನನಗೆ ಬಿಜೆಪಿ ಹೈಕಮಾಂಡ್‌ ಬೇರೆ ಕಡೆಗೆ ಸ್ಪರ್ಧೆ ಮಾಡಲು ಸಾಕಷ್ಟು ಅವಕಾಶವನ್ನು ನೀಡಿತ್ತು. ಆದರೆ, ನನಗೆ ಮಂಡ್ಯ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ನಿಮ್ಮನ್ನು ಹಾಗೂ ಅಂಬರೀಶ್‌ ಅವರ ಕನಸನ್ನು ಬಿಟ್ಟು ಹೋದರೆ ಯಾರೂ ಮೆಚ್ಚಲಾರರು. ಹಾಗಾಗಿ ನಾನು ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದರು.

ಇಂದು ನಾನು ಸಂಸದೆ. ಆದರೆ, ನಾಳೆ ನನ್ನ ಜಾಗಕ್ಕೆ ಇನ್ನೊಬ್ಬರು ಬರುತ್ತಾರೆ. ಕೊನೆಯವರೆಗೂ ನಾನು ಅಂಬರೀಶ್‌ ಪತ್ನಿ ಎಂಬುದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು ಎಂದು ಸುಮಲತಾ ಅಂಬರೀಶ್‌ ಹೇಳಿದರು.

ಕಾಂಗ್ರೆಸ್‌ಗೆ ಎಂದಿಗೂ ಹೋಗಲ್ಲ

ನನ್ನ ಮುಂದಿನ ದಾರಿ ಏನೆಂಬುದನ್ನು ನೋಡಿದೆ. ಸ್ವತಂತ್ರ ಸ್ಪರ್ಧೆ ಮಾಡುವುದು ಸೂಕ್ತ ಅಲ್ಲ ಎಂದೆನಿಸಿತು. ಕಾಂಗ್ರೆಸ್‌ನವರೇ ನನ್ನನ್ನು ಬೇಡ ಎಂದ ಮೇಲೆ ಆ ಪಕ್ಷಕ್ಕೆ ನಾನು ಎಂದೂ ಹೋಗಲಾರೆ. ಆದರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರೂ ನನಗೆ ನನ್ನ ಕ್ಷೇತ್ರಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ನನ್ನ ಬೆಂಬಲಕ್ಕೆ ಸದಾ ಇದ್ದಾರೆ. ಅಲ್ಲದೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಸ್ವತಃ ಪ್ರಧಾನಿಯವರೇ ಕರೆದು ಹೇಳಿದ್ದಾರೆ. ಒಬ್ಬ ಪ್ರಧಾನಿಯೇ ನನಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.

ಯಾರೇ ಬರಲಿ, ಎಲ್ಲಿಯೇ ಇರಲಿ. ಇಂಡಿಯಾ ಅಂದ್ರೆ ಮಂಡ್ಯ, ಮಂಡ್ಯ ಅಂದರೆ ಇಂಡಿಯಾ ಎಂಬಂತೆ ಕೆಲಸ ಮಾಡಿದ್ದೇನೆ. ನನಗೆ ಐದು ವರ್ಷಗಳ ಕಾಲ ಸಹಕಾರ ನೀಡಿದ, ಕಷ್ಟಕ್ಕೆ ನಿಂತ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಂತಾಗ ಸವಾಲುಗಳು ಬೆಟ್ಟದಷ್ಟಿತ್ತು. ಆದರೆ, ಜನರು ನನ್ನ ಕೈಬಿಡಲಿಲ್ಲ. ಸುಮಾರು 7 ಲಕ್ಷಕ್ಕಿಂತ ಹೆಚ್ಚಿನ ಮತಗಳನ್ನು ಹಾಕಿ 1.25 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ ಮಂಡ್ಯ ಜಿಲ್ಲೆಯ ಮತದಾರ ಪ್ರಭುವಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ಹೇಳಿದರು.

