Site icon Vistara News

Lok Sabha Election 2024: ನಾಳೆಯೇ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ; ಯಾರೆಲ್ಲ ಪ್ರಮುಖರು ಭಾಗಿ?

Lok Sabha Election 2024 Sumalatha Ambareesh to join BJP tomorrow Who are the main participants

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ (Sumalatha Ambareesh) ಅವರು ಸ್ಪರ್ಧೆಯಿಂದ ಹಿಂದೆ ಸರಿದು, ಬಿಜೆಪಿ ಸೇರ್ಪಡೆ ಬಗ್ಗೆ ಬುಧವಾರವಷ್ಟೇ ಘೋಷಿಸಿದ್ದರು. ಈಗ ಅವರ ಪಕ್ಷ ಸೇರ್ಪಡೆ ದಿನಾಂಕವೂ ನಿಗದಿಯಾಗಿದೆ. ನಾಳೆ (ಶುಕ್ರವಾರ) ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಬೆಂಬಲಿಗರೊಂದಿಗೆ ಬಿಜೆಪಿಯನ್ನು ಸೇರಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ, ಆರ್.‌ ಅಶೋಕ್‌, ಮಾಜಿ ಸಿಎಂ ಬಿ.ಎಸ್‌. ಬಿ.ಎಸ್.‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.

ಮೋದಿಯನ್ನು ಮನಸಾರೆ ಹೊಗಳಿದ್ದ ಸುಮಲತಾ

ಬುಧವಾರ (ಮಾ. 3) ಸಭೆ ನಡೆಸಿ ಮಾತನಾಡಿದ್ದ ಸುಮಲತಾ ಅಂಬರೀಶ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಸಾರೆ ಹೊಗಳಿದ್ದರು. ಕಾಂಗ್ರೆಸ್‌ ಪಕ್ಷವನ್ನು ನನ್ನನ್ನು ತಿರಸ್ಕಾರ ಮಾಡಿದ್ದರೂ ಬಿಜೆಪಿ ಹಾಗೂ ಮೋದಿ ಅವರು ನನ್ನನ್ನು ಪುರಸ್ಕರಿಸಿದರು. ನನಗೆ ಎಲ್ಲಿಲ್ಲದ ಗೌರವವನ್ನು ಕೊಟ್ಟರು. ನಾನೊಬ್ಬ ಸ್ವತಂತ್ರ ಸಂಸದೆಯಾಗಿದ್ದರೂ ನನ್ನ ಕ್ಷೇತ್ರಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೀಡಿದರು. ಈ ಕಾರಣದಿಂದಲೇ ನಾನು ಬಿಜೆಪಿ ಸೇರ್ಪಡೆಯಾಗಲು ನಿರ್ಧಾರ ಮಾಡಿದ್ದೇನೆ. ಅಲ್ಲದೆ, ಈ ಬಾರಿಯ ಈ ಚುನಾವಣೆಯಿಂದ ಮಾತ್ರವೇ ಹಿಂದೆ ಸರಿಯುವುದಾಗಿ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದರು.

ಕಳೆದ ಬಾರಿ ನಾನು ಐತಿಹಾಸಿಕವಾಗಿ ಗೆಲುವು ಸಾಧಿಸಿದರೂ ಈ ಬಾರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಆಗಿದೆ. ಮೈತ್ರಿ ಒಪ್ಪಂದದ ಪ್ರಕಾರ ಆ ಪಕ್ಷದವರಿಗೆ ಬಿಟ್ಟುಕೊಡಲಾಗಿದೆ ಎಂದು ಹೇಳಿದರು. ಅಲ್ಲದೆ, ನಾನೀಗ ಬಿಜೆಪಿ ಸೇರುತ್ತಿರುವುದರಿಂದ ಪಕ್ಷದ ನೀತಿಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನೊಳಗೆ ಚರ್ಚೆ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಾಕಷ್ಟು ಮಾರ್ಗದರ್ಶನವನ್ನು ನೀಡಿದ್ದಾರೆ. ನನಗೆ ಯಾವ ಕೆಲಸ ಆಗಬೇಕಿದ್ದರೂ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಜನರ ಸಲುವಾಗಿ ಬಿಜೆಪಿಯ ಯಾವುದೇ ಸಚಿವಾಲಯಕ್ಕೆ ಹೋದರೂ ನನ್ನ ಮನವಿಗೆ ಸ್ಪಂದಿಸಿದ್ದಾರೆ. ಆದರೆ, ಅಂಬರೀಶ್‌ ಅವರು ದಶಕಗಳ ಕಾಲ ಕಾಂಗ್ರೆಸ್‌ಗೆ ದುಡಿದರೂ ಅವರು ನಮ್ಮನ್ನು ಗೌರವಿಸಲೇ ಇಲ್ಲ. ಕಾಂಗ್ರೆಸ್‌ನಲ್ಲಿ ಅಂಬರೀಶ್‌ ಹಾಗೂ ನಮಗೆ ಅಪಮಾನ ಮಾಡಲಾಗಿದೆ. ನನನ್ನು ಬೇಡ ಎಂದ ಪಕ್ಷಕ್ಕೆ ನಾನು ಹೋಗಲಾರೆ. ಅದೇ ಕಾರಣಕ್ಕಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತ ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದ್ದರು.

