ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನಾಂಕ ಘೋಷಿಸಲಾಗಿದೆ. ಕರ್ತವ್ಯ ನಿರತ ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಅಂಚೆ ಮತದಾನ (Postal Ballot)ಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಆಯಾ ಇಲಾಖೆಗಳಿಂದ ಪಟ್ಟಿ ನೀಡಲು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟು 12 ವಿವಿಧ ಇಲಾಖೆಗಳ ಸಿಬ್ಬಂದಿಗೆ ಈ ಅವಕಾಶ ಸಿಗಲಿದೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಚುನಾವಣಾ ಆಯೋಗವು 12 ವಿವಿಧ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದ್ದು, ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತ ಚಾಯಿಸಲು ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದ್ದಾರೆ. ಇಲಾಖಾವಾರು ಅಗತ್ಯ ಸೇವೆಗಳ ಗೈರು ಮತದಾರರ ಪಟ್ಟಿ ನೀಡಿದ ನಂತರ 12ಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮಾರ್ಚ್ 22ರೊಳಗೆ ಸಲ್ಲಿಸಬೇಕುʼʼ ಎಂದು ಅವರು ಸೂಚಿಸಿದ್ದಾರೆ.
ʼʼಅರ್ಹ ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರದಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಅಂಚೆ ಮತಪತ್ರಗಳನ್ನು ಅಂಚೆ ಮೂಲಕ ವಿತರಿಸುವ/ ತಲುಪಿಸುವ ವ್ಯವಸ್ಥೆ ಇಲ್ಲʼʼ ಎಂದು ತಿಳಿಸಿದ್ದಾರೆ.
ಯಾವೆಲ್ಲ ಇಲಾಖೆಗಳು?
- ವಿದ್ಯುತ್ ಇಲಾಖೆ
- ಬಿ.ಎಸ್.ಎನ್.ಎಲ್. ಇಲಾಖೆ
- ರೈಲ್ವೆ ಇಲಾಖೆ
- ದೂರದರ್ಶನ ಇಲಾಖೆ
- ಆಲ್ ಇಂಡಿಯಾ ರೇಡಿಯೋ ಇಲಾಖೆ
- ಆರೋಗ್ಯ ಇಲಾಖೆ
- ವಾಯುಯಾನ ಇಲಾಖೆ
- ಬಸ್ ಸೇವೆಗಳು(ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ)
- ಅಗ್ನಿಶಾಮಕ ಸೇವೆಗಳ ಇಲಾಖೆ
- ಭಾರತ ಚುನಾವಣಾ ಆಯೋಗದಿಂದ ಮತದಾನದ ದಿನಂದಂದು ಚುನಾವಣಾ ಕವರೇಜ್ಗಾಗಿ ಅಧಿಕೃತಗೊಂಡ ಮಾಧ್ಯಮ ವ್ಯಕ್ತಿಗಳು.
- ಸಂಚಾರ ಪೊಲೀಸ್ ಇಲಾಖೆ
- ಆಂಬ್ಯುಲೆನ್ಸ್ ಸೇವೆ.
ಚುನಾವಣೆ ದಿನಾಂಕ
ದೇಶದ ಜನರು ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಮಾರ್ಚ್ 16ರಂದು ಘೋಷಿಸಿದೆ. ಈ ಬಾರಿಯೂ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದಿನಾಂಕವನ್ನು ಘೋಷಿಸಿದರು. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದ ಮತದಾನವು ಏಪ್ರಿಲ್ 19ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ (ಏಪ್ರಿಲ್ 26 ಮತ್ತು ಮೇ 7) ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ.
ಇದನ್ನೂ ಓದಿ: Assembly Elections: ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ; ಫಲಿತಾಂಶ ದಿನಾಂಕ ಬದಲು
97 ಕೋಟಿ ಮತದಾರರು ಈ ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತೇವೆ. ಇದುವರೆಗೆ 100 ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದು ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