ನನ್ನ ರಾಜಕೀಯ ಪ್ರವೇಶ ಅಕಸ್ಮಾತ್‌ ಆಗಿ ಆಗಿದೆ. ರಾಜಕೀಯ ನನಗೆ ಅಂದಿಗೂ ಅನಿವಾರ್ಯ ಆಗಿರಲಿಲ್ಲ. ಇಂದಿಗೂ ಅನಿವಾರ್ಯ ಆಗಿಲ್ಲ. ಆದರೆ, ಅಂಬರೀಶ್‌ ಅವರು ಹಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಾಧನೆ ಮಾಡಿದ್ದರು. ಆದರೆ, ನನಗೆ ಅವರ ಅಭಿಮಾನಿಗಳು ಬಂದು ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡಿದಾಗ ನನಗೆ ಇಲ್ಲ ಎಂದು ಹೇಳಲು ಆಗಲಿಲ್ಲ. ಹಾಗಾಗಿ ನಾನು ಸ್ಪರ್ಧೆ ಮಾಡಿದೆ. ಜತೆಗೆ ನನ್ನ ಜಿಲ್ಲೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಅಭಿವೃದ್ಧಿಯನ್ನು ಮಾಡಬೇಕು, ಕೆಲವು ಬದಲಾವಣೆಗಳನ್ನು ತರಬೇಕು ಎಂಬ ದೃಷ್ಟಿಯಲ್ಲಿ ಸಾಕಷ್ಟು ಸವಾಲುಗಳ ಮಧ್ಯೆಯೂ ನಾನು ಪಕ್ಷೇತರವಾಗಿ ನಿಂತೆ. ನೀವು ಜನರು ನನ್ನ ಕೈ ಹಿಡಿದರು ಎಂದು ಸುಮಲತಾ ಅಂಬರೀಶ್‌ ಅವರು ಹೇಳಿದರು.

ನಾನು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ, ಅದರ ಬಗ್ಗೆ ಪ್ರಚಾರ ಮಾಡಿಕೊಳ್ಳಲು ಹೋಗಿಲ್ಲ. ಸಾಧನೆಗಳು ನಮ್ಮ ಬಗ್ಗೆ ಮಾತನಾಡಬೇಕು, ನಾವು ಸಾಧನೆಗಳ ಬಗ್ಗೆ ಮಾತನಾಡಬಾರದು ಎಂದು ಅಂಬರೀಶ್‌ ಅವರು ಸದಾ ಹೇಳುತ್ತಿದ್ದರು. ಅದನ್ನೇ ನಂಬಿಕೊಂಡು ನಾನು ಬಂದವಳು ನಾನು. ಹಾಗಾಗಿ ನಾನು ಈ ಬಗ್ಗೆ ಎಲ್ಲಿಯೂ ಪ್ರಚಾರವನ್ನು ತೆಗೆದುಕೊಳ್ಳಲು ಹೋಗಿಲ್ಲ. ಆದರೆ, ಕೆಲವರು ನನ್ನ ಸ್ವಾಭಿಮಾನದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಾನು ಮಾಡಿದ ಕೆಲಸಗಳ ಬಗ್ಗೆ ಹೇಳಲೇಬೇಕು. ಕೆಆರ್‌ಎಸ್‌ ಡ್ಯಾಂ ಸಂರಕ್ಷಣೆ ವಿಚಾರವಾಗಿ ನಾನು ಹೋರಾಟ ನಡೆಸಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಜೀವವನ್ನೂ ಲೆಕ್ಕಿಸದೆ ಹೋರಾಡಿದ್ದೇನೆ. ಪಾಂಡವಪುರ ಸಕ್ಕರೆ ಕಾರ್ಖಾನೆ, ಕುಡಿಯುವ ನೀರು, ಬಸ್‌ ವ್ಯವಸ್ಥೆ ಸೇರಿದಂತೆ ಹತ್ತಾರು ವಿಚಾರಗಳನ್ನು ಕೇಂದ್ರದ ಗಮನಕ್ಕೆ ತಂದು ಯೋಜನೆ ರೂಪಿಸಿ ಅನುದಾನಗಳನ್ನು ತಂದಿರುವ ತೃಪ್ತಿ ನನಗೆ ಇದೆ. ಮಂಡ್ಯ ಜಿಲ್ಲೆಗಾಗಿ 700 ಕೋಟಿ ರೂಪಾಯಿಯಷ್ಟು ಅನುದಾನವನ್ನು ತಂದಿದ್ದೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದರು.