ದೇಶಕ್ಕೆ ಬೇಕು ನರೇಂದ್ರ ಮೋದಿ

ಇಂದು ದೇಶಕ್ಕೆ ಉತ್ತಮ ಪ್ರಧಾನಿ ಸಿಕ್ಕಿದ್ದಾರೆ. ದೇಶ ಸಂಕಷ್ಟದ ಕಾಲದಲ್ಲಿದ್ದಾಗ ಅವರು ಅಧಿಕಾರವನ್ನು ವಹಿಸಿಕೊಂಡರು. ಆರ್ಥಿಕತೆಯಲ್ಲಿ ದೇಶವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ಅವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಂಥವರನ್ನು ನಾವು ಬೆಂಬಲಿಸಬೇಕು. ದೇಶಕ್ಕಾಗಿ ನಾವು ಮೋದಿ ಅವರನ್ನು ಆಯ್ಕೆ ಮಾಡಬೇಕು. ಅಲ್ಲದೆ, ನಾನು ಪಕ್ಷೇತರ ಸಂಸದೆಯಾಗಿದ್ದರೂ ಅವರು ನನಗೆ ಸಾಕಷ್ಟು ಗೌರವವನ್ನು ನೀಡಿದ್ದಾರೆ. ಮಂಡ್ಯದಲ್ಲಿ ಸ್ಪರ್ಧೆ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಟ್ಟರು. ಒಬ್ಬ ಪ್ರಧಾನಿಯೇ ಹೀಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಮಣಿಸಲು ಬಿಜೆಪಿ ಹೈಕಮಾಂಡ್‌ ಪ್ಲ್ಯಾನ್;‌ ಟಾರ್ಗೆಟ್‌ ಡಿಕೆಶಿ!

ಅಭಿಮಾನಿಗಳ ಬೇಸರದ ಬಗ್ಗೆ ಸುಮಲತಾ ಹೇಳಿದ್ದೇನು?

ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಕೆಲವರು ಅಸಮಾಧಾನವನ್ನು ಹೊರಹಾಕಿದರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್‌, ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ನಾನು ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮತ್ತೆ ಕೆಲವರು ಚಪ್ಪಾಳೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಅದು ನಿಮಗೆ ಕೇಳಲಿಲ್ಲವೇ? ಎಂದು ಮರು ಪ್ರಶ್ನೆಯನ್ನು ಹಾಕಿದರು. ನೋಡಿ, ಯಾವುದೇ ವಿಷಯದಲ್ಲಿಯಾದರೂ ಯಾರನ್ನೂ ನೂರಕ್ಕೆ ನೂರು ಮೆಚ್ಚಿಸಲು ಆಗುವುದಿಲ್ಲ. ಈ ವಿಷಯದಲ್ಲಿ ಕೆಲವರಿಗೆ ಈಗ ಅಸಮಾಧಾನ ಆಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಅಂಬರೀಶ್‌ ಅವರ ಅಭಿಮಾನಿಗಳು ಸದಾ ನನ್ನ ಬೆನ್ನ ಹಿಂದೆ ಇರಲಿದ್ದಾರೆ ಎಂಬ ನಂಬಿಕೆ ನನಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದರು.

Exit mobile version