ವಿಜಯಪುರ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ (Udupi Chikkamagaluru Lok Sabha constituency) ಸಂಬಂಧಪಟ್ಟಂತೆ ಟಿಕೆಟ್ ಗೊಂದಲ ಇರುವುದು ನಿಜ. ಮಾಜಿ ಸಚಿವ ಸಿ.ಟಿ. ರವಿ (CT Ravi) ಟಿಕೆಟ್ ಕೇಳಿದ್ದಾರೆ. ಅವರು ಅಪೇಕ್ಷೆ ಪಡುವುದು ತಪ್ಪಲ್ಲ. ನನ್ನ ಮೇಲೆ ಒಂದು ಗುಂಪು ಮಾತ್ರ ವಿರೋಧ ಮಾಡುತ್ತಿದೆ. ಆದರೆ, ತಮ್ಮ ಸೋಲನ್ನು ಇನ್ನೊಬ್ಬರ ಮೇಲೆ ಹೊರಿಸಬಾರದು. ಅದು ತಾಯಿಗೆ ಮಾಡಿದ ದ್ರೋಹ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅಸಮಾಧಾನವನ್ನು ಹೊರಹಾಕಿದರು. ಈ ಮೂಲಕ ಸಿ.ಟಿ. ರವಿ ವಿರುದ್ಧ ಮೊದಲ ಬಾರಿಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಬಹುದು. ಹೀಗಾಗಿ ಬೇರೆಯವರು ಟಿಕೆಟ್ ಕೇಳುತ್ತಿದ್ದಾರೆ. ನನಗೆ ಎರಡು ಬಾರಿ ಟಿಕೆಟ್ ಕೊಟ್ಟಿದ್ದಾರೆ. ಈಗ ನನ್ನ ಮೇಲೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೆಟ್ ಕೇಳಬಾರದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ನನ್ನ ವಿರುದ್ಧ ವ್ಯವಸ್ಥಿತ ಗುಂಪಿನಿಂದ ಷಡ್ಯಂತ್ರ
ಟಿಕೆಟ್ ಪಡೆಯಲು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡುತ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ. ಮಾಜಿ ಸಚಿವ ಸಿ.ಟಿ. ರವಿ ಟಿಕೆಟ್ ಕೇಳಿರುವುದು ನಿಜ. ಅವರು ಟಿಕೆಟ್‌ಗೆ ಅಪೇಕ್ಷೆಪಟ್ಟರೆ ತಪ್ಪಲ್ಲ. ಕಾರ್ಯಕರ್ತರು ನನ್ನನ್ನು ವಿರೋಧ ಮಾಡುತ್ತಿಲ್ಲ. ಒಂದು ಗುಂಪು ವಿರೋಧ ಮಾಡುತ್ತಿದೆ. ನಾನು ಹೆತ್ತ ತಾಯಿಗೆ ದ್ರೋಹ ಮಾಡಲ್ಲ, ನಾನು ಈ ಹಿಂದೆ ಸಹ ಯಾರಿಗೂ ವಿರೋಧ ಮಾಡಿಲ್ಲ. ಯಾರೇ ಆಗಲಿ ತಮ್ಮ ಸೋಲನ್ನು ಇನ್ನೊಬ್ಬರ ಮೇಲೆ ಹೊರಿಸಬಾರದು. ಅದು ತಾಯಿಗೆ ಮಾಡಿದ ದ್ರೋಹ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ. ಮತದಾರರು ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ. ನಮ್ಮ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಆಧಾರದ ಮೇಲೆ ವೋಟು ಕೇಳುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕಾಂಗ್ರೆಸ್ ಸರ್ಕಾರ ಆಸಕ್ತಿಯೇ ಇಲ್ಲ
ಹಾವೇರಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಗಲಾಟೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರವು ಕೃಷಿಕರನ್ನು ಮರೆತಿದೆ. ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಿಂದ ಸಮರ್ಪಕ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ. ಕೇಂದ್ರ ಸರ್ಕಾರವು ರೈತರ ಬೆನ್ನೆಲುಬಾಗಿ ನಿಲ್ಲಲು ರೆಡಿ ಇದೆ. ನಾವು ಕೋಲ್ಡ್ ಸ್ಟೋರೇಜ್ ಮಾಡಿಕೊಳ್ಳಲು ಒಂದು ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದೇವೆ. ಇದಕ್ಕಾಗಿ ಯಾರೂ ಸಹ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಇದ್ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ. ಗ್ಯಾರಂಟಿ ಬೆನ್ನು ಬಿದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇದೆಯಾ? ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಆಸಕ್ತಿ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಬೆಂಗಳೂರಲ್ಲಿಯೇ ಕುಡಿಯಲು ನೀರಿಲ್ಲ. ಆದರೆ, ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಸಿಎಂ ಜತೆಗೆ ಮೀಟಿಂಗ್‌ಗೆ ನಾವು ಹೋಗಿದ್ದೆವು. ಅಲ್ಲಿ ಮೀಟಿಂಗ್ ಮಾಡುತ್ತಾರೆ. ಇಲ್ಲಿ ಬಂದು ನೀರು ಬಿಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ: Lok Sabha Election 2024: ಇಂದು ರಾಜ್ಯದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಸಿಗಲಿದೆ ಟಿಕೆಟ್?
ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಹಾಗೂ ಮೈಸೂರು ಹಾಲಿ ಸಂಸದ ಪ್ರತಾಪ್ ಸಿಂಹ ಟಿಕೆಟ್ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಇದೆಲ್ಲವನ್ನೂ ಹಿರಿಯರು ತೀರ್ಮಾನ ಮಾಡುತ್ತಾರೆ. ಅಸಮಾಧಾನವನ್ನು ಶಮನ ಮಾಡುತ್ತಾರೆ. ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಸರ್ವೆ ಮಾಡಿ ಟಿಕೆಟ್ ಕೊಡುತ್ತಾರೆ. ಟಿಕೆಟ್ ಸಿಗಲಿ ಬಿಡಲಿ, ಮೋದಿ ಗೆಲ್ಲಿಸೋದು ನಮ್ಮ ಗುರಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.