ಇದನ್ನೂ ಓದಿ: Lok Sabha Election 2024: ದೇಶದಲ್ಲಿ ನೆಮ್ಮದಿ, ಆರ್ಥಿಕತೆಯಲ್ಲಿ ನಂ 3 ಆಗಬೇಕಿದ್ದರೆ ಮೋದಿಯೇ ಆಯ್ಕೆ: ಅಮಿತ್ ಶಾ

ಜಲಜೀವನ್‌ ಮಿಷನ್‌, ಕಿಸಾನ್‌ ಸಮ್ಮಾನ್‌, ಆಯುಷ್ಮಾನ್‌ ಭಾರತ್‌, ಸರ್ವಿಸ್‌ ರಸ್ತೆಗಳ ನಿರ್ಮಾಣ, ವಿಶೇಷ ಮಹಿಳೆಯ ಭೋಗಿ ಮಂಜೂರು, ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ವೃದ್ಧರು, ವಿಕಲಚೇತನರು, ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಎಸ್ಕಲೇಟರ್‌ ಮಾಡಲು ನಿರ್ಮಾಣಕ್ಕೆ ಒಪ್ಪಿಗೆ ಪಡೆದು ಚಾಲನೆ ನೀಡಿದ್ದೇನೆ ಎಂದು ತಾವು ಮಾಡಿದ ಸಾಧನೆಗಳ ಪಟ್ಟಿಯನ್ನೇ ಮುಂದಿಟ್ಟರು. ಅಲ್ಲದೆ, ಸಂಸತ್‌ ಅಧಿವೇಶನದಲ್ಲಿ ಕನ್ನಡ ಭಾಷೆ, ಕಾವೇರಿ ವಿವಾದ, ಹಿಂದಿ ಹೇರಿಕೆ, ರೈತರ ಸಮಸ್ಯೆ ಬಗ್ಗೆ 24 ಡಿಬೇಟ್‌ ಮಾಡಿದ್ದೇನೆ. 200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ. ಜನರ ಪರವಾಗಿ ಮನಸ್ಫೂರ್ತಿಯಾಗಿ ಧ್ವನಿ ಎತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಬಿಜೆಪಿ ಹೈಕಮಾಂಡ್‌ ಜತೆ ಚರ್ಚೆ ನಡೆಸಿದ್ದ ಸುಮಲತಾ

ಕಳೆದ ಹಲವು ತಿಂಗಳಿನಿಂದಲೇ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಹೈಕಮಾಂಡ್‌ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಭರವಸೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಸಿಕ್ಕಿದೆ ಎನ್ನಲಾಗಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಸುಮಲತಾರನ್ನು ಎರಡು ದಿನಗಳ ಹಿಂದಷ್ಟೇ ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಜತೆಗೆ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ರಾಜಕೀಯ ಭವಿಷ್ಯಕ್ಕೆ ಸಹಕಾರ ನೀಡುವುದಾಗಿಯೂ ಹೇಳಿದ್ದರು. ಆದರೆ, ಏಪ್ರಿಲ್‌ 3ರ ಬುಧವಾರ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಈಗ ಅದರಂತೆ ಘೋಷಣೆ ಮಾಡಿದ್ದಾರೆ.

Exit mobile version